ಬೆಂಗಳೂರಿನಲ್ಲಿಂದು 4,274 ಮಂದಿ ಕೊರೋನದಿಂದ ಗುಣಮುಖ: 2,035 ಜನರಿಗೆ ಪಾಸಿಟಿವ್

Update: 2020-08-04 15:23 GMT

ಬೆಂಗಳೂರು, ಆ.4: ನಗರದಲ್ಲಿ ಮೊದಲ ಬಾರಿಗೆ ಕೊರೋನ ಸೋಂಕಿತರ ಪ್ರಮಾಣಕ್ಕಿಂತ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ ಹೆಚ್ಚಾಗಿದ್ದು, ಕೊರೋನ ಭೀತಿಯಲ್ಲಿದ್ದ ಬೆಂಗಳೂರಿಗರು ಕೊಂಚ ನಿರಾಳರಾಗಿದ್ದಾರೆ.

ನಗರದಲ್ಲಿ ಮಂಗಳವಾರ ಒಂದೇ ದಿನ 2,035 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, 4,274 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಅಲ್ಲದೇ ಮಂಗಳವಾರ 30 ಜನರು ಮೃತಪಟ್ಟಿದ್ದಾರೆ.

ಇಲ್ಲಿಯವರೆಗೆ ನಗರದಲ್ಲಿ 27,877 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ನಗರದಲ್ಲಿ ಒಟ್ಟು 63,033 ಕೊರೋನ ಸೋಂಕಿತರು ದೃಢಪಟ್ಟಿದ್ದು, ಇಲ್ಲಿಯವರೆಗೆ ನಗರದಲ್ಲಿ 1,134 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 34021 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯದಲ್ಲಿ ಒಟ್ಟು 62,498 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.

ಭಾರತೀಯ ವಿಜ್ಞಾನ ಸಂಸ್ಥೆಯ 19 ಮಂದಿಗೆ ಕೊರೋನ: ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವಿದ್ಯಾರ್ಥಿಗಳು, ಬೋಧಕರು, ಸಿಬ್ಬಂದಿ ಕುಟುಂಬದ ಸದಸ್ಯರು ಸೇರಿದಂತೆ ಒಟ್ಟು 19 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ.

ಕ್ಯಾಂಪಸ್ ನಲ್ಲಿದ್ದ 34 ಮಂದಿ ಪಿಂಚಣಿದಾರರು, ಉದ್ಯೋಗಿಗಳಿಗೂ ಕೊರೋನ ಬಂದಿದೆ. ಸೋಂಕಿತ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಎಲ್ಲಾ 50 ಮಂದಿಯನ್ನು ಕ್ವಾಂರೈಟನ್ ಮಾಡಲಾಗಿದ್ದು, ಸಂಸ್ಥೆಯ ಕ್ಯಾಂಪಸ್ ಆವರಣದಲ್ಲಿನ ಸಾರ್ವಜನಿಕ ಸ್ಥಳಗಳನ್ನು ಸ್ಯಾನಿಟೈಸ್ ಮಾಡಲಾಗಿದೆ.

ಹೊರರೋಗಿಗಳ ವಿಭಾಗ ಬಂದ್

ವಸಂತ ನಗರದ ಆಸ್ಪತ್ರೆಯೊಂದರ ಹೊರರೋಗಿಗಳ ವಿಭಾಗವನ್ನು ಬಂದ್ ಮಾಡಲಾಗಿದೆ. ಆಸ್ಪತ್ರೆಯ ಆಡಳಿತ ಮಂಡಳಿ ಸರಕಾರದ ಕಡೆಯಿಂದ ದಾಖಲಾಗುವ ಸೋಂಕಿತರಿಂದ ಮುಂಗಡ ಹಣ ಪಡೆದು, ನಂತರ ರೋಗಿಗಳನ್ನು ದಾಖಲಿಸಿಕೊಳ್ಳದೆ ನೆಪ ಹೇಳುತ್ತಿರುವುದು ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಬಿಬಿಎಂಪಿ ಪೂರ್ವ ವಲಯದ ಜಂಟಿ ಆಯುಕ್ತರಾದ ಪಲ್ಲವಿ, ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ಹೊರ ರೋಗಿ ವಿಭಾಗವನ್ನು ಬಂದ್ ಮಾಡಿ ನೋಟಿಸ್ ಜಾರಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News