ಕಾನೂನು ಸುವ್ಯವಸ್ಥೆ ನಿಯಂತ್ರಣಕ್ಕೆ ಡಿಸಿಪಿಗಳ ಜತೆ ಆಯುಕ್ತರಿಂದ ಪ್ರತ್ಯೇಕ ಸಭೆ

Update: 2020-08-02 15:51 GMT

ಬೆಂಗಳೂರು, ಆ.2: ಬೆಂಗಳೂರು ನಗರದಲ್ಲಿ ಕಾನೂನು ಸುವ್ಯವಸ್ಥೆ, ಕೊರೋನ ಸೋಂಕು ನಿಯಂತ್ರಣ, ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಸೇರಿ ಇನ್ನಿತರ ಮಹತ್ವದ ವಿಷಯಗಳ ಕುರಿತು ನಗರದ ಡಿಸಿಪಿಗಳ ಜೊತೆಗೆ ರವಿವಾರ ಬೆಂಗಳೂರು ನೂತನ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರು ಸಭೆ ನಡೆಸಿದರು. 

ನಗರದಲ್ಲಿ ಕೊರೋನ ದಿನಂಪ್ರತಿ ಹೆಚ್ಚಾಗುತ್ತಿದ್ದು, ಕಂಟೈನ್ಮೆಂಟ್ ಝೋನ್‍ಗಳಲ್ಲಿ ಕೈಗೊಂಡ ಭದ್ರತಾ ಕ್ರಮಗಳ ಬಗ್ಗೆ ಆಯಾ ವಿಭಾಗದ ಡಿಸಿಪಿಗಳಿಂದ ಮಾಹಿತಿ ಪಡೆದರು.  

ಕೊರೋನ ಹೆಚ್ಚಳವಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಯಾವ ರೀತಿಯಲ್ಲಿ ಅನುಸರಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸಿದರು. ಜೊತೆಗೆ ಕಂಟೈನ್ಮೆಂಟ್ ಝೋನ್‍ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಕ್ರಮ, ಸೋಂಕಿತ ಸಿಬ್ಬಂದಿ ವಹಿಸಬೇಕಾದ ಎಚ್ಚರಿಕೆ ಕ್ರಮಗಳ ಬಗ್ಗೆಯೂ ಸುದೀರ್ಘವಾಗಿ ಚರ್ಚೆ ನಡೆಸಿದರು.

ಡಿಸಿಪಿಗಳಿಂದ ಕಾನೂನು-ಸುವ್ಯವಸ್ಥೆ ಹಾಗೂ ಅಪರಾಧ ಚಟುವಟಿಕೆಗಳ ಮಾಹಿತಿ ಪಡೆದ ಅವರು ನಗರದಲ್ಲಿ ಯಾವುದೇ ಕಾರಣಕ್ಕೂ ಅಪರಾಧ ಚಟುವಟಿಕೆಗಳು ಹೆಚ್ಚಾಗದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕೆಂದು ಸೂಚನೆ ನೀಡಿದರು.

ಕೊರೋನದಿಂದ ಸಂಕಷ್ಟದ ಪರಿಸ್ಥಿತಿ ಉದ್ಭವಿಸಿದ್ದು, ಈ ವೇಳೆಯಲ್ಲಿ ಪೊಲೀಸರು ಸಾರ್ವಜನಿಕರೊಂದಿಗೆ ಪ್ರೀತಿ, ವಿಶ್ವಾಸದಿಂದ ಕೆಲಸ ನಿರ್ವಹಿಸಬೇಕು. ಜನರೊಂದಿಗೆ ಬೆರೆತು ಕೆಲಸ ಮಾಡಬೇಕೆಂದು ಸೂಚನೆ ನೀಡಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News