700 ಸಾರಿಗೆ ಸಿಬ್ಬಂದಿ ಕೋವಿಡ್‍ನಿಂದ ಗುಣಮುಖ: ಲಕ್ಷ್ಮಣ ಸವದಿ

Update: 2020-08-05 13:58 GMT

ಬೆಂಗಳೂರು, ಆ.5: ಕೆಎಸ್ಸಾರ್ಟಿಸಿ ಸೇರಿ ನಾಲ್ಕು ನಿಗಮಗಳ ಸುಮಾರು ಒಂದು ಸಾವಿರ ಸಿಬ್ಬಂದಿ ಕೋವಿಡ್-19ಕ್ಕೆ ತುತ್ತಾಗಿದ್ದರು. ಅದರಲ್ಲಿ 700 ಮಂದಿ ಗುಣಮುಖರಾಗಿದ್ದಾರೆಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ರೋಟರಿ ಅಡ್ವಿಕಾ ಕೇರ್ ಫೌಂಡೇಶನ್ ಮತ್ತು ನಯೋನಿಕಾ ಐ ಟ್ರಸ್ಟ್, ಪ್ರಕ್ರಿಯಾ ಆಸ್ಪತ್ರೆ ಸಹಯೋಗದಲ್ಲಿ ನಗರದ ಬಸವೇಶ್ವರ್ ಬಸ್ ನಿಲ್ದಾಣದಲ್ಲಿ ಪ್ರಾರಂಭಿಸಲಾಗಿರುವ ಕೋವಿಡ್ ಆರೈಕೆ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್ ಲಕ್ಷಣರಹಿತ ಮತ್ತು ಅಲ್ಪಪ್ರಮಾಣದ ಕೋವಿಡ್ ಲಕ್ಷಣವಿರುವ ಸಾರಿಗೆ ಸಿಬ್ಬಂದಿಗಳು ಹಾಗೂ ಸಾರ್ವಜನಿಕರಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಆರೈಕೆ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದರು.

ಸಾರಿಗೆ ಸಿಬ್ಬಂದಿಗಳನ್ನು ಕೋವಿಡ್‍ನಿಂದ ರಕ್ಷಿಸುವುದು ಹಾಗೂ ಉತ್ತಮ ಚಿಕಿತ್ಸೆ ನೀಡುವುದು ಸಾರಿಗೆ ಇಲಾಖೆಯ ಪ್ರಥಮ ಆದ್ಯತೆಯಾಗಿದೆ. ಹೀಗಾಗಿ ನಗರದ ಬಸವೇಶ್ವರ ಬಸ್ ನಿಲ್ದಾಣದಲ್ಲಿ ಕೋವಿಡ್ ಆರೈಕೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

ಶ್ರೀ ಬಸವೇಶ್ವರ ಬಸ್ ನಿಲ್ದಾಣದಲ್ಲಿ ನೆಲಮಹಡಿ ಹಾಗೂ ಮೊದಲ ಮಹಡಿಯಲ್ಲಿ ಮೊದಲ ಹಂತದಲ್ಲಿ 200 ಹಾಸಿಗೆಗಳನ್ನು ಹೊಂದಿದೆ. ಪ್ರಕರಣಗಳನ್ನು ನೋಡಿಕೊಂಡು ಇನ್ನೂ 100 ಹಾಸಿಗೆಗಳನ್ನು ಸೇರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಕೇಂದ್ರದಲ್ಲಿ ಪೂರ್ಣ ಅವಧಿಯಲ್ಲಿ ದಾದಿಯರು, ವೈದ್ಯರು, ಸ್ವಚ್ಛತಾಕಾರರು, ವ್ಯವಸ್ಥಾಪಕರು, ಆಂಬುಲೆನ್ಸ್ ಹಾಗೂ ಆಕ್ಸಿಜನ್ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

ಈ ವೇಳೆ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ, ನಿರ್ದೇಶಕ ಡಾ.ರಾಮ್‍ನಿವಾಸ್ ಸೆಪಟ್, ಡಾ.ಕೆ.ಅರುಣ್, ಪ್ರಕ್ರಿಯಾ ಆಸ್ಪತ್ರೆಯ ಡಾ.ಶ್ರೀನಿವಾಸ್ ಚಿರುಕುರಿ, ನಯೋನಿಕಾ ಕಣ್ಣು ಆಸ್ಪತ್ರೆಯ ಪ್ರಶಾಂತ್, ಟೈಟಾನ್ ಸಂಸ್ಥೆಯ ಶ್ರೀಧರ್ ಸೇರಿ ಹಲವರು ಉಪಸ್ಥಿತರಿದ್ದರು.

ಈ ಕೋವಿಡ್ ಆರೈಕೆ ಕೇಂದ್ರದಲ್ಲಿ ಕೆಎಸ್ಸಾರ್ಟಿಸಿ, ಬಿಎಂಟಿಸಿ, ಈಶಾನ್ಯ ಸಾರಿಗೆ ಮತ್ತು ವಾಯವ್ಯ ಸಾರಿಗೆ ಉದ್ಯೋಗಿಗಳು ಮತ್ತು ಕುಟುಂಬಗಳಿಗೆ ಶೇ.50ರಷ್ಟು ಹಾಸಿಗೆಗಳನ್ನು ಮೀಸಲಿಡಲಾಗಿದೆ. ಹಾಗೂ ರೋಟರಿ ಮತ್ತು ಟೈಟಾನ್‍ನಿಂದ ಉಲ್ಲೇಖಿಸಲಾದ ರೋಗಿಗಳಿಗೆ ಶೇ.10ರಷ್ಟು ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಸರಕಾರ ಸೂಚಿಸಿದ ದರಗಳ ಪ್ರಕಾರ ರೋಗಿಗಳಿಗೆ ಶುಲ್ಕ ವಿಧಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News