ಬೆಂಗಳೂರಿನಲ್ಲಿ ಮತ್ತೆ 1,852 ಮಂದಿಗೆ ಕೋವಿಡ್ ದೃಢ: 27 ಮಂದಿ ಮೃತ್ಯು

Update: 2020-08-01 16:29 GMT

ಬೆಂಗಳೂರು, ಆ.1: ನಗರದಲ್ಲಿ ಶನಿವಾರ ಒಂದೇ ದಿನ 1,852 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಸೋಂಕಿಗೆ 27 ಜನರು ಮೃತರಾಗಿದ್ದಾರೆ.

ನಗರದಲ್ಲಿ ಒಟ್ಟು 57,396 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಇಲ್ಲಿಯವರೆಗೆ ನಗರದಲ್ಲಿ 1,056 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟು 18,579 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 37,760 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯದಲ್ಲಿ ಒಟ್ಟು 53,847 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.

ಬೀದಿ ಬದಿ ವ್ಯಾಪಾರಿಗಳಿಗೆ ರ‍್ಯಾಪಿಡ್ ಟೆಸ್ಟ್: ನಗರದಲ್ಲಿ ಬೀದಿ ಬದಿ ವ್ಯಾಪಾರ ಮಾಡುವವರಿಗೆ ರ‍್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ನಡೆಸಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ. ಸಾಲುಸಾಲು ಹಬ್ಬಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಜನರು ಖರೀದಿಗಾಗಿ ಮಾರುಕಟ್ಟೆಗಳಿಗೆ ಭೇಟಿಕೊಡುತ್ತಾರೆ. ಹೀಗಾಗಿ, ಸಾರ್ವಜನಿಕರ ಹಿತದೃಷ್ಟಿಯಿಂದ ನಗರದ ತರಕಾರಿ, ಹಣ್ಣು ಮತ್ತು ಹೂವಿನ ವ್ಯಾಪಾರ ಸೇರಿದಂತೆ ಬೀದಿ ಬದಿ ವ್ಯಾಪಾರ ನಡೆಸುವ ಎಲ್ಲರಿಗೂ ರ‍್ಯಾಪಿಡ್ ಟೆಸ್ಟ್ ಮಾಡಲು ಬಿಬಿಎಂಪಿ ನಿರ್ಧರಿಸಿದೆ.

62 ಮಂದಿ ಪೌರಕಾರ್ಮಿಕರಿಗೆ ಕೊರೋನ

ಬಿಬಿಎಂಪಿಯ 62 ಪೌರ ಕಾರ್ಮಿಕರಿಗೆ ಕೊರೋನ ಸೋಂಕು ಇರುವುದು ದೃಢವಾಗಿದ್ದು, ಇದರಲ್ಲಿ ಹೆಚ್ಚಿನವರು 50 ವರ್ಷ ಮೇಲ್ಪಟ್ಟವರು ಎಂದು ತಿಳಿದುಬಂದಿದೆ. ಈಗಾಗಲೇ 3,362 ಪೌರ ಕಾರ್ಮಿಕರನ್ನು ಕೊರೋನ ಪರೀಕ್ಷಗೆ ಒಳಪಡಿಸಲಾಗಿದ್ದು, ಇವರಲ್ಲಿ 62 ಮಂದಿಗೆ ಕೊರೋನ ಸೋಂಕು ಇರುವುದು ದೃಢವಾಗಿದೆ. 62ರಲ್ಲಿ 15 ಮಂದಿ ಆಟೋ, ಟಿಪ್ಪರ್ ಚಾಲಕರು ಎಂದು ತಿಳಿದು ಬಂದಿದೆ.

ಕಂಟೈನ್ಮೆಂಟ್ ಝೋನ್ 13,238ಕ್ಕೆ ಏರಿಕೆ

ನಗರದಲ್ಲಿ ಶನಿವಾರ ಹೊಸದಾಗಿ 570 ಕಂಟೈನ್‍ಮೆಂಟ್ ಝೋನ್ ಪ್ರದೇಶಗಳನ್ನು ಗುರುತಿಸಲಾಗಿದೆ. ಈ ಮೂಲಕ ನಗರದಲ್ಲಿ ಒಟ್ಟು ಸಕ್ರಿಯ ಕಂಟೈನ್ಮೆಂಟ್ ಝೋನ್‍ಗಳ ಸಂಖ್ಯೆ 13,238ಕ್ಕೆ ಏರಿದೆ. ಇದುವರೆಗೂ ಬೆಂಗಳೂರಿನಲ್ಲಿ 20,679 ಕಂಟೈನ್‍ಮೆಂಟ್ ಝೋನ್‍ಗಳನ್ನು ಗುರುತಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News