ಕೊರೋನ ನಿಯಂತ್ರಣಕ್ಕೆ ಪ್ರತಿ ವಾರ್ಡ್ ಗೆ 10 ಲಕ್ಷ ರೂ. ಬಿಡುಗಡೆ: ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

Update: 2020-08-04 18:23 GMT

ಬೆಂಗಳೂರು, ಆ.4: ಕೊರೋನ ನಿಯಂತ್ರಣಕ್ಕಾಗಿ ಬಿಬಿಎಂಪಿಯ ಪ್ರತಿ ವಾರ್ಡ್‍ಗೆ 20 ಲಕ್ಷ ರೂ. ಮೀಸಲಿಟ್ಟಿದ್ದು, ಮೊದಲನೇ ಹಂತದಲ್ಲಿ ಶೇ.50ರಷ್ಟು ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಪಾಲಿಕೆ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಡೆದ ಕೌನ್ಸಿಲ್ ಸಭೆಯಲ್ಲಿ ಮಾತನಾಡಿದ ಅವರು, 2020-21ನೇ ಸಾಲಿನ ಅಸ್ತಿ ತೆರಿಗೆ ಸಂಗ್ರಹ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ಅನುದಾನ ಬಿಡುಗಡೆ ಮಾಡುವುದು ಕಷ್ಟವಾಗಿದ್ದು, ಮೊದಲ ಹಂತದಲ್ಲಿ ಶೇ.50ರಷ್ಟು ಅನುದಾನ ಬಿಡುಗಡೆ ಮಾಡಲಾಗುವುದು. ಕೋವಿಡ್ ನಿಯಂತ್ರಣ ಕಾರ್ಯಕ್ಕೆ ಮೀಸಲಿಟ್ಟಿರುವ 20 ಲಕ್ಷ ರೂ. ಅನುದಾನದಲ್ಲಿ, 10 ಲಕ್ಷ ರೂ. ಹಾಗೂ ಪಾಲಿಕೆ ಸದಸ್ಯರ ವೈದ್ಯಕೀಯ ನಿಧಿಗೆ ಮೀಸಲಿಟ್ಟ 10 ಲಕ್ಷ ರೂ.ನಲ್ಲಿ 5 ಲಕ್ಷ ರೂ. ಅನುದಾನ ಕೂಡಲೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಬಿಡಿಎ ನಿವೇಶನ ಮಾತ್ರ ಸಕ್ರಮ, ಕಟ್ಟಡ ಸಕ್ರಮವಿಲ್ಲ

ಬಿಡಿಎ ವತಿಯಿಂದ ಸುಮಾರು 6 ಸಾವಿರ ಎಕರೆ ಪ್ರದೇಶವನ್ನು ಭೂಸ್ವಾಧೀನ ಮಾಡಿಕೊಂಡು ಲೇಔಟ್ ನಿರ್ಮಿಸಿದೆ. ಆದರಲ್ಲಿ 12 ವರ್ಷಕ್ಕಿಂತ ಮೊದಲೇ ಅನಧಿಕೃತ ಒತ್ತುವರಿ ಮಾಡಿಕೊಂಡು ಕಟ್ಟಡ ಅಥವಾ ಮನೆ ನಿರ್ಮಿಸಿದ್ದರೆ, ಕೆಲವು ನಿಬಂಧನೆಗಳನ್ವಯ ನಿವೇಶನ ಸಕ್ರಮ ಮಾಡಲಾಗುತ್ತಿದೆ. ಆದರೆ, ಅಲ್ಲಿ ನಿರ್ಮಿಸಲಾದ ಮನೆ ಅಥವಾ ಕಟ್ಟಡಕ್ಕೆ ಬಿಬಿಎಂಪಿ ವತಿಯಿಂದ ಯಾವುದೇ ಕಟ್ಟಡ ನಕ್ಷೆಗೆ ಅನುಮತಿ ಪಡೆಯದ ಕಾರಣ ಅನಧಿಕೃತ ಕಟ್ಟಡವೆಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಬಿಬಿಎಂಪಿ ಅಕ್ರಮ-ಸಕ್ರಮ ಜಾರಿಯಾದರೆ, ಮಾತ್ರ ಕಟ್ಟಡ ಸಕ್ರಮ ಮಾಡಿಕೊಳ್ಳಲು ಅವಕಾಶವಿದೆ.

-ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News