ರೇಣುಕಾಚಾರ್ಯ ಸಹಾಯಕನಿಗೆ ಕೊರೋನ ಸೋಂಕು

Update: 2020-08-02 16:26 GMT

ದಾವಣಗೆರೆ, ಆ. 2; ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಆಪ್ತ ಸಹಾಯಕನಿಗೆ ಕೊರೋನ ಪಾಸಿಟಿವ್ ದೃಢಪಟ್ಟಿದೆ.

ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಮನೆಯ ಆವರಣದಲ್ಲೇ ಕೊರೋನ ಟೆಸ್ಟ್‍ಗೆ ವ್ಯವಸ್ಥೆ ಮಾಡಲಾಗಿತ್ತು. ತಾಲೂಕು ವೈದ್ಯಾಧಿಕಾರಿ ಡಾ. ಕೆಂಚಪ್ಪ ಆರ್.ಬಂತಿ ನೇತೃತ್ವ ವಹಿಸಿದ್ದರು.

ಈ ವೇಳೆ ನಡೆಸಲಾದ ರ್ಯಾಂಡಮ್ ಟೆಸ್ಟ್ ವೇಳೆ ಕೊರೋನ ಪಾಸಿಟಿವ್ ದೃಢಪಟ್ಟಿದೆ. ಈ ಮಧ್ಯೆ, ಎಂ.ಪಿ. ರೇಣುಕಾಚಾರ್ಯಗೂ ಕೊರೋನ ಪರೀಕ್ಷೆ ನಡೆಸಲಾಗಿದ್ದು, ವರದಿ ನೆಗೆಟಿವ್ ಬಂದಿದೆ. ಸತತ ಮೂರನೇ ಬಾರಿಗೆ ಎಂ.ಪಿ. ರೇಣುಕಾಚಾರ್ಯರ ಕೊರೋನ ಪರೀಕ್ಷಾ ವರದಿ ನೆಗೆಟಿವ್ ಬಂದಂತಾಗಿದೆ. ಒಟ್ಟು 71 ಜನರ ಪರೀಕ್ಷೆ ನಡೆಸಲಾಗಿದ್ದು, ಓರ್ವರಿಗೆ ಮಾತ್ರ ಪಾಸಿಟಿವ್ ಬಂದಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಕೆಂಚಪ್ಪ ಆರ್.ಬಂತಿ ಮಾಹಿತಿ ನೀಡಿದರು.

ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದಾಗಿ ಸಾರ್ವಜನಿಕರು ಎಚ್ಚರ ವಹಿಸಬೇಕು. ವಿನಾಕಾರಣ ಮನೆಯಿಂದ ಹೊರಗೆ ಬರಬಾರದು. ತಮ್ಮ ಬಳಿ ಕೆಲಸಕ್ಕಾಗಿ ಮನೆಗೆ ಬರುವುದುಬೇಡ. ದೂರವಾಣಿ ಮೂಲಕ ತಿಳಿಸಿದರೆ ಸಾಕು, ನಾನು ಕೆಲಸ ಮಾಡಿಕೊಡುತ್ತೇನೆ. ಆದುದರಿಂದ ದಯವಿಟ್ಟು ಯಾರೂ ತಮ್ಮ ಮನೆಗೆ ಅನವಶ್ಯಕವಾಗಿ ಬರಬಾರದು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಮನವಿ ಮಾಡಿದ್ದಾರೆ.

ಸಾರ್ವಜನಿಕರು ಇನ್ನೆರಡು-ಮೂರು ತಿಂಗಳುಗಳ ಕಾಲ ಈ ಅನಾನುಕೂಲ ಸಹಿಸಿಕೊಳ್ಳಬೇಕು. ತಮ್ಮ ಮನೆಗೆ ಬರಬೇಡಿ ಎಂಬುದನ್ನು ಅಪಾರ್ಥ ಮಾಡಿಕೊಳ್ಳಬಾರದು. ಕೊರೋನದಿಂದ ಹತಾಶರಾಗಬೇಡಿ, ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್ ಬಳಸಬೇಕು, ಜನರು ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News