ಬೆಂಗಳೂರು : 2,105 ಮಂದಿಗೆ ಕೊರೋನ ಸೋಂಕು ದೃಢ

Update: 2020-08-02 17:10 GMT

ಬೆಂಗಳೂರು, ಆ. 2: ನಗರದಲ್ಲಿ ರವಿವಾರ ಒಂದೇ ದಿನ 2,105 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಸೋಂಕಿಗೆ 21 ಜನರು ಮೃತರಾಗಿದ್ದು, 2,331 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ನಗರದಲ್ಲಿ ಇಲ್ಲಿಯವರೆಗೆ ಒಟ್ಟು 59,501 ಸೋಂಕಿತರು ದೃಢಪಟ್ಟಿದ್ದು, ಇಲ್ಲಿಯವರೆಗೆ ನಗರದಲ್ಲಿ 1,077 ಜನರು ಸೋಂಕಿಗೆ ಬಲಿಯಾಗಿ ದ್ದಾರೆ. ಅಲ್ಲದೇ 20,910 ಮಂದಿ ಇಲ್ಲಿಯವರೆಗೆ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯ ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 37,513 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯದಲ್ಲಿ ಒಟ್ಟು 56,848 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.

ಮಗುವಿನೊಂದಿಗೆ ತಾಯಿ ಇರಲು 6 ಸಾವಿರ ರೂ. ಬೇಡಿಕೆ : ಆರೋಪ

ವೆಂಕಟೇಶ್ವರನಗರದಲ್ಲಿ ವಾಸವಾಗಿರುವ ಕುಟುಂಬದಲ್ಲಿ ಗಂಡ ಮತ್ತು ಒಂದುವರೆ ವರ್ಷದ ಮಗುವಿಗೆ ಕೊರೋನ ಸೋಂಕು ತಗುಲಿದೆ. ತಾಯಿಗೆ ಕೊರೋನ ವರದಿ ನೆಗೆಟಿವ್ ಬಂದಿದ್ದು, ತಾಯಿಯನ್ನು ಮನೆಯಲ್ಲಿ ಕ್ವಾರಂಟೈನ್ ಮಾಡಿ ಮಗು ಮತ್ತು ಗಂಡನನ್ನು ಬಿಬಿಎಂಪಿ ಸಿಬ್ಬಂದಿಗಳು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆದರೆ, ಒಂದುವರೆ ವರ್ಷದ ಮಗುವನ್ನ ಬಿಟ್ಟಿರಲಾಗದ ತಾಯಿ, ಮಗುವನ್ನು ಮನೆಯಲ್ಲಿಯೇ ಕ್ವಾರಂಟೈನ್ ಮಾಡಿ ಎಂದು ಬಿಬಿಎಂಪಿ ಸಿಬ್ಬಂದಿಗಳ ಬೇಡಿಕೊಂಡಿದ್ದಾರೆ. ಇದಕ್ಕೆ ಸಿಬ್ಬಂದಿ ನಿರಾಕರಿಸಿದ್ದರಿಂದ ಮಹಿಳೆ ಆಸ್ಪತ್ರೆಯಲ್ಲಾದರೂ ಮಗುವಿನ ಜೊತೆ ಇರಲು ಅವಕಾಶ ಕೇಳುದ್ದು, ಅವಕಾಶ ನೀಡಲು ದಿನಕ್ಕೆ 6 ಸಾವಿರ ರೂ. ಚಾರ್ಜ್ ಆಗುತ್ತದೆ ಎಂದು ಸಿಬ್ಬಂದಿಗಳು ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ವೈದ್ಯರ ನಿರ್ಲಕ್ಷ್ಯ ಆರೋಪ; ವೃದ್ಧ ಮೃತ್ಯು

ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಮತ್ತೊಬ್ಬ ವೃದ್ಧ ಬಲಿಯಾಗಿದ್ದಾರೆ ಎಂದು ದೂರಲಾಗಿದೆ. ಆರ್.ಟಿ.ನಗರದ ನಿವಾಸಿ ಬಾಲಕೃಷ್ಣ ಎಂಬವರು ರವಿವಾರ ಬೆಳಗ್ಗೆ ತೀವ್ರ ಉಸಿರಾಟ ತೊಂದರೆ ಹಾಗೂ ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದರು. ಈ ವೇಳೆ ಆ್ಯಂಬುಲೆನ್ಸ್ ಗೆ ಸಂಬಂಧಿಕರು ಕರೆ ಮಾಡಿದರೂ ಆ್ಯಂಬುಲೆನ್ಸ್  ಬಂದಿಲ್ಲ ಎನ್ನಲಾಗಿದ್ದು, ಹೀಗಾಗಿ ಕ್ಯಾಬ್ ಮಾಡಿಕೊಂಡು ನಾಲ್ಕೈದು ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ. ಆದರೆ ಎಲ್ಲೂ ಅವರಿಗೆ ಬೆಡ್ ಸಿಗದಿದ್ದು, ಕೊನೆಗೆ ರಾಮಯ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

