ಆರ್‌ ಟಿಇ ಕಾಯ್ದೆಯ ಬಗ್ಗೆ ಮೌನ ವಹಿಸಿದ ರಾಷ್ಟ್ರೀಯ ಶಿಕ್ಷಣ ನೀತಿ: ಶಿಕ್ಷಣ ತಜ್ಞರ ಆತಂಕ

Update: 2020-08-04 17:35 GMT

ಹೊಸದಿಲ್ಲಿ, ಆ.4: ಕೇಂದ್ರ ಸರಕಾರದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮುಕ್ತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು (ಆರ್‌ ಟಿಇ) ಕಾಯ್ದೆಯ ಮಹತ್ವವನ್ನು ಕಡಿಮೆಗೊಳಿಸಲಾಗಿದೆ ಎಂದು ‘ರೈಟ್ ಟು ಎಜುಕೇಶನ್’ ವೇದಿಕೆ ಆತಂಕ ವ್ಯಕ್ತಪಡಿಸಿದೆ.

ನೂತನ ಶಿಕ್ಷಣ ನೀತಿಯಲ್ಲಿ ಪ್ರಸ್ತಾವಿಸಲಾಗಿರುವ ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆ ಹೆಚ್ಚಳ ಮತ್ತು ಶಾಲಾ ಶಿಕ್ಷಣದ ಸಾರ್ವತ್ರೀಕರಣದ ವಿಷಯ ಸ್ವಾಗತಾರ್ಹವಾಗಿದೆ. ಆದರೆ ಇದನ್ನು ಸಾಧಿಸಲು ಕಾನೂನು ಬೆಂಬಲದ ಕೊರತೆಯಿದೆ. ಖಾಸಗಿ ಹೂಡಿಕೆ ಮತ್ತು ಶಾಲಾ ಶಿಕ್ಷಣದ ಸಾರ್ವತ್ರೀಕರಣವನ್ನು ಆರ್‌ ಟಿಇ ಕಾಯ್ದೆಯೊಂದಿಗೆ ಜೋಡಿಸಲು ವಿಫಲವಾಗಿದ್ದು, ಪೂರ್ವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಕಾನೂನುಬದ್ಧ ಹಕ್ಕೆಂದು ಉಲ್ಲೇಖಿಸಿಲ್ಲ ಎಂದು ರೈಟ್ ಟು ಎಜುಕೇಶನ್ (ಆರ್‌ಟಿಇ) ವೇದಿಕೆ ಆತಂಕ ವ್ಯಕ್ತಪಡಿಸಿದೆ.

ಪ್ರಾಥಮಿಕ ಹಂತದ ಬಳಿಕ ಶಿಕ್ಷಣ ತ್ಯಜಿಸುವ ಪ್ರಮಾಣ (ವಿಶೇಷವಾಗಿ ಹೆಣ್ಣು ಮಕ್ಕಳು) ಅಧಿಕವಾಗಿದೆ. ಭಾರತದಲ್ಲಿ ಆರ್‌ ಟಿಇ ಕಾಯ್ದೆಯ ಮೂಲಕ ಶಿಕ್ಷಣ ನೀತಿಯ ವಿಕಾಸದ ಅತ್ಯುನ್ನತ ಮಟ್ಟ ತಲುಪಲಾಗಿದೆ. ಈ ಕಾಯ್ದೆಯು ಕಾನೂನುಬದ್ಧ ಹಕ್ಕನ್ನು ನೀಡುತ್ತದೆ ಎಂದು ವೇದಿಕೆ ಹೇಳಿದೆ. 6ನೇ ತರಗತಿಯಿಂದ ಮಕ್ಕಳಿಗೆ ವೃತ್ತಿಪರ ತರಬೇತಿ ನೀಡುವ ನಿರ್ಧಾರವು ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಅವರನ್ನು ಕಾರ್ಮಿಕರ ಮಾರುಕಟ್ಟೆಗೆ ದೂಡಬಹುದು. ಅವರ ಶಿಕ್ಷಣ ಅರ್ಧಕ್ಕೇ ಮೊಟಕುಗೊಳ್ಳುವ ಅಪಾಯವಿದೆ ಎಂದು ವೇದಿಕೆ ಆತಂಕ ವ್ಯಕ್ತಪಡಿಸಿದೆ.

ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿರುವ ತಾರತಮ್ಯವನ್ನು ನಿವಾರಿಸುವ ಏಕೈಕ ಮಾರ್ಗವೆಂದರೆ ದೇಶದಲ್ಲಿ ಸಾಮಾನ್ಯ ಶಿಕ್ಷಣ ವ್ಯವಸ್ಥೆ(ಸಿಎಸ್‌ಎಸ್)ಯನ್ನು ಅನುಷ್ಟಾನಗೊಳಿಸುವುದಾಗಿದೆ. ಈ ವ್ಯವಸ್ಥೆಯಿಂದ ದೇಶದ ಎಲ್ಲಾ ಮಕ್ಕಳಿಗೂ ಸಮಾನ ಗುಣಮಟ್ಟದ ಶಿಕ್ಷಣ ದೊರಕುತ್ತದೆ ಎಂದು ಆರ್‌ಟಿಇ ವೇದಿಕೆಯ ರಾಷ್ಟ್ರೀಯ ಸಂಯೋಜಕ ಅಂಬರೀಶ್ ರೈ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News