ಕೊರೋನ ವೈರಸ್: ಬೆಂಗಳೂರಿನಲ್ಲಿ ಸಾವಿರ ದಾಟಿದ ಸಾವಿನ ಸಂಖ್ಯೆ

Update: 2020-07-30 16:50 GMT

ಬೆಂಗಳೂರು, ಜು.30: ನಗರದಲ್ಲಿ ಗುರುವಾರ ಒಂದೇ ದಿನ 2,233 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಸೋಂಕಿಗೆ 22 ಜನರು ಮೃತರಾಗಿದ್ದಾರೆ. ಇದರಿಂದ ನಗರದಲ್ಲಿ ಒಟ್ಟು ಸಾವಿನ ಸಂಖ್ಯೆ 1,009ಕ್ಕೆ ಏರಿಕೆಯಾಗಿದೆ.

ನಗರದಲ್ಲಿ ಒಟ್ಟು 53,324 ಕೊರೋನ ಸೋಂಕಿತರು ಧೃಢಪಟ್ಟಿದ್ದು, ಗುರುವಾರ 1,912 ಮಂದಿ ಬಿಡುಗಡೆಯಾಗಿದ್ದಾರೆ. ನಗರದಲ್ಲಿ ಒಟ್ಟು 15,791 ಜನರು ಇಲ್ಲಿಯವರೆಗೆ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 36,523 ಜನ ಸಕ್ರಿಯ ಕೊರೋನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು 48,905 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.

ರೋಗಿಯ ಜತೆ ಅಧಿಕಾರಿಗಳ ಚೆಲ್ಲಾಟ; ಆರೋಪ

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯನ್ನು ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಬಿಬಿಎಂಪಿ ಅಧಿಕಾರಿಗಳು ರೋಗಿಯ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ರೋಗಿಯ ಕುಟುಂಬಸ್ಥರು ಆರೋಪಿಸಿದ್ದಾರೆ.

ರಾಜಾಜಿನಗರದ ಲಕ್ಷ್ಮಿನಾರಾಯಣಪುರದ ನಿವಾಸಿಯೊಬ್ಬರಿಗೆ ರವಿವಾರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಕೂಡಲೇ ಮನೆಯವರು ಆಕೆಯನ್ನು ಮಲ್ಲೇಶ್ವರಂನಲ್ಲಿರುವ ಆಸ್ಪತ್ರೆಗೆ ಸೇರಿಸಿದ್ದರು. ಅಲ್ಲಿ ಸ್ವ್ಯಾಬ್ ತೆಗೆದು ರಿಪೋರ್ಟ್ ಗೆ ಕಳುಹಿಸಲಾಗಿತ್ತು. ಬುಧವಾರ ರಾತ್ರಿ ಬಿಬಿಎಂಪಿಯವರು ರೋಗಿಯ ಕುಟುಂಬಸ್ಥರಿಗೆ ಕರೆ ಮಾಡಿ ಅವರಿಗೆ ಕೊರೋನ ದೃಢವಾಗಿದೆ. ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿ, ಜಯನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಐಸಿಯು, ವೆಂಟಿಲೇಟರ್ ಬೆಡ್ ಸಿದ್ಧತೆ ಮಾಡಿದ್ದೀವಿ. ಬೇಗ ಹೋಗಿ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.

ನಂತರ ಕುಟುಂಬಸ್ಥರು ರಾತ್ರಿಯೇ ಸೋಂಕಿತೆಯನ್ನು ಡಿಸ್‍ಚಾರ್ಜ್ ಮಾಡಿಕೊಂಡು ಜಯನಗರದ ಸಾರ್ವಜನಿಕ ಆಸ್ಪತ್ರೆಗೆ ಹೋಗಿದ್ದಾರೆ. ರೋಗಿಗೆ ವೆಂಟಿಲೇಟರ್ ಅವಶ್ಯಕತೆಯಿದ್ದರೂ ಐಸಿಯು ಬೆಡ್ ಕೊಡದೆ ಸತಾಯಿಸಿದ್ದಾರೆ. ಮಲ್ಲೇಶ್ವರಂ ಆಸ್ಪತ್ರೆಯಲ್ಲಿ 2 ದಿನಕ್ಕೆ 2 ಲಕ್ಷ ರೂ. ಬಿಲ್ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಜಂಟಿ ಆಯುಕ್ತರಿಗೆ ಕೊರೋನ

ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಚಿದಾನಂದ್ ಅವರಿಗೆ ಕೊರೋನ ಸೋಂಕು ತಗಲಿದೆ. ಪಶ್ಚಿಮ ವಲಯದ ಉಸ್ತುವಾರಿ, ಸೋಂಕಿತರಿಗೆ ಆಂಬುಲೆನ್ಸ್ ವ್ಯವಸ್ಥೆ, ಹೋಮ್ ಐಸೋಲೇಷನ್ ಮಾಡುವ ಕೆಲಸಗಳು ಚಿದಾನಂದ್ ನೇತೃತ್ವದಲ್ಲೇ ನಡೆಯುತ್ತಿತ್ತು. ಹೀಗಾಗಿ ವಲಯದಲ್ಲಿ ಓಡಾಡಿರುವ ಹಿನ್ನೆಲೆ ಕೊರೋನ ಬಂದಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News