ಬಿಜೆಪಿ ನಾಯಕರ ಮೇಲೆ ಮಾನನಷ್ಟ ಮೊಕದ್ದಮೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

Update: 2020-08-04 13:29 GMT

ಕಲಬುರಗಿ, ಆ.4: ಕೋವಿಡ್-19 ಪ್ರಾರಂಭವಾದ ನಂತರ ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಈ ಭ್ರಷ್ಟಾಚಾರದ ಬಗ್ಗೆ ಚರ್ಚಿಸಲು ರಾಜ್ಯ ಸರಕಾರ ಅಧಿವೇಶನ ಕರೆಯಲಿ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ನೆಪದಲ್ಲಿ ಹಣದ ಲೂಟಿಯಾಗುತ್ತಿದೆ. ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಪ್ರತಿಯೊಬ್ಬ ಮಂತ್ರಿ ತನಗೆಷ್ಟು ಸಿಗುತ್ತದೆ ಎಂಬುದರ ಬಗ್ಗೆಯೇ ತಲ್ಲೀನರಾಗಿದ್ದಾರೆ. ಹೀಗಾಗಿ ನಾವು ಸರಕಾರಕ್ಕೆ ಲೆಕ್ಕ ಕೇಳುತ್ತಿದ್ದೇವೆಂದು ತಿಳಿಸಿದ್ದಾರೆ.

ಕೇವಲ 21 ದಿನದಲ್ಲೇ ಕೊರೋನವನ್ನು ನಿಯಂತ್ರಿಸುತ್ತೇವೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ನಾವೆಲ್ಲರೂ ಬೆಂಬಲ ಕೊಟ್ಟೆವು. ಲಾಕ್‍ಡೌನ್, ಸೀಲ್‍ಡೌನ್ ಎಲ್ಲ ಮುಗಿದು ನಾಲ್ಕು ಕಳೆದರೂ ಕೊರೋನ ಪ್ರಕರಣಗಳು ಹೆಚ್ಚುತ್ತಿವೆಯೇ ಹೊರತು ಕಡಿಮೆಯಾಗುತ್ತಿಲ್ಲ. ಇದನ್ನು ನಿಭಾಯಿಸುವಲ್ಲಿ ಸರಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ರಾಜ್ಯ ಸರಕಾರ ತಾವೇ 10,500 ಬೆಡ್ ಒಳಗೊಂಡ ಆಸ್ಪತ್ರೆ ಮಾಡುತ್ತೇವೆಂದು ಒಂದು ಬೆಡ್‍ಗೆ ದಿನವೊಂದಕ್ಕೆ 800 ರೂ.ನಂತೆ ಬಾಡಿಗೆ ಆಧಾರದ ಮೇಲೆ ಬುಕ್ ಮಾಡಿದರು. ಅಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಂದ ನಂತರ ಖರೀದಿ ಮಾಡುವುದಾಗಿ ಹೇಳಿದರು. ಹೀಗೆ ಸರಕಾರದ ಭ್ರಷ್ಟಾಚಾರ ನಿರಂತರವಾಗಿ ಮುಂದುವರಿಯುತ್ತಿದೆ ಎಂದು ಅವರು ಹೇಳಿದರು.

ಆಹಾರಧಾನ್ಯ ವಿತರಣೆಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ನಾವು ಸಾಕ್ಷಿ ಸಮೇತವಾಗಿ ಹಿಡಿದು ಸಂಬಂಧಿಸಿದ ಅಧಿಕಾರಿಗಳಿಗೆ ಒಪ್ಪಿಸಿದೆವು. ಆ ವ್ಯವಹಾರದ ಸಂಬಂಧ ಒಂದು ದೂರು ದಾಖಲಾಗಿಲ್ಲ. ಆರೋಪಿಗಳನ್ನು ಬಂಧಿಸಿಲ್ಲ. ಸುಮಾರು 4 ಸಾವಿರ ಕೋಟಿ ರೂ.ನಲ್ಲಿ ಸಾವಿರಾರು ಕೋಟಿ ರೂ. ಭ್ರಷ್ಟಾಚಾರ ಆಗಿರುವುದನ್ನು ಸಿದ್ದರಾಮಯ್ಯ, ಎಚ್.ಕೆ.ಪಾಟೀಲ್ ಹಾಗೂ ನಾನು ಸರಕಾರದ ಬಳಿ ಲೆಕ್ಕ ಕೇಳಿದ್ದೇವೆಂದು ಅವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಸರಕಾರವನ್ನು ಹತ್ತು ಪರ್ಸೆಂಟ್ ಸರಕಾರವೆಂದು ಆರೋಪಿಸಿದ್ದರು. ಈಗ ಬಿಜೆಪಿ ಸರಕಾರದ ಅವಧಿಯಲ್ಲಿ ಇನ್ನೂರು, ಮುನ್ನೂರು ಪರ್ಸೆಂಟ್ ನಡೀತಿದೆ. ನಮ್ಮ ಸರಕಾರದ ಅವಧಿಯಲ್ಲಿ ಅವ್ಯವಹಾರ ನಡೆದಿದ್ದರೆ ನಮ್ಮನ್ನು ಶಿಕ್ಷಿಸಲಿ ಎಂದು ಅವರು ಹೇಳಿದರು.

