ರಾಮಮಂದಿರ ಭೂಮಿ ಪೂಜೆಯಲ್ಲಿ ಪ್ರಧಾನಿ ಭಾಗಿ: ವೆಲ್ಫೇರ್ ಪಾರ್ಟಿ ಖಂಡನೆ

Update: 2020-08-05 15:29 GMT

ಬೆಂಗಳೂರು, ಆ.5: ಪ್ರಧಾನಮಂತ್ರಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ಇಂದು ನಡೆದ ರಾಮಮಂದಿರಕ್ಕೆ ಶಿಲಾನ್ಯಾಸ ಹಾಕುವ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಡಾ.ಎಸ್.ಕ್ಯೂ.ಆರ್. ಇಲಿಯಾಸ್ ಖಂಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸುವುದು ಪ್ರಧಾನಮಂತ್ರಿಯವರ ಶ್ರೇಷ್ಠತೆಗೆ ಯೋಗ್ಯವಲ್ಲ. ಭಾರತ ದೇಶವು ಜಾತ್ಯತೀತ ದೇಶವಾಗಿದ್ದು, ಭಾರತೀಯ ಸಂವಿಧಾನವು ಭಾರತದ ಎಲ್ಲ ನಾಗರಿಕರಿಗೆ ತಮ್ಮ ಧರ್ಮದ ಪ್ರಚಾರ ಆಚರಿಸುವ ಸ್ವಾತಂತ್ರ್ಯ ಕೊಡುತ್ತದೆ. ಆದರೆ ದೇಶಕ್ಕೆ ಯಾವುದೇ ಧರ್ಮವಿರುವುದಿಲ್ಲ. ಇಂತಹ ದೇಶದ ಪ್ರಧಾನಿಯಾದವರು ಎಲ್ಲ ಧರ್ಮಗಳನ್ನು ಒಂದೇ ರೂಪದಲ್ಲಿ  ಗೌರವಿಸಬೇಕಾದದ್ದು ಅವರ ಕರ್ತವ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಬಿಜೆಪಿಯು ಜನರ ಭಾವನೆಗಳನ್ನು ಉತ್ತೇಜಿಸಲು ಧರ್ಮವನ್ನು ಬಳಸುತ್ತಿದೆ ಹಾಗೂ ಪರಸ್ಪರ ದ್ವೇಷ ಉಂಟುಮಾಡಿ ಚುನಾವಣಾ ಲಾಭ ಪಡೆಯುತ್ತಿದೆ. ಮೋದಿಯವರ ಆಳ್ವಿಕೆಯಲ್ಲಿ ಜಾತ್ಯತೀತ ಭಾರತದ ಶ್ರೇಷ್ಠ ಸಂಪ್ರದಾಯಗಳನ್ನು ಅಯೋಧ್ಯೆಯಲ್ಲಿ ನೆಲಸಮ ಮಾಡಲಾಗಿದ್ದು ಮತ್ತು ಹೊಸ ಗಣರಾಜ್ಯದ ಅಡಿಪಾಯ ಹಾಕಲಾಗಿರುವುದು ಅತ್ಯಂತ ದೌರ್ಭಾಗ್ಯದ ಸಂಗತಿಯಾಗಿದೆ ಎಂದು ಅವರು ಕಿಡಿಗಾರಿದ್ದಾರೆ.

ಬಿಜೆಪಿಯು ಪ್ರಜಾಪ್ರಭುತ್ವವನ್ನು ನೆಲಸಮ ಮಾಡುವುದರಲ್ಲಿ ಮಗ್ನರಾಗಿದ್ದರೆ, ಉಳಿದ ರಾಜಕೀಯ ಪಕ್ಷಗಳು ಶೋಚನೀಯವಾಗಿ ಮೂಕ ಪ್ರೇಕ್ಷಕರಾಗಿ ಕುಳಿತಿವೆ. ದೇಶವು ಕೊವಿಡ್ ಸಂಕ್ರಮಣದ ವಿರುದ್ಧ ಹೋರಾಡುತ್ತಿರುವ ಈ ಸಮಯದಲ್ಲಿ ಪ್ರಧಾನಿ ಭೇಟಿಯು ಸ್ಪಷ್ಟ ತಪ್ಪು ಸಂದೇಶವನ್ನು ನೀಡುತ್ತಿದೆ. ಅಯೋಧ್ಯೆಯಲ್ಲಿರುವ ಜನರ ಪ್ರಾಣಕ್ಕೆ ಅಪಾಯವನ್ನು ಉಂಟುಮಾಡಿ ಕೆಟ್ಟ ಉದಾಹರಣೆ ಇಡುತ್ತಿದ್ದಾರೆ ಎಂದು ಇಲ್ಯಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News