ವೆಂಟಿಲೇಟರ್ ಕೊರತೆಯಿಂದ ಕೋವಿಡ್ ಸಾವಿನ ಪ್ರಮಾಣ ಹೆಚ್ಚಳ: ಸಿದ್ದರಾಮಯ್ಯ ಆರೋಪ

Update: 2020-08-02 16:52 GMT

ಬೆಂಗಳೂರು, ಆ.2: ರಾಜ್ಯದಲ್ಲಿ ಕೊರೋನ ಪ್ರಕರಣಗಳಲ್ಲಿ ಸಾವಿನ ಪ್ರಮಾಣ ಹೆಚ್ಚಳವಾಗಲು ವೆಂಟಿಲೇಟರ್ ಕೊರತೆಯೂ ಪ್ರಮುಖ ಕಾರಣವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಸಕ್ರಿಯ ಸೋಂಕು ಪ್ರಕರಣಗಳು ಹೆಚ್ಚಿದ್ದು ವೆಂಟಿಲೇಟರ್‍ಗಳು ಕೇವಲ 801 ಮಾತ್ರ. ಇದರ ನಡುವೆ ರೋಗಿಗಳಿಗೆ ಬೆಡ್, ಊಟದ ವ್ಯವಸ್ಥೆಯಿಲ್ಲವೆಂಬ ಆರೋಪಗಳು ಕೇಳಿ ಬರುತ್ತಿವೆ. ಒಟ್ಟಾರೆ ಕೋವಿಡ್ ನಿಯಂತ್ರಣದಲ್ಲಿ ರಾಜ್ಯದ ಸ್ಥಿತಿ ಚಿಂತಾಜನಕವಾಗಿದೆ. 

ಕರ್ನಾಟಕದಲ್ಲಿ ಪ್ರತಿದಿನ 5ಸಾವಿರಕ್ಕೂ ಹೆಚ್ಚು ಕೊರೋನ ಸೋಂಕು ಪ್ರಕರಣಗಳು ದಾಖಲಾಗುತ್ತಿವೆ. ಸರಕಾರಿ 80ರಿಂದ 90ಮಂದಿ ಸಾವನ್ನಪ್ಪುತ್ತಿದ್ದಾರೆ. ಇದರ ನಡುವೆ ರಾಜ್ಯ ಸರಕಾರ ವೆಂಟಿಲೇಟರ್‍ಗಳನ್ನು ರಫ್ತು ಮಾಡುವ ಚಿಂತೆಯಲ್ಲಿದೆ. ರಾಜ್ಯದಲ್ಲಿ ಸಾವಿನ ಪ್ರಮಾಣ ಇಳಿಯುತ್ತಿದ್ದಂತೆ ವೆಂಟಿಲೇಟರ್ ರಫ್ತಿಗೆ ಅವಕಾಶ ಮಾಡಿಕೊಡಲು ರಾಜ್ಯ ಸರಕಾರ ತುದಿಗಾಲಲ್ಲಿ ನಿಂತಿದೆ ಎಂದು ಅವರು ಆರೋಪಿಸಿದ್ದಾರೆ.

ದೇಶದಲ್ಲಿರುವ ಬಿಜೆಪಿ ಸರಕಾರಗಳು ಕೊರೋನ ಸಂದರ್ಭದಲ್ಲಿ ವಿರೋಧ ಪಕ್ಷಗಳ ಸಹಕಾರ ಕೊಡಬೇಕೆಂದು ಹೇಳುತ್ತಿವೆ. ಅದರೆ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರಕಾರಕ್ಕೆ ವಿರೋಧ ಪಕ್ಷದ ಸ್ಥಾನದಲ್ಲಿದ್ದ ಬಿಜೆಪಿ ಯಾಕೆ ಸಹಕಾರ ಕೊಡಲಿಲ್ಲವೆಂದು ಅವರು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಕೊರೋನ ಅನಿಯಂತ್ರಿತವಾಗಿ ಹರಡುವುದಕ್ಕೂ ಸರಕಾರದ ಭ್ರಷ್ಟಾಚಾರಕ್ಕೂ ನೇರವಾದ ಸಂಪರ್ಕವಿದೆ. ಈ ಕಾರಣಕ್ಕಾಗಿ ಕಾಂಗ್ರೆಸ್ ವತಿಯಿಂದ ಅಭಿಯಾನದ ಮೂಲಕ ಜನರ ಬಳಿ ನೇರವಾಗಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿ ದ್ದೇವೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News