ಬೆಡ್ ಸಿಗದೇ ಬಾಣಂತಿ ಮೃತ್ಯು ಆರೋಪ

Update: 2020-07-31 08:26 GMT

ಬೆಂಗಳೂರು, ಜು.31: ಕೊರೋನ ಸೋಂಕು ಸಂಬಂಧ ಆಸ್ಪತ್ರೆಗಳ ವರ್ತನೆಗೆ  ದಿನೇ‌ದಿನೇ ಹೆಚ್ಚಾಗುತ್ತಿರುವ ಆಕ್ರೋಶದ ಮಧ್ಯೆ, ಬೆಡ್(ಹಾಸಿಗೆ) ದೊರೆಯದೆ, ಬಾಣಂತಿ ಮೃತಪಟ್ಟು 6 ದಿನದ ಮಗುವೊಂದು ಅನಾಥವಾಗಿರುವ ಹೃದಾಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

ನಗರದ  ನಾಗರಬಾವಿ ನಿವಾಸಿ ಮಹಿಳೆಗೆ ಹೆರಿಗೆಯಾದ ನಂತರ ಕೊರೋನ ಸೋಂಕು ದೃಢಪಟ್ಟಿತ್ತು‌. ಈ ಹಿನ್ನೆಲೆಯಲ್ಲಿ ಕುಟುಂಬದವರು ಚಿಕಿತ್ಸೆಗಾಗಿ ತಡರಾತ್ರಿ ಬಿಜಿಎಸ್ ಕೆಂಗೇರಿ, ಎಂಎಸ್ ರಾಮಯ್ಯ, ಬೌರಿಂಗ್ ಆಸ್ಪತ್ರೆ,ಸಪ್ತಗಿರಿ, ವಿಕ್ರಂ, ನಾರಾಯಣ ಹೃದಾಯಲಯ ಹೀಗೆ ಒಟ್ಟು 12 ಆಸ್ಪತ್ರೆಗಳಿಗೆ ತೆರಳಿದರೂ, ಆಕೆಯನ್ನು ದಾಖಲಿಸಿಕೊಳ್ಳಲು ಮುಂದಾಗಿಲ್ಲ ಎಂದು ಹೇಳಲಾಗುತ್ತಿದೆ.

ತದನಂತರ, ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಅನ್ನು ಸಂಪರ್ಕಿಸಿದ ರೋಗಿಯ ಸಂಬಂಧಿಕರು, ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ಆ ಮೇಲೆ ಸೌಮ್ಯಾ ರೆಡ್ಡಿ ಟ್ವಿಟರ್​​​​ನಲ್ಲಿ ಟ್ವೀಟ್ ಮಾಡಿದ್ದಾರೆ.

ಕೊನೆಗೆ ನಾರಾಯಣ ಆಸ್ಪತ್ರೆಯಲ್ಲಿ  ಮಹಿಳೆಯನ್ನು ದಾಖಲಿಸಿದ್ದಾರೆ. ಆದರೆ, ಇಂದು ಮುಂಜಾನೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು, ಇದಕ್ಕೆ ಸೂಕ್ತ ಸಮಯಕ್ಕೆ ಬೆಡ್ ಸಿಗದೆ, ಇರುವುದೇ ಪ್ರಮುಖ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮತ್ತೊಂದೆಡೆ ತಾಯಿ ಸಾವನ್ನಪ್ಪಿರುವ ಕಾರಣ 6 ದಿನದ ಮಗು ಅನಾಥವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News