ಬಿಬಿಎಂಪಿ ಕೌನ್ಸಿಲ್ ಸಭೆ: ಖಾಸಗಿ ಆಸ್ಪತ್ರೆಗಳ ನಡೆಗೆ ಪಾಲಿಕೆ ಸದಸ್ಯರ ಆಕ್ರೋಶ

Update: 2020-08-04 17:04 GMT

ಬೆಂಗಳೂರು, ಆ.4: ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡಲು ನಿರಾಕರಿಸುವ, ದುಪ್ಪಟ್ಟು ಹಣ ಕಟ್ಟಿಸಿಕೊಳ್ಳಲು ಹಾಗೂ ಮೃತದೇಹ ನೀಡಲು ಸತಾಯಿಸುತ್ತಿದ್ದಾರೆ ಎಂದು ಖಾಸಗಿ ಆಸ್ಪತ್ರೆಗಳ ವಿರುದ್ಧ ಪಾಲಿಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನಡೆದ ಬಿಬಿಎಂಪಿ ಕೌನ್ಸಿಲ್ ಸಭೆಯ ಆರಂಭದಲ್ಲಿ ಖಾಸಗಿ ಆಸ್ಪತ್ರೆ ಹಾಗೂ ಆ್ಯಂಬುಲೆನ್ಸ್ ವಿಚಾರವಾಗಿ ಗದ್ದಲ ಉಂಟಾಯಿತು. ಖಾಸಗಿ ಆಸ್ಪತ್ರೆಗಳು ಬೆಡ್ ವಿಚಾರವಾಗಿ ಪಾಲಿಕೆಗೆ ಮಾಹಿತಿ ನೀಡುತ್ತಿಲ್ಲ. ಮಣಿಪಾಲ್ ಆಸ್ಪತ್ರೆಯಲ್ಲಿ 700 ಬೆಡ್ ಇವೆ. ಆದರೆ, ಪಾಲಿಕೆಗೆ 70 ಬೆಡ್ ನೀಡಿದೆ ಎಂದು ಪ್ರಶ್ನಿಸಿದ ವಿಧಾನ ಪರಿಷತ್ ಸದಸ್ಯ ರಮೇಶ್‍ಗೌಡ, ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್, ಜೂ.23ರಂದು ರಾಜ್ಯ ಸರಕಾರ ಒಂದು ಆದೇಶವನ್ನು ಹೊರಡಿಸಿದೆ. ಈ ಆದೇಶದಲ್ಲಿ ಎಲ್ಲಾ ಖಾಸಗಿ ಆಸ್ಪತ್ರೆಗಳು ಬಿಬಿಎಂಪಿಯಿಂದ ಕಳಿಸುವ ರೋಗಿಗಳಿಗಾಗಿ ಶೇ.50ರಷ್ಟು ಬೆಡ್ ಮೀಸಲಿಡಬೇಕು. ಅವರ ಸಂಪೂರ್ಣ ವೆಚ್ಚ ಸರಕಾರ ಭರಿಸಲಿದೆ ಎಂದು ಹೇಳಿದೆ. ಖಾಸಗಿ ಆಸ್ಪತ್ರೆಗಳು ಹಣಕ್ಕಾಗಿ ಒತ್ತಡ ಹಾಕುವಂತಿಲ್ಲ, ಸಂಪೂರ್ಣ ವೆಚ್ಚವನ್ನು ನಾವು ಭರಿಸುತ್ತೇವೆ. ಉಳಿದ ಶೇ.50ರಷ್ಟು ಖಾಸಗಿಯವರು ಹಣ ಪಡೆಯಬಹುದು. ಅದಕ್ಕೆ ಸರಕಾರವೇ ದರ ನಿಗದಿ ಮಾಡಿದೆ ಎಂದು ಸಭೆಗೆ ತಿಳಿಸಿದರು.

ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ

ಕೊರೋನ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡದೆ ಸತಾಯಿಸುವ, ಸುಳ್ಳು ಹೇಳಿ ಕಳ್ಳಾಟ ಮಾಡುವ ಹಾಗೂ ಹೆಚ್ಚಿನ ಹಣ ಪಡೆಯುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಆಯುಕ್ತರು ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ ನೀಡಿದರು.

