ಕೊರೋನ ಸಂಕಷ್ಟ: ಗಣೇಶ ಮೂರ್ತಿಗಳ ಮಾರಾಟಕ್ಕೆ ಕುತ್ತು; ಆತಂಕದಲ್ಲಿ ಮಾರಾಟಗಾರರು

Update: 2020-08-03 18:12 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.3 : ನಗರದಲ್ಲಿ ಕೊರೋನ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಸಾರ್ವಜನಿಕ ಗಣೇಶೋತ್ಸವಕ್ಕೆ ನಗರಪಾಲಿಕೆ ಅವಕಾಶ ನಿರಾಕರಿಸಿದೆ.

ಕೆರೆ, ಕಲ್ಯಾಣಿಗಳಲ್ಲಿ ಮೂರ್ತಿ ವಿಸರ್ಜನೆಗೆ ವ್ಯವಸ್ಥೆ ಕಲ್ಪಿಸುತ್ತಿಲ್ಲ. ಇದರಿಂದಾಗಿ ಈಗಾಗಲೇ ಸಿದ್ಧಪಡಿಸಿದ ಲಕ್ಷಾಂತರ ಗಣೇಶ ಮೂರ್ತಿಗಳು ಮಾರಾಟವಾಗದೆ ಉಳಿಯುವ ಆತಂಕವನ್ನು ಮೂರ್ತಿ ಮಾರಾಟಗಾರರು, ತಯಾರಕರು ವ್ಯಕ್ತಪಡಿಸಿದ್ದಾರೆ.

ಗಣೇಶ ಚತುರ್ಥಿಯ ಅಂಗವಾಗಿಯೇ ವರ್ಷಪೂರ್ತಿ ಕಾದು ಮೂರ್ತಿಗಳನ್ನು ತಯಾರು ಮಾಡಿದರೂ ಮೂರ್ತಿಗಳ ಮಾರಾಟ ನಡೆಯುವುದು ಹಬ್ಬ ಸಮೀಪಿಸಿದಾಗ ಮಾತ್ರ. ಲಾಕ್‍ಡೌನ್ ಆರಂಭವಾಗುವವರೆಗೂ ಹೆಚ್ಚಿನವರು ಮೂರ್ತಿ ತಯಾರಿಸಿ ಇಟ್ಟಿದ್ದಾರೆ. ನಗರದ ಪಾಟರಿ ಟೌನ್, ನಾಗವಾರ, ವೆಂಕಟೇಶಪುರ, ಥಣಿಸಂದ್ರ, ಕೆ. ನಾರಾಯಣಪುರ ಮತ್ತಿತರೆಡೆ ಮೂರ್ತಿಗಳನ್ನು ತಯಾರಿಸಲಾಗುತ್ತದೆ. ನಗರದಲ್ಲಿ 200ಕ್ಕೂ ಹೆಚ್ಚು ಕುಟುಂಬಗಳು ಮೂರ್ತಿ ತಯಾರಿಕೆಯಲ್ಲಿ ತೊಡಗಿವೆ.

ಪ್ರತಿ ಕುಟುಂಬ ಸರಾಸರಿ ತಲಾ 5 ಸಾವಿರದಿಂದ 25 ಸಾವಿರದವರೆಗೆ ಪರಿಸರ ಸ್ನೇಹಿ ಮಣ್ಣಿನ ಮೂರ್ತಿಗಳನ್ನು ತಯಾರಿಸಿವೆ. ನಗರ ಹಾಗೂ ಹೊರವಲಯದಲ್ಲಿ ತಯಾರಾಗುವ ಮೂರ್ತಿಗಳು ನಗರದಲ್ಲಿ ಮಾತ್ರವಲ್ಲದೆ, ರಾಜ್ಯದ ನಾನಾ ಕಡೆಗಳಿಗೆ, ಬೇರೆ ರಾಜ್ಯಗಳಿಗೂ ರವಾನೆಯಾಗುತ್ತವೆ. ಆದರೆ, ಕೊರೋನ ಕಾರಣದಿಂದ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಇಲ್ಲದಂತಾಗಿದೆ.

ಗಣೇಶ ಹಬ್ಬ ಹತ್ತಿರವಾಗುತ್ತಿದ್ದು, ನಗರದ ಹಲವು ಕಡೆಗಳಿಂದ ಯುವಕರ ತಂಡಗಳು ಆಗಮಿಸಿ ಮೂರ್ತಿಗಳನ್ನು ಮುಂಗಡವಾಗಿ ಬುಕ್ ಮಾಡಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಇನ್ನೂ ಯಾರೂ ಈ ಕಡೆಗೆ ಬಂದಿಲ್ಲ. ಸಾಮಾನ್ಯವಾಗಿ ಈ ಸಮಯಕ್ಕೆ ಅಂದಾಜು ಶೇ.75ರಷ್ಟು ಮೂರ್ತಿಗಳು ಖಾಲಿಯಾಗುತ್ತಿದ್ದವು. ಆದರೆ ಈ ಬಾರಿ ಮಾರಾಟ ಚುರುಕಾಗುವ ಲಕ್ಷಣಗಳೇ ಕಾಣುತ್ತಿಲ್ಲ ಎಂದು ನ್ಯೂ ಪಾಟರಿ ಟೌನ್‍ನ ಮೂರ್ತಿ ತಯಾರಕ ರಾಜಶೇಖರ್ ಹೇಳಿದ್ದಾರೆ.

100 ರೂ. ಮೌಲ್ಯದ ಮೂರ್ತಿಗೆ 70 ರೂ.ಖರ್ಚು: ನಗರದ ಸುತ್ತಮುತ್ತಲಿನಲ್ಲಿ ಸಾಕಷ್ಟು ಕೆರೆಗಳು ಮುಚ್ಚಿ ಹೋಗಿದ್ದು, ಮೂರ್ತಿಗಳನ್ನು ತಯಾರಿಸಲು ಮಣ್ಣಿನ ಕೊರತೆ ಎದುರಾಗಿದೆ. ಹೀಗಾಗಿ, ತಯಾರಕರು ಬೆಂಗಳೂರು ಗ್ರಾಮಾಂತರ ಪ್ರದೇಶಗಳ ಕೆರೆಗಳಿಂದ ಒಂದು ಕೆ.ಜಿ. ಮಣ್ಣಿಗೆ 4.50 ರೂ. ಕೊಟ್ಟು ಖರೀದಿಸುತ್ತಿದ್ದಾರೆ. ನಂತರ ಮೂರ್ತಿ ತಯಾರಿಕೆಗೆ ಮಣ್ಣನ್ನು ಸಿದ್ಧಪಡಿಸಿಕೊಳ್ಳಲು ಕೆ.ಜಿ.ಗೆ ಕನಿಷ್ಟ ಹತ್ತು ರೂ. ಖರ್ಚು ಬರುತ್ತದೆ. ಪರಿಸರ ಸ್ನೇಹಿ ಬಣ್ಣ, ಮೌಲ್ಡ ಇತ್ಯಾದಿ ಸೇರಿದಂತೆ 100 ರೂ. ಮೌಲ್ಯದ ಮೂರ್ತಿಗೆ 70-80 ರೂ. ಖರ್ಚು ಮಾಡಬೇಕು ಎಂದು ಮೂರ್ತಿ ತಯಾರಕ ಶಿವಶಂಕರ್ ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News