ಆರೋಗ್ಯ ಸೇತು ಮೊಬೈಲ್ ಆ್ಯಪ್ ಬಳಕೆ ಬಗ್ಗೆ ರಾಜ್ಯ ಸರಕಾರದ ನಿಲುವು ಕೇಳಿದ ಹೈಕೋರ್ಟ್

Update: 2020-08-04 17:04 GMT

ಬೆಂಗಳೂರು, ಆ.4: ಕೊರೋನ ಸೋಂಕು ಪತ್ತೆ ಹಚ್ಚುವ ಆರೋಗ್ಯ ಸೇತು ಮೊಬೈಲ್ ಆ್ಯಪ್ ಡೌನ್‍ಲೋಡ್ ಹಾಗೂ ಬಳಕೆಯನ್ನು ಕಡ್ಡಾಯಗೊಳಿಸಿಲ್ಲ ಎಂದು ಕೇಂದ್ರ ಸರಕಾರ ತಿಳಿಸಿದೆ. ಈ ವಿಚಾರದಲ್ಲಿ ರಾಜ್ಯ ಸರಕಾರವೂ ತನ್ನ ನಿಲುವನ್ನು ತಿಳಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಈ ಕುರಿತು ನಾಗರಿಕರ ಹಕ್ಕುಗಳ ರಕ್ಷಣೆಗೆ ಹೋರಾಟ ಮಾಡುತ್ತಿರುವ ಬೆಂಗಳೂರಿನ ನಿವಾಸಿ ಅನಿವರ್ ಎ. ಅರವಿಂದ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಎಸ್‍ಒಪಿ ಪ್ರಕಾರ ಆರೋಗ್ಯ ಸೇತು ಆ್ಯಪ್ ಡೌನ್‍ಲೋಡ್ ಹಾಗೂ ಬಳಕೆಯನ್ನು ಕೇಂದ್ರ ಸರಕಾರ ಕಡ್ಡಾಯಗೊಳಿಸಿಲ್ಲ ಎಂದು ಕೇಂದ್ರ ಸರಕಾರದ ಪರ ವಕೀಲರು ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಆರೋಗ್ಯ ಸೇತು ಆ್ಯಪ್ ಕಡ್ಡಾಯಗೊಳಿಸಿ ಏನಾದರೂ ಸೂಚನೆ ಹೊರಡಿಸಲಾಗಿದೆಯೇ ಎಂಬ ಬಗ್ಗೆ ತನ್ನ ನಿಲುವನ್ನು ತಿಳಿಸಲು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತು. ಅಲ್ಲದೆ, ಮೆಟ್ರೋ ಪ್ರಾರಂಭವಾದ ಮೇಲೆ ಆರೋಗ್ಯ ಸೇತು ಆ್ಯಪ್ ಬಳಸಬೇಕು ಎಂದು ಹೇಳಿರುವ ಬಗ್ಗೆ ವಿವರಣೆ ನೀಡುವಂತೆ ಬಿಎಂಆರ್‍ಸಿಎಲ್ ಪರ ವಕೀಲರಿಗೆ ನ್ಯಾಯಪೀಠವು ಸೂಚಿಸಿ, ವಿಚಾರಣೆಯನ್ನು ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News