156 ಪೌರಕಾರ್ಮಿಕರಿಗೆ ಕೊರೋನ

ಇದುವರೆಗೂ 4,664 ಮಂದಿ ಪೌರಕಾರ್ಮಿಕರು ಹಾಗೂ ಡ್ರೈವರ್ ಗಳಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ. ಇದರಲ್ಲಿ 156 ಪೌರಕಾರ್ಮಿಕರಿಗೆ ಕೊರೋನ ದೃಢಪಟ್ಟಿದೆ. ಸೋಂಕಿತ ಪೌರಕಾರ್ಮಿಕರಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಿವಾಜಿ ನಗರದಲ್ಲಿ ಹೊಸದೊಂದು ಕೋವಿಡ್ ಆಸ್ಪತ್ರೆ ಸಿದ್ಧವಾಗುತ್ತಿದೆ. ಅದರಲ್ಲಿ ಶೇ.50ರಷ್ಟು ಬೆಡ್‍ಗಳನ್ನು ಕೊರೋನ ವಾರಿಯರ್ಸ್ ಗಳಿಗೆ ಮೀಸಲಿಡಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದರು.

ಕೆರೆಗಳಿಗೆ ಮಲಿನ ನೀರು ತಪ್ಪಿಸಲು ಆಗ್ರಹ

ಪಾಲಿಕೆ ವ್ಯಾಪ್ತಿಯಲ್ಲಿರುವ 250 ಕೆರೆಗಳ ಹೂಳನ್ನು ತೆಗೆದು ಕೆರೆಗಳ ಸುತ್ತಲು ತಂತಿ ಬೇಲಿ ಅಳವಡಿಸದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ಉಂಟಾಗಲಿದೆ. ಕೈಗಾರಿಕೆಗಳು ಸ್ಥಗಿತವಾಗಿರುವದರಿಂದ ಕೆರೆಗಳ ನೀರು ಶುದ್ಧವಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ಕೈಗಾರಿಕೆಗಳು ಪ್ರಾರಂಭವಾಗುದರಿಂದ ಮತ್ತೆ ಕೆರೆಗಳಲ್ಲಿ ನೈರ್ಮಲ್ಯ ಉಂಟಾಗಲಿದೆ. ಆದ್ದರಿಂದ ಕೆರೆಗಳಿಗೆ ಮಲೀನ ನೀರು ಹರಿಯುವುದನ್ನು ತಪ್ಪಿಸಬೇಕು ಎಂದು ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಒತ್ತಾಯಿಸಿದರು.

ಸಭೆಯ ಪ್ರಮುಖ ನಿರ್ಣಯಗಳು

ಕುಮಾರಸ್ವಾಮಿ ಲೇಔಟ್‍ನಲ್ಲಿರುವ ಒಳಾಂಗಣ ಕ್ರೀಡಾಂಗಣದ ಶೆಟಲ್‍ಕೋರ್ಟ್‍ಗೆ `ಅನಂತಕುಮಾರ್ ಕ್ರೀಡಾಂಗಣ', ಮಾಗಡಿ ರಸ್ತೆಯಲ್ಲಿರುವ ನಮ್ಮ ಮೆಟ್ರೋ ನಿಲ್ದಾಣಕ್ಕೆ `ಡಾ. ರಾಜ್‍ಕುಮಾರ್ ನಿಲ್ದಾಣ', ದೊಮ್ಮಲೂರು ಲೇಔಟ್‍ನ ಮೊದಲನೇ ಮೇನ್‍ರೋಡ್‍ಗೆ `ಕನಕ ಕಲ್ಯಾಣ ಮಂದಿರ ರಸ್ತೆ', ಕುಮಾರ ಪಾರ್ಕ್ ಪಶ್ಚಿಮದ ರಾಜು ರಸ್ತೆಯಿಂದ ಸ್ಯಾಂಕಿರಸ್ತೆಗೆ ಸೇರುವ 5ನೇ ಮುಖ್ಯರಸ್ತೆಗೆ `ಅಬ್ದುಲ್ ಮಜೀದ್‍ ಖಾನ್ ರಸ್ತೆ' ರಾಮಯ್ಯ ಸಿಗ್ನಲ್‍ನಿಂದ ಅಶ್ವತ್ಥನಗರದ ರಸ್ತೆಗೆ ಕೆ.ಹೆಚ್ ಪಾಟೀಲ್ ರಸ್ತೆ' ಎಂದು ನಾಮಕರಣ ಮಾಡಲು ಮತ್ತು ಸರ್ಕಲ್ ಮಾರಮ್ಮ ವೃತ್ತದಲ್ಲಿ `ನಾಲ್ವಡಿ ಕೃಷ್ಣರಾಜ ಒಡೆಯರ್' ಹಾಗೂ ದಿವಾನರ ಪಾಳ್ಯದಲ್ಲಿರುವ ಅಟಲ್‍ಜಿ ಉದ್ಯಾನವನದಲ್ಲಿ `ಅಟಲ್ ಬಿಹಾರಿ ವಾಜಪೇಯಿ' ಅವರ ಪ್ರತಿಮೆ ಸ್ಥಾಪಿಸಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News