ಕೆರೆಗಳ ಶುದ್ದೀಕರಣ: ಕಾಲಮಿತಿಯೊಳಗೆ ಗುರಿ ತಲುಪಲು ಸರಕಾರ ಮತ್ತೊಮ್ಮೆ ವಿಫಲ

Update: 2020-08-04 18:27 GMT

ಬೆಂಗಳೂರು, ಆ.4: ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ನೀಡಿರುವ ಕಾಲಮಿತಿಯ ಗಡುವಿನೊಳಗೆ ಬೆಳ್ಳಂದೂರು ಮತ್ತು ವರ್ತೂರು ಕೆರೆಯ ಶುದ್ದೀಕರಣಕ್ಕೆ ಸಂಬಂಧಿಸಿದಂತೆ ಗುರಿ ತಲುಪಲು ರಾಜ್ಯ ಸರಕಾರ ಮತ್ತೊಮ್ಮೆ ವಿಫಲಗೊಂಡಿದೆ.

ನ್ಯಾಯಾಧೀಶರ ಗಡುವಿನೊಳಗೆ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಲಾಕ್‍ಡೌನ್ ಮತ್ತು ಬೆಂಗಳೂರನ್ನು ರೆಡ್ ಝೋನ್ ಎಂದು ಕರೆದಿದ್ದರಿಂದ ಕುಶಲ ಕಾರ್ಮಿಕರು ಸಿಗಲಿಲ್ಲ. ಸರಕು ಸಾಕಾಣೆಗೆ ಹೇರಲಾಗಿದ್ದ ನಿರ್ಬಂಧದಿಂದಾಗಿ ಪ್ರಗತಿ ಕುಂಠಿತವಾಗಿದೆ ಎಂದು ರಾಜ್ಯ ಸರಕಾರ ನ್ಯಾಯಾಧೀಕರಣಕ್ಕೆ ಮಾಹಿತಿ ನೀಡಿದೆ.

ಕಳೆದ ಮೂರು ವರ್ಷಗಳಲ್ಲಿ ಬೆಳ್ಳಂದೂರು ಹಾಗೂ ವರ್ತೂರು ಕೆರೆಯ ಶುದ್ಧೀಕರಣಕ್ಕೆ ಸಂಬಂಧಿಸಿದಂತೆ ತೋರಿರುವ ನಿರ್ಲಕ್ಷ್ಯಕ್ಕೆ ಸರಕಾರ, ಬಿಡಿಎ, ಮಾಲಿನ್ಯ ನಿಯಂತ್ರಣ ಮಂಡಳಿ, ಜಲ ಮಂಡಳಿಯು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಟೀಕೆಗೆ ಗುರಿಯಾಗುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಕಳೆದ ಡಿಸೆಂಬರ್‍ನಲ್ಲಿ ಕೆರೆಯ ಪುನಶ್ಚೇತನ, ರಕ್ಷಣೆಗೆ ಸಂಬಂಧಿಸಿದಂತೆ ವಿವಿಧ ಚಟುವಟಿಕೆಗಳಿಗೆ ಕಾಲಮಿತಿ ನಿಗದಿ ಮಾಡಿಯೂ ಆದೇಶ ನೀಡಲಾಗಿತ್ತು.

ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‍ಸಿಂಗ್ ಹಸಿರು ನ್ಯಾಯಾಧೀಕರಣಕ್ಕೆ ಪ್ರಮಾಣ ಪತ್ರ ಮತ್ತು ಆದೇಶ ಪಾಲನೆಯ ವಿವರವಾದ ವರದಿಯೊಂದನ್ನು ಸಲ್ಲಿಸಿದ್ದಾರೆ. ಕೊರೋನ ನಿಯಂತ್ರಣಕ್ಕಾಗಿ ಹೇರಲಾಗಿದ್ದ ಲಾಕ್‍ಡೌನ್ ಕಾರಣದಿಂದ ನ್ಯಾಯಾಧೀಕರಣ ಆದೇಶವನ್ನು ಕಾಲಮಿತಿಯಲ್ಲಿ ಪಾಲಿಸಲು ಸಾಧ್ಯವಿಲ್ಲ ಎಂಬ ಅರಿಕೆ ಮಾಡಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News