ಸಚಿವ ಸಂಪುಟ ವಿಸ್ತರಣೆಗೆ ದಿನಗಣನೆ: ಆಕಾಂಕ್ಷಿಗಳ ಲಾಬಿ, ಗುಟ್ಟು ಬಿಡದ ಬಿಎಸ್‍ವೈ

Update: 2020-08-01 13:20 GMT

ಬೆಂಗಳೂರು, ಆ. 1: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರದ ಸಚಿವ ಸಂಪುಟ ವಿಸ್ತರಣೆಗೆ ದಿನಗಣನೆ ಆರಂಭವಾಗಿದೆ. ಇದರ ಬೆನ್ನಲ್ಲೆ ಸಂಪುಟಕ್ಕೆ ಸೇರ್ಪಡೆಯಾಗಬೇಕೆಂಬ ಆಕಾಂಕ್ಷಿಗಳ ಪಡೆಯೇ ಬಿಜೆಪಿಯಲ್ಲಿದ್ದು ದೊಡ್ಡಮಟ್ಟದ ಲಾಬಿಯೂ ಶುರುವಾಗಿದೆ. ಆದರೆ, ಸಂಪುಟ ವಿಸ್ತರಣೆಯಾದರೆ ಅಸಮಾಧಾನ ಭುಗಿಲೇಳುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಯಾರೊಬ್ಬರಿಗೂ ಈ ಬಗ್ಗೆ ಗುಟ್ಟು ಬಿಡುತ್ತಿಲ್ಲ.

ನಿನ್ನೆಯಷ್ಟೇ ರಾಜ್ಯಪಾಲ ವಜೂಭಾಯಿ ವಾಲಾ ಅವರನ್ನು ಖುದ್ದು ಭೇಟಿ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಖಾಲಿ ಇರುವ ಆರು ಸ್ಥಾನಗಳ ಭರ್ತಿಗೆ ದಿನಾಂಕ ನಿಗದಿ ಸಂಬಂಧ ಸಮಾಲೋಚನೆ ನಡೆಸಿದ್ದಾರೆ. ಈ ಮಧ್ಯೆ ಕೆಲವರನ್ನು ಸಂಪುಟದಿಂದ ಕೈಬಿಟ್ಟು ಹೊಸಬರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಸಂಪುಟ ಪುನರ್ ರಚನೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಆಗಸ್ಟ್ 15ರ ಒಳಗೆ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಗಳಿದ್ದು, ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯರಾಗಿ ನೇಮಕಗೊಂಡಿರುವ ಮಾಜಿ ಸಚಿವರಾದ ಎಚ್.ವಿಶ್ವನಾಥ್, ಆರ್.ಶಂಕರ್ ಹಾಗೂ ಎಂಟಿಬಿ ನಾಗರಾಜ್ ಸಹಿತ ನಾಲ್ಕೈದು ಮಂದಿಗೆ ಸಂಪುಟ ಸೇರ್ಪಡೆ ಅದೃಷ್ಟ ಖುಲಾಯಿಸಲಿದೆ. ಈ ನಡುವೆ ಸಿ.ಪಿ.ಯೋಗೇಶ್ವರ್, ಜಿ.ಎಚ್.ತಿಪ್ಪಾರೆಡ್ಡಿ, ಬಸನಗೌಡ ಪಾಟೀಲ್ ಯತ್ನಾಳ್, ಮುರುಗೇಶ್ ನಿರಾಣಿ, ನೆಹರೂ ಓಲೆಕಾರ್, ಸಿದ್ಧು ಸವದಿ ಸೇರಿದಂತೆ ಇನ್ನೂ ಆರೇಳು ಮಂದಿ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ತೀವ್ರ ತಲೆನೋವು ತಂದಿಟ್ಟಿದೆ.

ರಾಜ್ಯಪಾಲರು ಚಿಕಿತ್ಸೆ ನಿಮಿತ್ತ ಒಂದು ತಿಂಗಳ ಕಾಲ ರಜೆ ಮೇಲೆ ತೆರಳುವ ಸಾಧ್ಯತೆ ಇದೆ. ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ನೂತನ ಸಚಿವರಿಗೆ ಪ್ರಮಾಣ ವಚನ ದಿನದಂದು ರಾಜ್ಯಪಾಲರು ಇರಬೇಕು. ಹೀಗಾಗಿ ಪೂರ್ವಭಾವಿಯಾಗಿ ರಾಜ್ಯಪಾಲರಿಗೆ ಮಾಹಿತಿ ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ನಿನ್ನೆ ರಾಜಭವನಕ್ಕೆ ತೆರಳಿದ್ದರು ಎಂದು ಗೊತ್ತಾಗಿದೆ.

ಕೆಲದಿನಗಳ ಹಿಂದೆಯಷ್ಟೇ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳಿಗೆ 20 ಮಂದಿ ಶಾಸಕರನ್ನು ನೇಮಕ ಮಾಡಿದರೆ, ನಾಲ್ಕೈದು ಮಂದಿಯನ್ನು ಹೊರತುಪಡಿಸಿದರೆ ಈವರೆಗೂ ಆ ಸ್ಥಾನಗಳನ್ನು ಬಹುತೇಕ ಶಾಸಕರು ಒಪ್ಪಿಕೊಂಡಿಲ್ಲ. ಇದೇ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಮಾಡಿದರೂ ಅಸಮಾಧಾನ ಭುಗಿಲೇಳುವ ಸಾಧ್ಯತೆ ಹಿನ್ನೆಲೆಯಲ್ಲಿ ಎಲ್ಲವೂ ಗೌಪ್ಯವಾಗಿಯೇ ನಡೆಯುತ್ತಿದೆ.

ಕೊರೋನ ಸಾಂಕ್ರಾಮಿಕ ಸೋಂಕಿನ ಸ್ಥಿತಿಗತಿ, ಸೋಂಕು ನಿಯಂತ್ರಣ ಮತ್ತು ಚಿಕಿತ್ಸೆಗೆ ರಾಜ್ಯ ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಮಾಹಿತಿ ನೀಡಲಾಗಿದೆ'

-ಯಡಿಯೂರಪ್ಪ, ಮುಖ್ಯಮಂತ್ರಿ

ಸಮಸ್ತ ಮುಸ್ಲಿಂ ಬಂಧುಗಳಿಗೆ ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು. ತ್ಯಾಗ ಬಲಿದಾನಗಳ ಸಂಕೇತವಾಗಿರುವ ಈದ್ ಹಬ್ಬವು ಸುಖ ಸಂತೋಷಗಳನ್ನು ಹೊತ್ತು ತರಲಿ ಎಂದು ಪ್ರಾರ್ಥಿಸುತ್ತೇನೆ. ಕೋವಿಡ್ ಸಂದರ್ಭ ಇರುವುದರಿಂದ ಎಲ್ಲರೂ ಮನೆಯಲ್ಲಿಯೇ ಹಬ್ಬವನ್ನು ಆಚರಿಸಿ, ಎಲ್ಲ ಮುನ್ನಚ್ಚರಿಕೆ, ಸುರಕ್ಷತಾ ಕ್ರಮಗಳನ್ನು ಪಾಲಿಸಿ ಎಂದು ಕೋರುತ್ತೇನೆ'

-ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News