ಬೆಂಗಳೂರಿನ ನೂತನ ಕಮಿಷನರ್ ಆಗಿ ಕಮಲ್ ಪಂತ್ ಅಧಿಕಾರ ಸ್ವೀಕಾರ

Update: 2020-08-01 13:22 GMT

ಬೆಂಗಳೂರು, ಆ.1: ಸಮಾಜದಲ್ಲಿ ಅನಾರೋಗ್ಯ ಸೃಷ್ಟಿಸುತ್ತಿರುವ ಮಾದಕ ವಸ್ತುಗಳ ಮಾರಾಟಗಾರರ ಜಾಲವನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಪರಾಧ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದು ನೂತನ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ನಗರದ ಇನ್ಫೆಂಟ್ರಿ ರಸ್ತೆಯಲ್ಲಿರುವ ಕಚೇರಿಯಲ್ಲಿ ನಿರ್ಗಮಿತ ಕಮಿಷನರ್ ಭಾಸ್ಕರ್ ರಾವ್ ಅವರು ಕಮಲ್ ಪಂತ್ ಅವರಿಗೆ ಬ್ಯಾಟನ್ ನೀಡಿ ಅಧಿಕಾರ ಹಸ್ತಾಂತರ ಮಾಡಿದರು. ಈ ವೇಳೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಮಲ್ ಪಂತ್ ಅವರು, ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ, ಮಾದಕ ವಸ್ತುಗಳ ಮಾರಾಟ ಹೆಚ್ಚಾಗುತ್ತಿದೆ. ಇದರಿಂದ, ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಇದನ್ನು ತಡೆಗಟ್ಟಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಗರದ ಕಾನೂನು ಸುವ್ಯವಸ್ಥೆ ಹಾಗೂ ಆಸ್ತಿ ರಕ್ಷಣೆ ಪೊಲೀಸರ ಜವಾಬ್ದಾರಿ ಆಗಿದ್ದು, ಸಾರ್ವಜನಿಕರೂ ನಮ್ಮೊಂದಿಗೆ ಕೈಜೋಡಿಸಬೇಕು. ಜೊತೆಗೆ ಹಿರಿಯರು, ಮಹಿಳೆಯರು, ಮಕ್ಕಳ ರಕ್ಷಣೆಗೆ ಒತ್ತು ನೀಡುತ್ತೇವೆ ಎಂದು ತಿಳಿಸಿದರು.

ಜನರ ಸಮಸ್ಯೆಗಳಿಗೆ ಸ್ಪಂದಿಸಲು ವಿಭಾಗೀಯ ಕಚೇರಿ ಮತ್ತು ಡಿಸಿಪಿ ಕಚೇರಿಗಳಿಗೆ ತಿಂಗಳಿಗೊಮ್ಮೆ ಭೇಟಿ ನೀಡುತ್ತೇನೆ. ಇಡೀ ದಿನ ಅಲ್ಲೇ ಇದ್ದು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುತ್ತೇನೆ. ರಾಜ್ಯ ಸರಕಾರ ಕೂಡ ಬೆಂಗಳೂರಿನ ಪೊಲೀಸ್ ಆಯುಕ್ತ ಎಂಬ ಹೆಮ್ಮೆಯ ಜವಾಬ್ದಾರಿ ನೀಡಿದೆ. ಈ ಹುದ್ದೆಯಲ್ಲಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತೇನೆ ಎಂದು ತಿಳಿಸಿದರು.

ಕೊರೋನ ತಡೆಗಟ್ಟುವಲ್ಲಿ ನಗರ ಪೊಲೀಸರು ಹಗಲಿರುಳೆನ್ನದೆ ಶ್ರಮಿಸಿದ್ದಾರೆ. ಕೊರೋನದಿಂದ ಸಾವನ್ನಪ್ಪಿದವರ ಆತ್ಮಕ್ಕೆ ಶಾಂತಿ ಸಿಗಲಿ, ಸೋಂಕು ತಗಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು.

ಹಿಂದಿನ ಆಯುಕ್ತರು ಜಾರಿಗೆ ತಂದಿರುವ ಎಲ್ಲ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ಇನ್ನು ಮುಂದೆಯೂ ಉತ್ತಮ ಕೆಲಸಗಳಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ಜೊತೆಗೆ ಆ.5ರ ಬಳಿಕ ಲಾಕ್‍ಡೌನ್ ಮತ್ತಷ್ಟು ಸಡಿಲಗೊಳ್ಳಲಿದ್ದು, ನಮ್ಮ ಮೇಲೆ ಮತ್ತಷ್ಟು ಜವಾಬ್ದಾರಿ ಹೆಚ್ಚಲಿದೆ ಎಂದು 1990ರ ಬ್ಯಾಚ್‍ನ ಅಧಿಕಾರಿ ಕಮಲ್‍ ಪಂತ್ ಹೇಳಿದರು.

ಈ ಸಂದರ್ಭದಲ್ಲಿ ನಗರ ಹೆಚ್ಚುವರಿ ಆಯುಕ್ತರಾದ ಹೇಮಂತ್ ನಿಂಬಾಳ್ಕರ್, ಸೌಮೇಂದು ಮುಖರ್ಜಿ, ಮುರುಗನ್, ಜಂಟಿ ಪೊಲೀಸ್ ಆಯುಕ್ತರಾದ ರವಿಕಾಂತೇಗೌಡ, ಸಂದೀಪ್ ಪಾಟೀಲ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News