×
Ad

ಕೊರೋನ ಟೆಸ್ಟ್: ಖಾಸಗಿ ಲ್ಯಾಬ್‍ಗಳಿಗೆ ಬಿಬಿಎಂಪಿ ಆಹ್ವಾನ

Update: 2020-08-02 20:49 IST

ಬೆಂಗಳೂರು, ಆ.2: ನಗರದಲ್ಲಿ ಕೊರೋನ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆ ಹೆಚ್ಚು ಕೊರೋನ ಟೆಸ್ಟ್ ಮಾಡಲು ನಿರ್ಧರಿಸಿರುವ ಬಿಬಿಎಂಪಿ ಇದಕ್ಕಾಗಿ ಖಾಸಗಿ ಲ್ಯಾಬ್‍ಗಳಿಗೆ ಆಹ್ವಾನಿಸಿದೆ.

ನಗರದಲ್ಲಿ ಕೊರೋನ ಸೋಂಕು ನಿರ್ವಹಣೆಗಾಗಿ ಬಿಬಿಎಂಪಿ ಇತ್ತೀಚೆಗೆ ವಿಜ್ಞಾನ ಪದವೀಧರರನ್ನು ಆಹ್ವಾನಿಸಿತ್ತು. ನೂರು ಜನರನ್ನು ಗಂಟಲು ದ್ರವ ಮಾದರಿ ಸಂಗ್ರಹಿಸುವ ಕಾರ್ಯಕ್ಕೆ ನೇಮಕ ಮಾಡಿಕೊಳ್ಳಲು ಜಾಹೀರಾತು ನೀಡಲಾಗಿತ್ತು. ಆದರೆ, ಅಧಿಕಾರಿಗಳು ನಿರೀಕ್ಷಿಸಿದಂತೆ ಸಾರ್ವಜನಿಕರಿಂದ ಸ್ಪಂದನೆ ದೊರಕಲಿಲ್ಲ. ಕೇವಲ 11 ಮಂದಿ ಈ ಅಭಿಯಾನದಲ್ಲಿ ಕೈಜೋಡಿಸಲು ಮುಂದಾದರು.

ಸ್ಪಂದನೆ ಸಿಗದ ಹಿನ್ನೆಲೆ ಇದೀಗ ಬಿಬಿಎಂಪಿ ಖಾಸಗಿ ಲ್ಯಾಬ್‍ಗಳನ್ನು ಆಹ್ವಾನಿಸಿದ್ದು, ಲ್ಯಾಬ್‍ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿಗಳಿಗೆ ಪ್ರತ್ಯೇಕವಾಗಿ ತರಬೇತಿ ನೀಡುವ ಅವಶ್ಯಕತೆ ಇರುವುದಿಲ್ಲ. ಲ್ಯಾಬ್ ಹಾಗೂ ಅದರ ಸಿಬ್ಬಂದಿಯ ಅನುಭವ ಸಹಾಯಕ ಎಂದು ಪರಿಗಣಿಸಿ ಪ್ರೈವೇಟ್ ಲ್ಯಾಬ್‍ಗಳಿಗೆ ತಮ್ಮ ಲೆಕ್ಕಾಚಾರದ ಪ್ರಕಾರ ಗಂಟಲು ದ್ರವ ಮಾದರಿಯ ಕಲೆಕ್ಷನ್‍ಗಾಗಿ ಒಂದು ನಿಗದಿತ ದರ ನಿಗದಿಪಡಿಸಲು ಹಾಗೂ ಅದನ್ನು ಬಿಬಿಎಂಪಿಗೆ ತಿಳಿಸುವಂತೆ ಕೇಳಲಾಗಿದೆ.

ಈ ಲ್ಯಾಬ್‍ಗಳು ಕಂಟೈನ್ಮೆಂಟ್ ಝೋನ್, ಕೊರೋನ ಕೇರ್ ಸೆಂಟರ್, ಪ್ರೈಮರಿ ಹೆಲ್ತ್ ಸೆಂಟರ್ ಹಾಗೂ ಸೋಂಕಿತರೊಂದಿಗೆ ಪ್ರಥಮ ಸಂಪರ್ಕ ಹೊಂದಿರುವವರನ್ನು ಕೊರೋನ ಪರೀಕ್ಷೆಗೆ ಒಳಪಡಿಸುವ ಕೆಲಸವನ್ನು ಮಾಡಬೇಕಾಗುತ್ತದೆ. ಇವರು ನಿಗದಿಪಡಿಸುವ ದರದಲ್ಲಿ ಪಿಪಿಇ ಕಿಟ್, ಪ್ರಯಾಣ ದರ ಮತ್ತು ಸಿಬ್ಬಂದಿಯ ಊಟದ ಖರ್ಚು ಒಳಗೊಂಡಿರಬೇಕು. ಆಹ್ವಾನದ ಮೂಲಕವಾದರೂ ತನ್ನ ಟೆಸ್ಟಿಂಗ್ ಸಾಮರ್ಥ್ಯ ವನ್ನು ಹೆಚ್ಚಿಸಿಕೊಳ್ಳಲು ಬಿಬಿಎಂಪಿ ಮುಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News