ಕುವೈತ್‍ನಲ್ಲಿ ಸಿಲುಕಿರುವ ರಾಜ್ಯದ ಯುವಕರಿಗೆ ನೆರವಿಗೆ ಧಾವಿಸಲು ಈಶ್ವರ್ ಖಂಡ್ರೆ ಮನವಿ

Update: 2020-08-02 16:10 GMT

ಬೆಂಗಳೂರು, ಆ. 2: `ಉದ್ಯೋಗವನ್ನರಸಿ ಹೈ.ಕ.ಭಾಗದ 200 ಮಂದಿ ಯುವಕರನ್ನು ಕುವೈತ್ ದೇಶಕ್ಕೆ ಕರೆದೊಯ್ದಿದ್ದ ಮೆಗಾ ಎಂಜಿನಿಯರಿಂಗ್ ಕಂಪೆನಿ, ಕೊರೋನ ಸಂದಿಗ್ಧ ಪರಿಸ್ಥಿತಿಯಲ್ಲಿ ಆ ಯುವಕರನ್ನು ನಡುನೀರಿನಲ್ಲಿ ಕೈಬಿಟ್ಟಿದೆ. ರಾಜ್ಯ ಸರಕಾರ ಕೂಡಲೇ ಆ ಯುವಕರ ನೆರವಿಗೆ ಧಾವಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮನವಿ ಮಾಡಿದ್ದಾರೆ.

ರವಿವಾರ ಬೀದರ್‍ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವರ್ಷದ ಹಿಂದೆ ಹೈದರಾಬಾದ್ ಮೂಲದ ಮೇಲ್ಕಂಡ ಕಂಪೆನಿ ಕುವೈತ್‍ಗೆ 200 ಯುವಕರನ್ನು ಕರೆದೊಯ್ದಿತ್ತು. ಕೊರೋನಾ ಹಿನ್ನೆಲೆ ಅವರ ಸ್ಥಿತಿ ಇದೀಗ ಅತಂತ್ರವಾಗಿದೆ. ಅಲ್ಲಿರುವ 200 ಜನರಲ್ಲಿ ಅನೇಕರ ವೀಸಾ ಅವಧಿಯೂ ಮುಗಿದಿದ್ದು, ಅವರೆಲ್ಲ ಈಗ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಗಮನ ಸೆಳೆದರು.

ಉದ್ಯೋಗದ ನೆಪದಲ್ಲಿ ರಾಜ್ಯದ ಯುವಕರನ್ನು ಕರೆದುಕೊಂಡು ಹೋಗಿದ್ದ ಕಂಪೆನಿ, ಉದ್ಯೋಗವನ್ನರಿಸಿ ದೇಶ ಬಿಟ್ಟು ಹೋದವರಿಗೆ ಸುಳ್ಳು ಹೇಳಿ, ನಕಲಿ ಟಿಕೆಟ್ ಕೊಡಿಸಿ ಕೈತೊಳೆದುಕೊಂಡಿದೆ. ಆದರೆ, ಅಲ್ಲಿನ ಭಾಷೆ ತಿಳಿಯದೆ, ಊಟಕ್ಕೂ ಗತಿಯಿಲ್ಲದೆ ನಮ್ಮ ರಾಜ್ಯದ ಯುವಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಅವರ ನೆರವಿಗೆ ಸರಕಾರ ಕೂಡಲೇ ಧಾವಿಸಬೇಕು ಎಂದು ಆಗ್ರಹಿಸಿದರು.

ವಿದೇಶದಲ್ಲಿ ಸಿಲುಕಿರುವವರ ಮಾಹಿತಿಯೂ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಇದ್ದರೂ ಅವು ಏನು ಮಾಡುತ್ತಿವೆ ಎಂದು ಪ್ರಶ್ನಿಸಿದ ಈಶ್ವರ್ ಖಂಡ್ರೆ, ವಿದೇಶದಲ್ಲಿ ಸಿಲುಕಿರುವವರನ್ನು ಕರೆಸಿಕೊಳ್ಳಲು ಕೇರಳಕ್ಕೆ 800 ವಿಶೇಷ ವಿಮಾನ ನೀಡಿದ ಕೇಂದ್ರ ಸರಕಾರ, ಕರ್ನಾಟಕಕ್ಕೆ ಮಾತ್ರ ಕೇವಲ ಇಪ್ಪತ್ತು ವಿಮಾನಗಳನ್ನು ಒದಗಿಸಿದೆ. ಈ ತಾರಮತ್ಯ ಸರಿಯಲ್ಲ. ರಾಜ್ಯದ ಸಂಸದರು ಈ ಬಗ್ಗೆ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಕೋರಿದರು.

`ಕುವೈತ್ ದೇಶದಲ್ಲಿ ಸಿಲುಕಿರುವ ನಮ್ಮ ಭಾಗದ ಕನ್ನಡಿಗರೊಂದಿಗೆ ವಿಡಿಯೋ ಸಂವಾದ ನಡೆಸಿದ್ದು, ಅವರಿಗೆ ಧೈರ್ಯ ತುಂಬಿದ್ದೇನೆ. ಅವರನ್ನು ತಾಯ್ನಾಡಿಗೆ ಕರೆತರಲು ಸಿಎಂಗೆ ಪತ್ರ ಬರೆದಿದ್ದು, ಅದಷ್ಟು ಶೀಘ್ರವೇ ಅವರ ರಾಜ್ಯಕ್ಕೆ ಮರಳಲು ಎಲ್ಲ ರೀತಿಯಲ್ಲಿಯೂ ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದ್ದೇನೆ'
-ಈಶ್ವರ್ ಬಿ.ಖಂಡ್ರೆ ಕೆಪಿಸಿಸಿ ಕಾರ್ಯಾಧ್ಯಕ್ಷ

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News