ಕೋವಿಡ್19: ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ಬಿಬಿಎಂಪಿ ತೀರ್ಮಾನ

Update: 2020-08-01 17:12 GMT

ಬೆಂಗಳೂರು, ಆ.1: ನಗರದಲ್ಲಿ ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಕೊರೋನ ತಡೆಗೆ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳನ್ನು ಬಿಬಿಎಂಪಿ ಬಳಸಿಕೊಳ್ಳಲು ತೀರ್ಮಾನಿಸಿದೆ.

ಈ ಕುರಿತು ಆದೇಶ ಹೊರಡಿಸಿರುವ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್, ಜಯನಗರದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಆಡಳಿತ ಮಂಡಳಿಗೆ ಕೂಡಲೇ ಎಲ್ಲ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳನ್ನು ಪಾಲಿಕೆ ಕಚೇರಿಗೆ ಬಂದು ವರದಿ ಮಾಡಿಕೊಳ್ಳಲು ಕಳಿಸಿಕೊಡುವಂತೆ ಸೂಚಿಸಿದ್ದಾರೆ.

ವಿಪತ್ತು ನಿರ್ವಹಣಾ ಕಾಯ್ದೆ-2005ರ ಸೆಕ್ಷನ್ 65ರ ಅಡಿಯಲ್ಲಿ, ಬಿಬಿಎಂಪಿ ಕೊರೋನ ಸೋಂಕು ಹರಡುವಿಕೆ ತಡೆಗಟ್ಟಲು ವೈದ್ಯಕೀಯ ಪದವಿ ಸಂಬಂಧಿತ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ಅವಕಾಶವಿದೆ. ಈ ನಿಟ್ಟಿನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ವ್ಯಾಪ್ತಿಯ ವಿವಿಧ ಕಾಲೇಜುಗಳಲ್ಲಿ ಪ್ಯಾರಾ ಮೆಡಿಕಲ್ ಪದವಿ ಮತ್ತು ಸ್ನಾತಕೋತ್ತರ ಪದವಿ ಅಭ್ಯಾಸ ಮಾಡುತ್ತಿರುವ 994 ವಿದ್ಯಾರ್ಥಿಗಳನ್ನು ಕೊರೋನ ನಿಯಂತ್ರಣ ಕಾರ್ಯಕ್ಕೆ ವಿಶ್ವವಿದ್ಯಾಲಯದ ಕುಲಸಚಿವರು ನಿಯೋಜನೆ ಮಾಡಬೇಕು. ಜತೆಗೆ ಎಲ್ಲ ವಿದ್ಯಾರ್ಥಿಗಳು ಆ.3ರ ಒಳಗಾಗಿ ಬಿಬಿಎಂಪಿ ಕೇಂದ್ರ ಕಚೇರಿಯ ಉಪ ಆಯುಕ್ತರ (ಆಡಳಿತ) ಬಳಿ ತಪ್ಪದೆ ವರದಿ ಮಾಡಿಕೊಳ್ಳುವಂತೆ ಆದೇಶದಲ್ಲಿ ತಿಳಿಸಿದ್ದಾರೆ.

ಸ್ವ್ಯಾಬ್ ಸಂಗ್ರಹಣೆಗೆ ಎನ್‍ಎಸ್‍ಎಸ್ ವಿದ್ಯಾರ್ಥಿಗಳು

ಬಿಬಿಎಂಪಿ ವಿವಿಧ ವಾರ್ಡ್‍ಗಳಲ್ಲಿ ಕೊರೋನ ಪರೀಕ್ಷೆಗೆ ಗಂಟಲು ದ್ರವ (ಸ್ವ್ಯಾಬ್) ಸಂಗ್ರಹಣೆಗೆ ವ್ಯಕ್ತಿಗಳನ್ನು ಹುಡುಕುತ್ತಿದೆ. ಸೂಕ್ತ ಸುರಕ್ಷತಾ ಕ್ರಮ ಅನುಸರಿಸಿ ಸ್ವ್ಯಾಬ್ ಸಂಗ್ರಹಣೆಗೆ ಎನ್‍ಎಸ್‍ಎಸ್ ವಿದ್ಯಾರ್ಥಿಗಳನ್ನು ಕಾಲೇಜುಗಳಿಂದ ನಿಯೋಜಿಸುವಂತೆ ರಾಜ್ಯ ಎನ್‍ಎಸ್‍ಎಸ್ ಅಧಿಕಾರಿ ಡಾ.ಗಣನಾಥ ಶೆಟ್ಟಿ ಅವರಿಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಪತ್ರ ಬರೆದಿದ್ದರೆ. ಸ್ವ್ಯಾಬ್ ಸಂಗ್ರಹಣೆಗೆ ನಿಯೋಜನೆಗೊಂಡ ವಿದ್ಯಾರ್ಥಿಗಳಿಗೆ ಮಾಸಿಕ 14 ಸಾವಿರ ರೂ. ಗೌರವಧನ ನೀಡಲಾಗುವುದು. ವಿದ್ಯಾರ್ಥಿಗಳು ವಾಸವಿರುವ ವಾರ್ಡ್ ಗಳಲ್ಲಿಯೇ ಕಾರ್ಯ ಹಂಚಿಕೆ ಮಾಡಲಾಗುತ್ತಿದ್ದು, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವಾಹನ ವ್ಯವಸ್ಥೆ ಮಾಡಲಾಗುವುದು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News