2,44,319 ಮಂದಿ ಪ್ರಥಮ, ದ್ವಿತೀಯ ಸಂಪರ್ಕಿತರು

ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ ಕೊರೋನ ಸೋಂಕಿತರ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತದಲ್ಲಿದ್ದ ಒಟ್ಟು 2,44,319 ಮಂದಿಯನ್ನು ಬಿಬಿಎಂಪಿ ಪತ್ತೆ ಮಾಡಿದೆ. ಬೊಮ್ಮನಹಳ್ಳಿ ವಲಯ- 14,425 (ಪ್ರಥಮ- 8149, ದ್ವಿತೀಯ-6276), ದಾಸರಹಳ್ಳಿ ವಲಯ- 14,060 (ಪ್ರಥಮ-6598, ದ್ವಿತೀಯ-7462), ಪೂರ್ವ ವಲಯ- 50,884(ಪ್ರಥಮ- 24,669, ದ್ವಿತೀಯ-26,215), ಮಹದೇವಪುರ ವಲಯ- 15,031 (ಪ್ರಥಮ- 7067, ದ್ವಿತೀಯ-7064), ಆರ್.ಆರ್ ನಗರ ವಲಯ- 8669 (ಪ್ರಥಮ- 5373, ದ್ವಿತೀಯ-3296), ದಕ್ಷಿಣ ವಲಯ- 82,362 (ಪ್ರಥಮ-27,550, ದ್ವಿತೀಯ-54,812), ಪಶ್ಚಿಮ ವಲಯ- 47,126 (ಪ್ರಥಮ- 24,856, ದ್ವಿತೀಯ-22,270) ಹಾಗೂ ಯಲಹಂಕ ವಲಯ- 11,762 (ಪ್ರಥಮ- 5689, ದ್ವಿತೀಯ-6073) ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರು ಪತ್ತೆಯಾಗಿದ್ದಾರೆ.

ಸರಕಾರದ ದರದಲ್ಲಿ ಪರೀಕ್ಷೆ: ವಿಕ್ರಮ್ ಆಸ್ಪತ್ರೆ

ವಿಕ್ರಮ್ ಆಸ್ಪತ್ರೆ ಕೊರೋನ ಪರೀಕ್ಷೆಗೆ ಹೆಚ್ಚುವರಿ ಪಡೆದಿರುವ ಹಣವನ್ನು ವಾಪಸ್ ನೀಡಬೇಕು ಎಂದು ವಿಕ್ರಮ್ ಆಸ್ಪತ್ರೆಗೆ ಅಧಿಕಾರಿಗಳ ತಂಡ ಸೂಚಿಸಿದ್ದರಿಂದ ವಿಕ್ರಮ್ ಆಸ್ಪತ್ರೆಯು ಐ.ಸಿ.ಎಮ್.ಆರ್ ಮತ್ತು ರಾಜ್ಯ ಸರಕಾರ ನಿಗದಿಪಡಿಸಿದ ದರವನ್ನು ಸಂಗ್ರಹಿಸಲು ಒಪ್ಪಿದೆ. ಅಲ್ಲದೆ ಈ ಹಿಂದೆ ಪರೀಕ್ಷೆ ಮಾಡಿಸಿಕೊಂಡಿರುವವರ ಬಳಿ ಹೆಚ್ಚು ಹಣ ಪಡೆದಿದ್ದವರಿಗೆ ಬಾಕಿ ಹಣವನ್ನು ವಿಕ್ರಮ್ ಆಸ್ಪತ್ರೆ ಕೂಡಲೆ ಹಿಂತಿರುಗಿಸುವುದಾಗಿ ಒಪ್ಪಿಗೆ ಪತ್ರವನ್ನು ಖಾಸಗಿ ಆಸ್ಪತ್ರೆಗಳ ಉಸ್ತುವಾರಿಯಾದ ಹಿರಿಯ ಐ.ಎ.ಎಸ್ ಅಧಿಕಾರಿ ಮೊಹಮದ್ ಮೊಹ್ಸಿನ್‍ ಅವರಿಗೆ ನೀಡಲಾಗಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News