ಬೆಂಗಳೂರು: ಅಕ್ರಮವಾಗಿ ನೆಲೆಸಿದ್ದ ವಿದೇಶಿಗರಿಗೆ ಬಿಸಿ ಮುಟ್ಟಿಸಿದ ಸಿಸಿಬಿ; ನಕಲಿ ಕರೆನ್ಸಿ ಜಪ್ತಿ

Update: 2020-08-04 11:50 GMT

ಬೆಂಗಳೂರು, ಆ.4: ವೀಸಾ ಅವಧಿ ಮುಗಿದರೂ ನಗರದ ವಿವಿಧೆಡೆ ಅಕ್ರಮವಾಗಿ ನೆಲೆಸಿದ್ದ ವಿದೇಶಿ ಪ್ರಜೆಗಳ ಮೇಲೆ ಸಿಸಿಬಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ 20 ಜನ ವಿದೇಶಿಗರನ್ನು ಬಂಧಿಸಿದ್ದು, ನಕಲಿ ಕರೆನ್ಸಿ ಜಪ್ತಿ ಮಾಡಿದ್ದಾರೆ.

ಬೆಂಗಳೂರಿನ ಬಾಗಲೂರು, ಕೊತ್ತನೂರು ಸೇರಿದಂತೆ ಮತ್ತಿತರ ಕಡೆ ಕಾನೂನು ಬಾಹಿರವಾಗಿ ನೆಲೆಸಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿ ಸಿಸಿಬಿ ಹೆಚ್ವುವರಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಡಿಸಿಪಿ ರವಿ ಹಾಗೂ ಕುಲದೀಪ್ ಕುಮಾರ್ ಜೈನ್ ಮಾರ್ಗದರ್ಶನದಲ್ಲಿ 120ಕ್ಕೂ ಹೆಚ್ಚು ಪೊಲೀಸರು 85ಕ್ಕೂ ಹೆಚ್ಚು ಮನೆಗಳ ದಿಢೀರ್ ದಾಳಿ ನಡೆಸಿದಾಗ ವೀಸಾ ಅವಧಿ ಮುಗಿದರೂ ನಗರದಲ್ಲಿ ಅಕ್ರಮವಾಗಿ ನೆಲೆಸಿರುವುದು ಪತ್ತೆಯಾಗಿದೆ.

ಇದರ ಜೊತೆಗೆ ಮೂವರು ವಿದೇಶಿ ಪ್ರಜೆಗಳು ನಕಲಿ ಕರೆನ್ಸಿ ದಂಧೆಯಲ್ಲಿ ತೊಡಗಿಸಿಕೊಂಡಿರುವುದು ಬೆಳಕಿಗೆ ಬಂದಿದ್ದು, ಆರೋಪಿಗಳಿಂದ ಲ್ಯಾಪ್‍ಟ್ಯಾಪ್, ಅಮೆರಿಕನ್ ಡಾಲರ್, ಬ್ರಿಟನ್ ಪೌಂಡ್ಸ್ ಸೇರಿದಂತೆ ಮತ್ತಿತರ ಪ್ರಮುಖ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸದ್ಯ ಪೊಲೀಸರ ವಶದಲ್ಲಿರುವ ಆಫ್ರಿಕಾ ಪ್ರಜೆಗಳು ಬೆಂಗಳೂರು ಸೇರಿದಂತೆ ಮತ್ತಿತರ ಕಡೆ ನಡೆದ ಸೈಬರ್ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಶಂಕೆಯಿದ್ದು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಕಾರ್ಯಾಚರಣೆಗೆ ಮೆಚ್ಚುಗೆ

ಅಕ್ರಮವಾಗಿ ನಗರದಲ್ಲಿ ವಾಸವಿದ್ದ ಆಫ್ರಿಕಾ ಪ್ರಜೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದಿರುವುದಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News