ಲಾಕ್‍ಡೌನ್‍ ನಿಂದ ಆರ್ಥಿಕ ನಷ್ಟ: ಬೆಂಗಳೂರಿನಲ್ಲಿ 50 ಸಾವಿರ ಮಳಿಗೆಗಳಿಗೆ ಬೀಗ

Update: 2020-08-02 10:27 GMT
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ಹಾಗೂ ಲಾಕ್‍ಡೌನ್‍ನಿಂದಾಗಿ ದೇಶಾದ್ಯಂತ ಆರ್ಥಿಕ ಚಟುವಟಿಕೆಗಳಿಗೆ ಧಕ್ಕೆಯಾಗಿದ್ದು, ಬೆಂಗಳೂರು ನಗರದಲ್ಲೇ ಸುಮಾರು 50 ಸಾವಿರಕ್ಕೂ ಹೆಚ್ಚು ಮಳಿಗೆಗಳು ಕಾಯಂ ಆಗಿ ಮುಚ್ಚಲ್ಪಟ್ಟಿವೆ. ಅಂತೆಯೇ ಮುಂಬರುವ ಹಬ್ಬದ ಸೀಸನ್‍ನಲ್ಲಿ ವಹಿವಾಟು ಹೆಚ್ಚದಿದ್ದರೆ ಮತ್ತೆ ಹಲವು ವ್ಯಾಪಾರ ವಹಿವಾಟುಗಳು ಸ್ಥಗಿತವಾಗುವ ಭೀತಿ ಇದೆ. ಸಿದ್ಧ ಉಡುಪು, ಪಾದರಕ್ಷೆ, ಲೇಖನ ಸಾಮಗ್ರಿ, ಮೊಬೈಲ್ ಬಿಡಿಭಾಗಗಳು ಹಾಗೂ ಸಣ್ಣ ಹೋಟೆಲ್‍ಗಳು ದೊಡ್ಡ ಸಂಖ್ಯೆಯಲ್ಲಿ ಮುಚ್ಚಿವೆ. ಖಾಲಿ ಮಳಿಗೆಗಳ ಮುಂದೆ ‘ಬಾಡಿಗೆಗಿದೆ’ ಎಂಬ ಫಲಕಗಳು ರಾರಾಜಿಸುತ್ತಿವೆ ಎಂದು timesofindia ವರದಿ ಮಾಡಿದೆ.

ಫೆಡರೇಷನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ (ಎಫ್‍ಕೆಸಿಸಿಐ) ಪ್ರಕಾರ, ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 4 ಲಕ್ಷ ಮಳಿಗೆಗಳಿವೆ. ಈ ಪೈಕಿ ಶೇಕಡ 12ರಿಂದ 15ರಷ್ಟು ಮಳಿಗೆಗಳು ಮುಚ್ಚಿವೆ. ಮತ್ತೆ ಶೇಕಡ 8ರಿಂದ 10ರಷ್ಟು ಮಳಿಗೆಗಳು ಮುಚ್ಚುವ ಭೀತಿಯಲ್ಲಿವೆ. ವಹಿವಾಟು ಸ್ಥಗಿತ ಮತ್ತು ಬಾಡಿಗೆ ಬಾಕಿ ಹೆಚ್ಚುತ್ತಿರುವುದು ಇದಕ್ಕೆ ಮುಖ್ಯ ಕಾರಣ ಎಂದು ಎಫ್‍ಕೆಸಿಸಿಐ ಅಧ್ಯಕ್ಷ ಕೆ.ಜನಾರ್ದನ್ ಹೇಳುತ್ತಾರೆ.

ಇತರ ರಾಜ್ಯಗಳ ಮಂದಿ ಮತ್ತು ಬೆಂಗಳೂರು ಹೊರತುಪಡಿಸಿ ಇತರೆಡೆಗಳ ಕನ್ನಡಿಗರು ಬಾಡಿಗೆಗೆ ಪಡೆದ ಅಂಗಡಿಗಳು ಬಹುತೇಕ ಮುಚ್ಚಿವೆ. ಮನೆ ಹಾಗೂ ಅಂಗಡಿಗಳ ಬಾಡಿಗೆ ಎರಡನ್ನೂ ನೀಡಲಾಗದೇ ಇವರು ಕಂಗಾಲಾಗಿದ್ದಾರೆ. ಕೋವಿಡ್-19 ಸಾಂಕ್ರಾಮಿಕಕ್ಕೆ ಮುನ್ನ ಇದ್ದ ವ್ಯಾಪಾರದ ಶೇಕಡ 25ರಷ್ಟು ಕೂಡಾ ವ್ಯಾಪಾರ ಆಗುತ್ತಿಲ್ಲ. ಹೀಗಾದರೇ ಉಳಿಯುವುದು ಹೇಗೆ ಎಂದು ಅವರು ಪ್ರಶ್ನಿಸುತ್ತಾರೆ.

ವ್ಯಾಪಾರ ವಹಿವಾಟು ಕುಂಠಿತವಾಗಿರುವುದರಿಂದ ಸಾವಿರಾರು ಮಂದಿ ಬಾಡಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಕಳೆದ ಏಪ್ರಿಲ್‍ನಿಂದ ನಾನು ಬಾಡಿಗೆ ನೀಡಿಲ್ಲ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಲಾಕ್‍ಡೌನ್‍ನಿಂದಾಗಿ ಅಂಗಡಿ ಮುಚ್ಚಿತ್ತು. ಇದೀಗ ಮತ್ತೆ ತೆರೆದಿದ್ದರೂ ಗ್ರಾಹಕರೇ ಇಲ್ಲ ಎನ್ನುವುದು ಸಂಜಯನಗರದ ವಿಶ್ವಜೀತ್ ಎಂಬ ರೆಡಿಮೇಡ್ ಉಡುಪು ವ್ಯಾಪಾರಿಯ ಅಳಲು. ಇವರು ಮಾಸಿಕ 12 ಸಾವಿರ ರೂಪಾಯಿ ಬಾಡಿಗೆ ನೀಡುತ್ತಿದ್ದು, ನೀಡಿದ ಮುಂಗಡ ಹಣದಲ್ಲೇ ಮಾಲೀಕರು ಬಾಡಿಗೆ ಮುರಿದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News