ಇನ್ನೂ ಎರಡು ವಾರದೊಳಗೆ ಕಾರ್ಯಾರಂಭ: ಸಚಿವ ಡಾ.ಕೆ.ಸುಧಾಕರ್

Update: 2020-08-02 14:18 GMT

ಬೆಂಗಳೂರು, ಆ. 2: `ಶಿವಾಜಿನಗರದ ಬ್ರಾಡ್ ವೇ ಆಸ್ಪತ್ರೆಯು 200 ಹಾಸಿಗೆಗಳ ಕೋವಿಡ್ ಆಸ್ಪತ್ರೆಯಾಗಿ ಸಜ್ಜುಗೊಳಿಸಲಾಗುತ್ತಿದೆ. ಇದರ ಸಮರ್ಪಕ ನಿರ್ವಹಣೆಗೆ ಅಗತ್ಯವಿರುವ ವೈದ್ಯರು, ನರ್ಸ್, ಪ್ಯಾರ ಮೆಡಿಕಲ್ ಮತ್ತು ಇತರೆ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಇನ್ನೂ ಎರಡು ವಾರದೊಳಗೆ ಕಾರ್ಯಾರಂಭ ಮಾಡಲಿದೆ' ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ರವಿವಾರ ಆಸ್ಪತ್ರೆಗೆ ಖುದ್ದು ಭೇಟಿ ನೀಡಿ ಅಲ್ಲಿನ ಸಿದ್ದತೆಗಳ ಬಗ್ಗೆ ಪರಿಶೀಲಿಸಿದ ಬಳಿಕ ಟ್ವೀಟ್ ಮಾಡಿರುವ ಅವರು, `ಬ್ರಾಡ್ ವೇ ಆಸ್ಪತ್ರೆಯನ್ನು ಸುಸಜ್ಜಿತ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲು ಅಗತ್ಯ ಮೂಲ ಸೌಕರ್ಯ ಒದಗಿಸಲು ನೆರವು ನೀಡಿರುವ ಇನ್ಫೋಸಿಸ್ ಪ್ರತಿಷ್ಟಾನ ಮತ್ತು ಸುಧಾಮೂರ್ತಿ ಅವರಿಗೆ ರಾಜ್ಯ ಸರಕಾರ ಹಾಗೂ ಜನತೆ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ' ಎಂದು ಹೇಳಿದ್ದಾರೆ.

ಶ್ಲಾಘನೀಯ: `ಕೋವಿಡ್ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲು ಮುಂದಾಗಿರುವ ಹಾವೇರಿ ಜಿಲ್ಲೆಯ 570 ಖಾಸಗಿ ವೈದ್ಯರು ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ. ಕೊರೋನದಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಯಾವುದೇ ಪ್ರತಿಫಲ ಅಪೇಕ್ಷಿಸದೆ ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ಮಾನವೀಯತೆ ಮರೆದಿರುವ ಈ ವೈದ್ಯರ ವೃತ್ತಿಪರತೆ ಮತ್ತು ಸೇವಾ ಮನೋಭಾವ ಅತ್ಯಂತ ಶ್ಲಾಘನೀಯ' ಎಂದು ಡಾ.ಸುಧಾಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

`ಸರಕಾರದ ನಿಯಮದಂತೆ ಶೇ.50ರಷ್ಟು ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡದೆ ಕಾನೂನು ಉಲ್ಲಂಘಿಸಿರುವ ಬೆಂಗಳೂರಿನ ಮಾರತ್ತಹಳ್ಳಿಯ ಸಾಕ್ರ ಆಸ್ಪತ್ರೆಯ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆಸ್ಪತ್ರೆಯ ಮೂವರು ಮುಖ್ಯಸ್ಥ ರನ್ನು ಆರೋಪಿಗಳನ್ನಾಗಿ ಹೊಣೆ ಮಾಡಲಾಗಿದೆ. ನಿಯಮ ಪಾಲಿಸದ ಆಸ್ಪತ್ರೆಗಳ ವಿರುದ್ಧ ಕ್ರಮ ನಿಶ್ಚಿತ'

-ಡಾ.ಕೆ.ಸುಧಾಕರ್ ವೈದ್ಯಕೀಯ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News