ಬೆಂಗಳೂರು: ಬೋಧನಾ ಶುಲ್ಕ ಪಾವತಿಸದ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿ ನಿರಾಕರಣೆ; ಆರೋಪ
ಬೆಂಗಳೂರು, ಆ.2: ಬೋಧನಾ (ಟ್ಯೂಷನ್) ಶುಲ್ಕ ಪಾವತಿಸಲಿಲ್ಲ ಎಂಬ ಕಾರಣಕ್ಕೆ ನಗರದ ಖಾಸಗಿ ಶಾಲೆಯೊಂದು ಕೆಲವು ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿ ನಿರಾಕರಿಸಿರುವುದು ವರದಿಯಾಗಿದೆ.
ರಾಜ್ಯ ಸರಕಾರವು ಆನ್‍ಲೈನ್ ತರಗತಿಗಳಿಗೆ ಶುಲ್ಕ ವಿಧಿಸುವಂತಿಲ್ಲ ಎಂಬ ಸೂಚನೆ ನೀಡಿರುವುದರಿಂದ ಆನ್‍ಲೈನ್ ಶುಲ್ಕದ ಬದಲಾಗಿ ಬೋಧನಾ(ಟ್ಯೂಷನ್) ಶುಲ್ಕ ಪಡೆಯಲಾಗುತ್ತಿದೆ.
ಜೂನ್ ತಿಂಗಳಿನಿಂದಲೇ ಆನ್‍ಲೈನ್ ತರಗತಿಗಳನ್ನು ಆರಂಭಿಸಿದ್ದು, ವಾರ್ಷಿಕ ಬೋಧನಾ ಶುಲ್ಕವನ್ನು ನಾಲ್ಕು ಕಂತುಗಳಲ್ಲಿ ಪಾವತಿಸುವಂತೆ ಸೂಚನೆ ನೀಡಲಾಗಿದೆ. ಇಲ್ಲಿಯವರೆಗೂ ಯಾರು ಶುಲ್ಕ ಪಾವತಿಸಿಲ್ಲ ಅಂತಹ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳನ್ನು ಕಡಿತ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ.
ಒಂದು ವಾರದಿಂದ ಹಲವು ಮಕ್ಕಳಿಗೆ ಆನ್‍ಲೈನ್ ತರಗತಿಗಳನ್ನು ಸ್ಥಗಿತಗೊಳಿಸಿದೆ ಎಂದು ಪಾಲಕ, ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಟ್ಯೂಷನ್ ಶುಲ್ಕ ಪಡೆಯಲಾಗುತ್ತಿದೆ. ಹಿಂದಿನ ವರ್ಷಗಳಲ್ಲಿ ಎರಡು ಕಂತುಗಳಲ್ಲಿ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿತ್ತು. ಈ ಬಾರಿ ಕೋವಿಡ್ ಇರುವುದರಿಂದ ನಾಲ್ಕು ಕಂತುಗಳಲ್ಲಿ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಇಲ್ಲಿಯವರೆಗೂ ಯಾರು ಶುಲ್ಕ ಪಾವತಿಸಿಲ್ಲ ಅಂತಹ ವಿದ್ಯಾರ್ಥಿಗಳ ಆನ್ ಲೈನ್ ತರಗತಿಗಳನ್ನು ಕಡಿತ ಮಾಡಲಾಗಿದೆ ಎಂದು ಆಡಳಿತ ಮಂಡಳಿಯ ಮೂಲಗಳು ತಿಳಿಸಿವೆ.