×
Ad

ಮಾರಕಾಸ್ತ್ರಗಳಿಂದ ದಾಳಿ ನಡೆಸಿ ರೌಡಿಶೀಟರ್ ಸುನೀಲ್‍ ಕುಮಾರ್ ಹತ್ಯೆ

Update: 2020-08-01 23:59 IST

ಬೆಂಗಳೂರು, ಆ.1: ಹಲವು ಕೊಲೆ, ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿ ಶೀಟರ್ ಸುನೀಲ್‍ ಕುಮಾರ್ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಮೈಸೂರು ರಸ್ತೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಹಳೇ ದ್ವೇಷದ ಹಿನ್ನೆಲೆ ಸುನೀಲ್‍ ಕುಮಾರ್ ಹತ್ಯೆ ನಡೆದಿದೆ ಎನ್ನಲಾಗುತ್ತಿದ್ದು, ಮಾರಕಾಸ್ತ್ರಗಳಿಂದ ಹತ್ಯೆ ನಡೆಸುತ್ತಿರುವ ದೃಶ್ಯಾವಳಿಗಳು ಮೈಸೂರು ರಸ್ತೆಯ ಹೋಟೆಲ್ ಬಳಿ ಇರುವ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಕಾರಿನ ಒಳಗಡೆ ಕುಳಿತುಕೊಂಡಿದ್ದ ಸುನೀಲ್‍ ಕುಮಾರ್ ನನ್ನು ಮತ್ತೊಂದು ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು, ಕಾರಿನಿಂದ ಹೊರಗೆ ಎಳೆದು ಮನಬಂದಂತೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಕೊಲೆಯಾದ ಸುನೀಲ್‍ ಕುಮಾರ್ ಆನೇಕಲ್, ಅತ್ತಿಬೆಲೆ, ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯ ನಡೆಸಿ ಪೊಲೀಸರಿಗೆ ಬೇಕಾದವನಾಗಿದ್ದ. ಅಲ್ಲದೆ, ಹಲವು ಪ್ರಕರಣಗಳಲ್ಲಿ ಕಾರಾಗೃಹ ಶಿಕ್ಷೆ ಅನುಭವಿಸಿದ್ದ. 2019ರಲ್ಲಿ ನ್ಯಾಯ ಬಗೆಹರಿಸುವ ನೆಪದಲ್ಲಿ ಜಯಂತ್ ಎಂಬಾತನನ್ನು ಕೊಲೆ ಮಾಡಿದ್ದು ಆತನ ಮೇಲಿನ ಗಂಭೀರ ಕೊಲೆ ಪ್ರಕರಣವಾಗಿತ್ತು.

ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News