ಈ ಭಾಗದಲ್ಲಿ ಕೋವಿಡ್ ಚಿಕಿತ್ಸೆಗಾಗಿ ಹಾಸಿಗೆಗಳ ಕೊರತೆಯ ಹಿನ್ನೆಲೆಯಲ್ಲಿ ಶಾಸಕ ಪ್ರಿಯಾಂಕ ಖರ್ಗೆ ತಮ್ಮ ಸ್ವಂತ ಹಣದಲ್ಲಿ 650 ಬೆಡ್‍ಗಳನ್ನು ಖರೀದಿ ಮಾಡಿಕೊಟ್ಟರೆ, ಕಾಂಗ್ರೆಸ್‍ನವರ ಬೆಡ್ ನಮಗೆ ಬೇಡವೆಂದು ತಿರಸ್ಕರಿಸಲಾಗಿದೆ. ಇದರಲ್ಲೂ ರಾಜಕೀಯ ಮಾಡಲು ಹೊರಟ್ಟಿದ್ದಾರೆ. ಬೆಡ್ ಬೇಡವೆಂದ ಇಲ್ಲಿನ ಕೆಲ ಅಧಿಕಾರಿಗಳಿಗೆ ವಿದ್ಯೆನೂ ಇಲ್ಲ, ಬುದ್ಧಿನೂ ಇಲ್ಲವೆಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಮೇಲೂ ಮೊಕದ್ದಮೆ

ತಮಿಳುನಾಡಲ್ಲಿ 5.18 ಲಕ್ಷ ರೂ. ಮೌಲ್ಯದ ಕಿಟ್‍ಗೆ ರಾಜ್ಯ ಸರಕಾರ 18 ಲಕ್ಷ ರೂ. ನೀಡಿ ಖರೀದಿ ಮಾಡಿದೆ. 50 ರೂ.ಗೆ ಸಿಗುವ ಸ್ಯಾನಿಟೈಸರ್ ಗೆ 600 ರೂ. ನೀಡಲಾಗಿದೆ. ಥರ್ಮಲ್ ಸ್ಕ್ಯಾನ್, ಮಾಸ್ಕ್, ಆಕ್ಸಿಜನ್ ಹೀಗೆ ಎಲ್ಲದರಲ್ಲೂ ಮೂರು-ನಾಲ್ಕು ಪಟ್ಟು ಜಾಸ್ತಿ ದುಡ್ಡು ಕೊಟ್ಟು ಖರೀದಿ ಮಾಡಿದೆ. ಇಂತಹ ಭ್ರಷ್ಟ ಬಿಜೆಪಿ ಸರಕಾರಕ್ಕೆ ನಾವು ಸಹಕಾರ ನೀಡಬೇಕಾ? ಕೋವಿಡ್-19 ಭ್ರಷ್ಟಾಚಾರ ಸಂಬಂಧ ನಾವು ಲೆಕ್ಕ ಕೇಳಿದರೆ ನಮಗೆ ನೋಟಿಸ್ ಕೊಟ್ಟಿದ್ದಾರೆ. ಎಂತೆಂಥಹ ನೋಟಿಸ್‍ಗೆ ಹೆದರಲಿಲ್ಲ. ಇನ್ನು, ನಿಮ್ಮ ನೋಟಿಸ್‍ಗೆ ಹೆದರುತ್ತೇವೆಯೇ. ಇಂತಹ ನೂರಾರು ನೋಟಿಸ್‍ಗಳನ್ನು ಎದುರಿಸುವ ಶಕ್ತಿ ನಮಗೆ ಇದೆ. ಬಿಜೆಪಿ ನಾಯಕರ ಮೇಲೆನೂ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News