ಬೆಂಗಳೂರು: ಪತ್ನಿಯ ಕೊಲೆ; ಆರೋಪಿ ಪತಿಯ ಬಂಧನ

Update: 2020-08-05 15:50 GMT

ಬೆಂಗಳೂರು, ಆ.5: ಇಲ್ಲಿನ ಮಾರತ್ತಹಳ್ಳಿಯಲ್ಲಿ ನಡೆದಿದ್ದ ಮಹಿಳೆ ಕೊಲೆ ಪ್ರಕರಣ ಬೇಧಿಸಿರುವ ಪೊಲೀಸರು, ಆರೋಪಿ ಮೃತಳ ಪತಿ ಎಂಬುದನ್ನು ಪತ್ತೆ ಹಚ್ಚಿದ್ದಾರೆ. 

ಮುನ್ನೇನಾಕೊಳಲದ ಸಪ್ತಗಿರಿ ಲೇಔಟ್ ನಿವಾಸಿ ನಾಗೇಶ್(30) ಬಂಧಿತ ಆರೋಪಿ ಎಂದು ವೈಟ್‍ಫೀಲ್ಡ್ ವಿಭಾಗದ ಡಿಸಿಪಿ ದೇವರಾಜ್ ತಿಳಿಸಿದ್ದಾರೆ.

ಆರೋಪಿ ನಾಗೇಶ್ ಮತ್ತು ಮೃತ ಪತ್ನಿ ಸಂಧ್ಯಾ(27) ಮೂಲತಃ ಆಂಧ್ರಪ್ರದೇಶದ ಚಿತ್ತೂರಿನವರಾಗಿದ್ದು, ಐದು ವರ್ಷಗಳ ಹಿಂದೆ ವಿವಾಹವಾಗಿದ್ದರು. ನಾಗೇಶ್ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದು, ಸಂಧ್ಯಾ ಗೃಹಿಣಿಯಾಗಿದ್ದರು. ದಂಪತಿಗೆ ಮೂರು ವರ್ಷದ ಹಾಗೂ ಒಂದೂವರೆ ವರ್ಷದ ಎರಡು ಗಂಡು ಮಕ್ಕಳಿವೆ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. 

ನಾಗೇಶ್ ತಾನು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಮಹಿಳೆಯೊಬ್ಬರ ಜತೆ ಅನೈತಿಕ ಸಂಬಂಧ ಹೊಂದಿದ್ದ. ಪತಿಯ ಅನೈತಿಕ ವಿಚಾರ ತಿಳಿದ ಸಂಧ್ಯಾ ಹಲವು ಬಾರಿ ಜಗಳವಾಡಿದ್ದರು. ಆದರೂ ನಾಗೇಶ್ ಮಹಿಳೆಯೊಂದಿಗಿನ ಅನೈತಿಕ ಸಂಬಂಧ ಮುಂದುವರೆಸಿದ್ದ. ಇದೇ ವಿಚಾರಕ್ಕೆ ನಿತ್ಯ ದಂಪತಿ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತ್ನಿಯನ್ನು ಹತ್ಯೆ ಮಾಡಿದರೆ ಮಹಿಳೆ ಜತೆ ಆರಾಮಾಗಿ ಸಂಸಾರ ಮಾಡಬಹುದು ಎಂದು ನಿರ್ಧರಿಸಿದ್ದ. ಹೀಗಾಗಿ ಕೊಲೆಗೆ ಸಂಚು ರೂಪಿಸಿದ್ದ. ಸೋಮವಾರ ಸಂಜೆ 5:30ರಲ್ಲಿ ತನ್ನ ತಾಯಿಯನ್ನು ಊರಿಗೆ ಬಿಟ್ಟುಬರುವುದಾಗಿ ಪತ್ನಿಗೆ ಹೇಳಿ ಹೋಗಿದ್ದ. ನಾಗೇಶ್ ಮಾರ್ಗಮಧ್ಯದಲ್ಲಿ ಬಸ್‍ನಿಂದ ಇಳಿದು, ತಾಯಿಯನ್ನು ಊರಿಗೆ ಕಳುಹಿಸಿ ನಗರಕ್ಕೆ ವಾಪಸ್ ಬಂದಿದ್ದ. ಯಾರಿಗೂ ಗೊತ್ತಾಗದಂತೆ ತಡರಾತ್ರಿವರೆಗೂ ಅಲ್ಲಲ್ಲಿ ಸುತ್ತಾಡಿ, ಮನೆಗೆ ಹೋಗಿದ್ದ ಎನ್ನಲಾಗಿದೆ.
ತದನಂತರ, ಮಲಗಿದ್ದ ಪತ್ನಿಯ ತಲೆ ಮೇಲೆ ಸಿಮೆಂಟ್ ಇಟ್ಟಿಗೆಯನ್ನು ಎತ್ತಿಹಾಕಿ, ಚೂರಿಯಿಂದ ಕತ್ತು ಕೊಯ್ದು ಹತ್ಯೆ ಮಾಡಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬಾಯಿಬಿಟ್ಟಿದ್ದಾನೆ ಎಂದು ಡಿಸಿಪಿ ದೇವರಾಜ್ ವಿವರಿಸಿದರು.

ಪತ್ತೆಯಾಗಿದ್ದು ಹೇಗೆ? 
ಆರೋಪಿ ಕೃತ್ಯ ನಡೆದ ದಿನ ಮನೆ ಬಳಿ ಓಡಾಡಿದ್ದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಸತ್ಯ ಬಾಯ್ಬಿಟ್ಟ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News