ಆ್ಯಪ್ ನಿರ್ಬಂಧದ ಬಳಿಕ ಚೀನಾಗೆ ಮತ್ತೊಂದು ಕಹಿ ಸುದ್ದಿ ನೀಡಿದ ಕೇಂದ್ರ ಸರಕಾರ

Update: 2020-07-31 14:22 GMT

ನವದೆಹಲಿ: ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ ಸರಕಾರ ಇದೀಗ ಚೀನಾದಿಂದ ಬಣ್ಣದ ಟೆಲಿವಿಷನ್‍ ಗಳ ಆಮದಿಗೆ ನಿರ್ಬಂಧಗಳನ್ನು ಹೇರಿದೆ.

ಚೀನಾ ಜತೆಗೆ ಲಡಾಖ್‍ನಲ್ಲಿ ಕಳೆದ ತಿಂಗಳು ನಡೆದ ಸಂಘರ್ಷದ ನಂತರ  ಭಾರತೀಯ ಯೋಜನೆಗಳಿಗೆ ಚೀನೀ ಸಂಸ್ಥೆಗಳು ಬಿಡ್ ಸಲ್ಲಿಸುವುದಕ್ಕೆ ನಿರ್ಬಂಧ ಹಾಗೂ ಹಲವಾರು ಚೀನೀ ಆ್ಯಪ್‍ ಗಳಿಗೆ ನಿರ್ಬಂಧದ ನಂತರ ಇದೀಗ ಸರಕಾರ ಇನ್ನೊಂದು ಕ್ರಮ ಕೈಗೊಂಡು ಚೀನಾಗೆ ಆಘಾತ ನೀಡಿದೆ.

ಭಾರತದ ವಿದೇಶ ವ್ಯಾಪಾರ ಮಹಾನಿರ್ದೇಶನಾಲಯ ಗುರುವಾರ ಸಂಜೆ ಹೊರಡಿಸಿದ ಅಧಿಸೂಚನೆಯಲ್ಲಿ ಕಲರ್ ಟಿವಿ ಆಮದು ನೀತಿಗೆ ತಿದ್ದುಪಡಿ ತರಲಾಗಿದ್ದು  ಅದನ್ನು ನಿರ್ಬಂಧ ರಹಿತದಿಂದ ನಿರ್ಬಂಧಿತ ವಿಭಾಗಕ್ಕೆ ಸೇರಿಸಲಾಗಿದೆ.

ಈ ಕ್ರಮದಿಂದಾಗಿ ಕಲರ್ ಟಿವಿ ಆಮದು ಮಾಡುವವರು ಸರಕಾರದಿಂದ ಆಮದು ಪರವಾನಿಗೆ ಪಡೆಯಬೇಕಾಗುತ್ತದೆ. ಇದರ ಮುಖ್ಯ ಉದ್ದೇಶ ಚೀನೀ ನಿರ್ಮಿತ ಟಿವಿಗಳಿಗೆ ಕಡಿವಾಣ ಹಾಕುವುದಾಗಿದೆ ಎಂದು ತಮ್ಮ ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದ ಟಿವಿ ಉದ್ಯಮದ ಮೌಲ್ಯ ರೂ 15,000 ಕೋಟಿಯಷ್ಟಾಗಿದ್ದರೆ ಶೇ 36ರಷ್ಟು ಟಿವಿಗಳನ್ನು ಚೀನಾ ಮತ್ತು  ಆಗ್ನೇಯ ಏಷ್ಯಾದ ಇತರ  ದೇಶಗಳಿಂದ ಆಮದು ಮಾಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News