ಯಡಿಯೂರಪ್ಪ ಸರಕಾರ ಬಿದ್ದರೆ ನಾವು ಚುನಾವಣೆಗೆ: ಸತೀಶ್ ಜಾರಕಿಹೊಳಿ

Update: 2020-08-02 16:08 GMT
ಸತೀಶ್ ಜಾರಕಿಹೊಳಿ

ಬೆಳಗಾವಿ, ಆ. 2: `ಬಿ.ಎಸ್.ಯಡಿಯೂರಪ್ಪನವರ ನಾಯಕತ್ವ ಬದಲಾವಣೆ ಚರ್ಚೆ ಬಿಜೆಪಿಯಲ್ಲಿ ಆರಂಭವಾಗಿದ್ದು, ಅವರು ಇನ್ನು ಆರು ತಿಂಗಳ ಮಾತ್ರ ಅಧಿಕಾರದಲ್ಲಿರುತ್ತಾರೆಂದು ಹೇಳಲಾಗುತ್ತಿದೆ. ಒಂದು ವೇಳೆ ಈ ಸರಕಾರ ಬಿದ್ದರೆ ನಮಗೆ ಅನುಕೂಲವಾಗಲಿದ್ದು, ನಾವು ಚುನಾವಣೆಗೆ ಹೋಗುತ್ತೇವೆ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಸುವುದು ಅಥವಾ ಕೆಳಗಿಳಿಸುವುದು ಬಿಜೆಪಿಗೆ ಬಿಟ್ಟ ವಿಷಯ. ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಈ ಸರಕಾರ ಬಿದ್ದರೆ ನಾವು ಸರಕಾರ ರಚಿಸುವ ಪ್ರಶ್ನೆಯೆ ಇಲ್ಲ. ನಾವು ಚುನಾವಣೆಗೆ ಹೋಗಲಿದ್ದು, ಪಕ್ಷೆಕ್ಕೆ ಲಾಭವಾಗಲಿದೆ ಎಂದು ನುಡಿದರು.

ಕೌಂಟರ್ ಕೊಡಲು ನೇಮಕ: ಯಡಿಯೂರಪ್ಪನವರಿಗೆ ತಿರುಗೇಟು ನೀಡಲು ಕೆಲವರನ್ನು ಅವರ ನೇತೃತ್ವದ ಸಂಪುಟದಲ್ಲೆ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಇದನ್ನು ಬಿಎಸ್‍ವೈ ಹೇಗೆ ನಿಭಾಯಿಸಲಿದ್ದಾರೆಂಬುದು ಗೊತ್ತಿಲ್ಲ. ರಾಜ್ಯದಲ್ಲಿ ಅನೈತಿಕ ಮಾರ್ಗದಿಂದ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲೇ ಬಿಜೆಪಿಯಲ್ಲೇ ಏನೆಲ್ಲ ನಡೆಯುತ್ತಿದೆ ಎಂಬುದು ಬಯಲಾಗುತ್ತಿದೆ ಎಂದು ಟೀಕಿಸಿದರು.

ಯಾವ ಆಧಾರದಲ್ಲಿ ನೋಟಿಸ್: ವೈದ್ಯಕೀಯ ಉಪಕರಣಗಳ ಖರೀದಿ ಅವ್ಯವಹಾರ ಸಂಬಂಧ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಬಿಜೆಪಿ ನೋಟಿಸ್ ಯಾವ ಆಧಾರದ ಮೇಲೆ ನೀಡಿದೆಯೋ ಗೊತ್ತಿಲ್ಲ. ವಿಪಕ್ಷ ಆರೋಪ ಮಾಡಿದ ಸಂದರ್ಭದಲ್ಲಿ ಸೂಕ್ತ ಪ್ರತಿಕ್ರಿಯೆ ನೀಡಬೇಕು. ಅದು ಬಿಟ್ಟು ನೋಟಿಸ್ ಕೊಟ್ಟರೆ ಪಕ್ಷ ಹೆದರುವುದಿಲ್ಲ. ಕಾನೂನು ಮೂಲಕ ಇದನ್ನು ಪಕ್ಷ ಎದುರಿಸಲಿದೆ ಎಂದರು.

ಕೊರೋನ ಸೋಂಕು ನಿಯಂತ್ರಣ ಮತ್ತು ನಿರ್ವಹಣೆಯಲ್ಲಿ ರಾಜ್ಯ ಸರಕಾರದ ವೈಫಲ್ಯಗಳ ವಿರುದ್ಧ ಅಧಿವೇಶದನದ ಒಳಗೆ ಮತ್ತು ಹೊರಗೆ ಕಾಂಗ್ರೆಸ್ ಹೋರಾಟ ಮಾಡಲಿದೆ. ಆದರೆ, ಸರಕಾರದ ವಿರುದ್ಧ ಆರೋಪ ಮಾಡುವ ಎಲ್ಲರಿಗೂ ಬಿಜೆಪಿ ನೋಟಿಸ್ ಮೂಲಕವೇ ಉತ್ತರ ನೀಡಲಿದೆಯೇ ಎಂದು ಪ್ರಶ್ನಿಸಿದ ಅವರು, ನೋಟಿಸ್ ನೀಡಿ ಯಾರೊಬ್ಬರ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News