ವೆಂಟಿಲೇಟರ್ ಬೆಡ್‍ಗಳ ಸಂಖ್ಯೆ ಹೆಚ್ಚಳಕ್ಕೆ ಕ್ರಮ: ಸಿಎಂ ಯಡಿಯೂರಪ್ಪ

Update: 2020-08-04 15:49 GMT

ಬೆಂಗಳೂರು, ಆ. 4: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಈ ಮಧ್ಯೆಯೇ ರಾಜ್ಯದಲ್ಲಿ ವೆಂಟಿಲೇಟರ್ ಬೆಡ್‍ಗಳನ್ನು ಹೆಚ್ಚಿಸುವ ಸಂಬಂಧ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಂಗಳವಾರ ಸಭೆ ನಡೆಸಿದರು.

ಆ ಬಳಿಕ ಮಾತನಾಡಿದ ಯಡಿಯೂರಪ್ಪ, ಕೇಂದ್ರ ಸರಕಾರದ ಪಿ.ಎಂ.ಕೇರ್ಸ್ ಅಡಿಯಲ್ಲಿ ಕರ್ನಾಟಕ ರಾಜ್ಯಕ್ಕೆ 681 ವೆಂಟಿಲೇಟರ್ ಗಳು ದೊರಕಿವೆ. ಕಳೆದ ವಾರದಲ್ಲಿ ಬೆಂಗಳೂರಿನಲ್ಲಿ 166 ಸೇರಿದಂತೆ ರಾಜ್ಯದಲ್ಲಿ ವೆಂಟಿಲೇಟರ್ ಬೆಡ್‍ಗಳ ಸಂಖ್ಯೆಯನ್ನು ಒಟ್ಟು 335ಕ್ಕೆ ಹೆಚ್ಚಿಸಲಾಗಿದೆ. ಈ ವಾರದ ಅಂತ್ಯದಲ್ಲಿ ಉಳಿದ 346 ವೆಂಟಿಲೇಟರ್ ಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.

ಕೇಂದ್ರ ಸರಕಾರ ಕರ್ನಾಟಕ ರಾಜ್ಯಕ್ಕೆ ಒದಗಿಸಿರುವ 1,279 ವೆಂಟಿಲೇಟರ್ ಗಳು ಈ ತಿಂಗಳ ಅಂತ್ಯದಲ್ಲಿ ದೊರಕಲಿವೆ. ಈ ಎಲ್ಲ ವೆಂಟಿಲೇಟರ್ ಗಳನ್ನು ತಕ್ಷಣವೇ ಅಳವಡಿಸಬೇಕು ಎಂದು ಸೂಚಿಸಿದ ಯಡಿಯೂರಪ್ಪನವರು, ಆಸ್ಪತ್ರೆಯ ಸಿಬ್ಬಂದಿ ಈ ವೆಂಟಿಲೇಟರ್ ಗಳನ್ನು ಬಳಸಬೇಕು. ಅನೆಸ್ಥಿಟಿಕ್ಸ್, ಪಾರಾ ಮೆಡಿಕಲ್ ಸಿಬ್ಬಂದಿಗಳನ್ನು ತಕ್ಷಣವೇ ನೇಮಕ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವೆಂಟಿಲೇಟರ್ ಗಳನ್ನು ಒದಗಿಸಲು ಬೆಂಗಳೂರಿನ ಖಾಸಗಿ ಆಸ್ಪತ್ರೆಗಳು ಮಾಡಿರುವ ಮನವಿಯನ್ನು ಪರಿಗಣಿಸುವಂತೆ ಸೂಚಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಕೋವಿಡ್-19 ಸಂಬಂಧ ತಾತ್ಕಾಲಿಕವಾಗಿ ಒದಗಿಸಲು ಷರತ್ತು ಮತ್ತು ನಿಯಮಗಳ ಬಗ್ಗೆ ತೀರ್ಮಾನಿಸಬೇಕು. ಕೊರೋನ ಸೋಂಕು ನಿಯಂತ್ರಣ ಮತ್ತು ಸಾವಿನ ಪ್ರಮಾಣ ಕಡಿಮೆ ಮಾಡಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News