ಈದ್ ನಮಾಝ್: ಸರಕಾರದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ- ಝಮೀರ್ ಅಹ್ಮದ್ ಖಾನ್

Update: 2020-07-30 18:08 GMT

ಬೆಂಗಳೂರು, ಜು.30: ಈದುಲ್ ಅಝ್ ಹಾ(ಬಕ್ರೀದ್) ನಮಾಝ್‍ಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ನೀಡಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸಮುದಾಯಕ್ಕೆ ಕರೆ ನೀಡಿರುವ ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್, ಈ ಬಾರಿ ಹಬ್ಬದ ಪ್ರಯುಕ್ತ ಮಸೀದಿಗಳಲ್ಲಿ ನಮಾಝ್ ನಿರ್ವಹಿಸಲು ಅವಕಾಶ ಕಲ್ಪಿಸಿರುವುದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಮಝಾನ್ ಸಂದರ್ಭದಲ್ಲಿ ನಮಗೆ ಮಸೀದಿ ಅಥವಾ ಈದ್ಗಾದಲ್ಲಿ ನಮಾಝ್ ನಿರ್ವಹಿಸಲು ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ಮಸೀದಿಗಳಲ್ಲಿ ನಮಾಝ್ ಮಾಡಲು ಸರಕಾರ ಅವಕಾಶ ಕಲ್ಪಿಸಿದೆ. ಸುರಕ್ಷಿತ ಅಂತರವನ್ನು ಕಾಯ್ದುಕೊಂಡು, ಮಾಸ್ಕ್ ಧರಿಸಿಕೊಂಡು, ತಮ್ಮ ಜಾನಿಮಾಝ್(ಪ್ರಾರ್ಥನಾ ಚಾಪೆ) ಅನ್ನು ತೆಗೆದುಕೊಂಡು ಹೋಗಿ ನಮಾಝ್ ನಿರ್ವಹಿಸುವಂತೆ ಮನವಿ ಅವರು ಮಾಡಿದ್ದಾರೆ.

ಮಸೀದಿಯಲ್ಲಿ 50 ಜನರಿಗೆ ಸೀಮಿತವಾಗಿ ನಮಾಝ್ ನಿರ್ವಹಿಸುವಂತೆ ಸರಕಾರ ಆದೇಶ ಹೊರಡಿಸಿತ್ತು. ಬೆಂಗಳೂರಿನ ಕೆಲವು ಪ್ರಮುಖ ಮಸೀದಿಗಳಲ್ಲಿ ಸಾವಿರಾರು ಮಂದಿ ಶುಕ್ರವಾರದ ನಮಾಝ್‍ಗೆ ಬರುತ್ತಾರೆ. ಆದುದರಿಂದ, 50 ಮಂದಿಗೆ ಸೀಮಿತಗೊಳಿಸಿ ಆದೇಶ ಹೊರಡಿಸಿರುವುದನ್ನು ಹಿಂಪಡೆಯುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಇಬ್ರಾಹಿಮ್ ಅವರಿಗೆ ಮನವಿ ಮಾಡಿದಾಗ ಅದಕ್ಕೆ ಪೂರಕವಾಗಿ ಸ್ಪಂದಿಸಿ ಆ ಆದೇಶವನ್ನು ಹಿಂಪಡೆದಿದ್ದಾರೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ರಾಜ್ಯದಲ್ಲಿ 1.12 ಲಕ್ಷ ಸೋಂಕಿತರಿದ್ದು, ಈ ಪೈಕಿ ಬೆಂಗಳೂರಿನಲ್ಲಿ 60 ಸಾವಿರ ಮಂದಿ ಇದ್ದಾರೆ. 2200 ಮಂದಿ ಸಾವನ್ನಪ್ಪಿದ್ದು, ಈ ಪೈಕಿ ಬೆಂಗಳೂರಿನಲ್ಲಿ 1000 ಮಂದಿ ಸಾವನ್ನಪ್ಪಿದ್ದಾರೆ. ಆದುದರಿಂದ, ಈದ್ ನಮಾಝ್ ಸಂದರ್ಭದಲ್ಲಿ 12 ವರ್ಷದೊಳಗಿನ ಮಕ್ಕಳನ್ನು ಹಾಗೂ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ದಯವಿಟ್ಟು ಮಸೀದಿಗಳಿಗೆ ಹೋಗಬೇಡಿ ಎಂದು ಝಮೀರ್ ಅಹ್ಮದ್ ಖಾನ್ ಮನವಿ ಮಾಡಿದ್ದಾರೆ.

ಈಗಿರುವ ಪರಿಸ್ಥಿತಿಯನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ಮುಂದುವರಿಯಬೇಕಿದೆ. ಇಡೀ ವಿಶ್ವದಲ್ಲಿ ಈ ಕೊರೋನ ಮಹಾಮಾರಿ ಮಾನವ ಕುಲವನ್ನು ಸಮಸ್ಯೆಗೆ ಸಿಲುಕಿಸಿದೆ. ರಾಜ್ಯ ಸರಕಾರ ಕೇವಲ ನಮಗಷ್ಟೇ ಅಲ್ಲ, ಹಿಂದೂಗಳ ಹಬ್ಬ ಹರಿದಿನಗಳ ಆಚರಣೆಗೂ ಈ ಮಹಾಮಾರಿಯಿಂದ ಕಡಿವಾಣ ಹಾಕಿರುವುದನ್ನು ನಾವು ಮರೆಯಬಾರದು ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News