ಮಕ್ಕಳ 'ಆನ್‍ಲೈನ್ ಶಿಕ್ಷಣ'ಕ್ಕಾಗಿ ತಾಳಿ ಅಡವಿಟ್ಟು ಟಿವಿ ಖರೀದಿಸಿದ ಮಹಿಳೆ !
ಗದಗ, ಜು.30: ಕೊರೋನ ಸೋಂಕಿನ ಕಾರಣದಿಂದ ಮನೆಯಲ್ಲಿಯೇ ಆನ್‍ಲೈನ್ ಶಿಕ್ಷಣಕ್ಕೆ ರಾಜ್ಯ ಸರಕಾರ ಒತ್ತು ನೀಡಿರುವ ಹಿನ್ನೆಲೆ ತನ್ನ ಮಕ್ಕಳ ಶಿಕ್ಷಣಕ್ಕಾಗಿ ತಾಯಿಯೊಬ್ಬಾಕೆ ತಾಳಿ ಅಡವಿಟ್ಟು ಟಿವಿ ಖರೀದಿ ಮಾಡಿರುವ ಮನ ಕಲಕುವ ಘಟನೆ ವರದಿಯಾಗಿದೆ.
ಗದಗ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೇರ್ ನಾಗನೂರ ಗ್ರಾಮದ ಕಸ್ತೂರಿ ಎಂಬ ಮಹಿಳೆ, ತನ್ನಿಬ್ಬರ ಮಕ್ಕಳ ಶಿಕ್ಷಣಕ್ಕಾಗಿ ತಾಳಿ ಅಡವಿಟ್ಟು ಮಕ್ಕಳ 'ಆನ್‍ಲೈನ್ ಶಿಕ್ಷಣ'ಕ್ಕೆ ಟಿವಿ ಕೊಡಿಸಿರುವುದಾಗಿ ಹೇಳಲಾಗುತ್ತಿದೆ.
8ನೆ ಮತ್ತು 7ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ತಮ್ಮ ಮಕ್ಕಳಿಗೆ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಪಾಠವನ್ನು ಕೇಳಲು ಶಿಕ್ಷಕರು ಪ್ರತಿದಿನ ಕರೆ ಮಾಡಿ ಟಿವಿ ನೋಡಿ ಎಂದು ಒತ್ತಡ ಹಾಕುತ್ತಿದ್ದರು. ಆದರೆ, ಮನೆಯಲ್ಲಿ ಟಿವಿ ಇಲ್ಲದ ಕಾರಣ, ಪಾಠ ಕೇಳಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟೇ ಅಲ್ಲದೆ, ಜೊತೆಗೆ ಶಿಕ್ಷಕರು ಕೇಳಿದ ಪ್ರಶ್ನೆಗೆ ಉತ್ತರಿಸಲು ಮಕ್ಕಳಿಗೆ ಸಾಧ್ಯವಾಗುತ್ತಿರಲಿಲ್ಲ ಎನ್ನಲಾಗಿದೆ.
ಮಕ್ಕಳ ವಿದ್ಯಾಭ್ಯಾಸ ಹದಗೆಡುತ್ತೆ ಎಂದು ತಾಯಿ ಟಿವಿಯೊಂದನ್ನು ಖರೀದಿಸಲು ನಿರ್ಧರಿಸಿ, 20 ಸಾವಿರ ರೂಪಾಯಿಗೆ ತನ್ನ ಕೊರಳಲ್ಲಿದ್ದ ಚಿನ್ನದ ತಾಳಿ ಅಡವಿಟ್ಟು, 14 ಸಾವಿರ ರೂ.ಗೆ ಟಿವಿ ಖರೀದಿ ಮಾಡಿದ್ದಾರೆ. ಇನ್ನು, ಕಸ್ತೂರಿ ಅವರ ಪತಿ ಕೂಲಿ ಕೆಲಸ ಮಾಡುತ್ತಿದ್ದು, ಇಬ್ಬರು ಕೂಲಿ ಮಾಡಿಯೇ ಕುಟುಂಬ ಸಾಗಿಸುತ್ತಿದ್ದಾರೆ.