ಬಿಜೆಪಿ ನಮಗೆ ನೋಟಿಸ್ ಕೊಟ್ಟಿದ್ದು ಒಳ್ಳೆಯದೇ ಆಯಿತು: ಸಿದ್ದರಾಮಯ್ಯ

Update: 2020-08-02 15:55 GMT

ಬೆಂಗಳೂರು, ಆ.2: ಕೋವಿಡ್-19 ಆರೋಗ್ಯ ಸಾಮಗ್ರಿಗಳ ಖರೀದಿಯಲ್ಲಿ ನಡೆದಿರುವ ಅಕ್ರಮವನ್ನು ಪ್ರಶ್ನಿಸಿದಕ್ಕೆ ಬಿಜೆಪಿ ವಕೀಲರ ಮೂಲಕ ನಮಗೆ ನೋಟಿಸ್ ಕೊಟ್ಟು ನಮ್ಮ ಕೆಲಸವನ್ನು ಸುಲಭ ಮಾಡಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಕೋವಿಡ್-19ರ ಸಂಬಂಧ ನಡೆದಿರುವ ಅಕ್ರಮಗಳನ್ನು ಪ್ರಶ್ನಿಸಿ ನಾವೇ ನ್ಯಾಯಾಲಯದ ಮೆಟ್ಟಿಲು ಹತ್ತಬೇಕೆಂದು ಚಿಂತನೆಯಲ್ಲಿದ್ದೆವು. ಅಷ್ಟರಲ್ಲಿ ಬಿಜೆಪಿ ವಕೀಲರ ಮೂಲಕ ನೋಟಿಸ್ ಕಳುಹಿಸಿದೆ. ಹೀಗಾಗಿ ಕೋವಿಡ್ ಸಾಮಗ್ರಿಗಳ ಖರೀದಿ ಸಂಬಂಧದ ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಲೇ ಬೇಕಾಗುತ್ತದೆ. ನ್ಯಾಯಾಲಯದಲ್ಲಾದರು ನಮ್ಮನ್ನು ಎದುರಿಸಲಿ ಎಂದು ಸವಾಲು ಹಾಕಿದ್ದಾರೆ.

ಕೋವಿಡ್-19ರ ಅಕ್ರಮಗಳನ್ನು ನಾನು ಬಹಿರಂಗವಾಗಿ ಪ್ರಶ್ನಿಸಿದೆ. ಆ ನಂತರ ಲೂಟಿ ಮಾಡುವುದು ಸ್ವಲ್ಪ ನಿಯಂತ್ರಣಕ್ಕೆ ಬಂದಿದ್ದು, ಕೋಟ್ಯಂತರ ರೂ. ಖರೀದಿ ಆದೇಶಗಳನ್ನು ಸರಕಾರ ತಡೆಹಿಡಿದಿದೆ. ಹೀಗಾಗಿ ಅಕ್ರಮ ನಡೆಸುವುದಕ್ಕೆ ಕಲ್ಲು ಹಾಕಿದನಲ್ಲಾ ಎಂದು ಬಿಜೆಪಿ ನಾಯಕರಿಗೆ ನನ್ನ ಮೇಲೆ ಕೋಪ. ಅದಕ್ಕಾಗಿ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆಂದು ಅವರು ತಿಳಿಸಿದ್ದಾರೆ.

ರಾಜ್ಯ ಸರಕಾರ ಕೋವಿಡ್-19 ಸಾಮಗ್ರಿಗಳ ಖರೀದಿ ದಾಖಲೆಗಳನ್ನು 24 ಗಂಟೆಗಳಲ್ಲಿ ಸಿದ್ದರಾಮಯ್ಯನವರ ಮನೆ ಬಾಗಿಲಿಗೆ ತಲುಪಿಸುತ್ತೇನೆಂದು ಹೇಳಿ 24ದಿನವಾದರೂ ತಲುಪಿಸಿಲ್ಲ. ರಾಜ್ಯ ಸರಕಾರದಿಂದ ಒಂದು ಚಿಕ್ಕ ಮಾಹಿತಿಯೂ ನನಗೆ ತಲುಪಿಲ್ಲ. ಖರೀದಿ ಪ್ರಕ್ರಿಯೆಗಳು ಪಾರದರ್ಶಕವಾಗಿ ನಡೆದಿದ್ದರೆ ದಾಖಲೆಗಳನ್ನು ಕೊಡಲು ಭಯವೇಕೆ ಎಂದು ಅವರು ಪ್ರಶ್ನಿಸಿದ್ದಾರೆ.

ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕೊರೋನ ಸೋಂಕು ನಿಯಂತ್ರಣದಲ್ಲಿತ್ತು ಎನ್ನುವ ಕಾರಣಕ್ಕಾಗಿ ಎಲ್ಲವನ್ನು ಸಹಿಸಿಕೊಂಡು ಸುಮ್ಮನಿದ್ದೆವು. ಈಗ ಕೊರೋನ ಸಂಬಂಧ ಸಾವು-ನೋವುಗಳಲ್ಲಿ ಮಹಾರಾಷ್ಟ್ರ-ತಮಿಳುನಾಡನ್ನು ಮೀರಿಸಿ ಕರ್ನಾಟಕ ಪ್ರಥಮ ಸ್ಥಾನ ಪಡೆಯಲು ಹೊರಟಿದೆ. ಈಗಲೂ ನಾವು ಸುಮ್ಮನಿದ್ದರೆ ಜನದ್ರೋಹವಾಗುತ್ತದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.

ಕೋವಿಡ್-19 ಸಂಬಂಧದ ಸಾಮಗ್ರಿಗಳ ಖರೀದಿಯಲ್ಲಿ ಬಿಜೆಪಿ ನಾಯಕರು ನಡೆಸಿರುವ ಅಕ್ರಮಗಳನ್ನು ಪ್ರಶ್ನಿಸಿದರೆ ಮಾಹಿತಿ ಕೊಡಿ ಎನ್ನುತ್ತಾರೆ. ದಾಖಲೆಗಳನ್ನು ಬಿಡುಗಡೆ ಮಾಡಿದರೆ, ಅದು ಸುಳ್ಳು ಎನ್ನುತ್ತಾರೆ. ಈ ಸಂಬಂಧ ತನಿಖೆ ಮಾಡಿಸಿಯೆಂದರೆ ಸುಳ್ಳಿನ ಬಗ್ಗೆ ತನಿಖೆ ಯಾಕೆಂದು ಕೇಳ್ತಾರೆ. ಹೀಗಾಗಿ ಬಿಜೆಪಿ ನಡೆಸುತ್ತಿರುವ ಅಕ್ರಮಗಳ ಕುರಿತು ಜನಜಾಗೃತಿ ಮೂಡಿಸುವುದೊಂದೆ ನಮಗಿರುವ ದಾರಿಯಾಗಿದೆ.
-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News