ತೂಕ ದಾಖಲಾತಿಗಾರರಿಗೆ ಮರೀಚಿಕೆಯಾದ ಕನಿಷ್ಠ ವೇತನ

Update: 2020-08-05 16:38 GMT

ಬೆಂಗಳೂರು, ಆ.5: ರಾಜ್ಯಾದ್ಯಂತ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ(ಎಪಿಎಂಸಿ) ದುಡಿಯುವಂತಹ ತೂಕ ದಾಖಲಾತಿದಾರರ ಕನಿಷ್ಠ ವೇತನ ಸಿಗದೇ ನಿತ್ಯವೂ ಪರದಾಡುವಂತಾಗಿದ್ದು, ಅವರುಗಳಿಗೆ ಅದು 24 ವರ್ಷಗಳಿಂದ ಕನಸಾಗಿಯೇ ಉಳಿದಿದೆ. 

ಕರ್ನಾಟಕದ 150 ಎಪಿಎಂಸಿಗಳಲ್ಲಿ 1,400ಕ್ಕೂ ಹೆಚ್ಚಿದ್ದ ತೂಕ ದಾಖಲಾತಿದಾರರ ಸಂಖ್ಯೆ ಈಗ 900ಕ್ಕೆ ಇಳಿದಿದೆ. ತಿಂಗಳಿಗೆ 400 ವೇತನದಿಂದ ಕೆಲಸ ಆರಂಭಿಸಿದ ಇವರು ಕನಿಷ್ಠ ವೇತನಕ್ಕಾಗಿ ನಿರಂತರವಾಗಿ ಹೋರಾಗಳನ್ನು ನಡೆಸಿಕೊಂಡೇ ಬಂದಿದ್ದಾರೆ.

ಸುಂಕದ ಜತೆಗೆ ತೂಕದವರ ಶುಲ್ಕವನ್ನೂ ಎಪಿಎಂಸಿಯು ಸಂಗ್ರಹಿಸುತ್ತದೆ. ತೂಕದವರ ಕಲ್ಯಾಣ ನಿಧಿಗೆ ಆ ಹಣ ವರ್ಗಾಯಿಸಿ ಅದರ ಮೂಲಕ ವೇತನ ಪಾವತಿಸಲಾಗುತ್ತಿದೆ. ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಕಾಯ್ದೆ ಪ್ರಕಾರ ವೇತನ ನಿಗದಿ ಮಾಡಬೇಕು ಎಂಬ ಹೋರಾಟವನ್ನು ತೂಕದವರು 30 ವರ್ಷಗಳ ಹಿಂದೆಯೇ ಆರಂಭಿಸಿದ್ದರು. ಕನಿಷ್ಠ ವೇತನ ನೀಡಬೇಕು ಎಂದು ಹೈಕೋರ್ಟ್ 1996ರಲ್ಲಿ ಆದೇಶಿಸಿತು. ಆದರೆ, ಅದು ಈವರೆಗೆ ಪಾಲನೆಯಾಗಿಲ್ಲ.

ಕಾರ್ಮಿಕರ ಕನಿಷ್ಠ ವೇತನ ಕಾಯ್ದೆ ಪ್ರಕಾರ ತಿಂಗಳಿಗೆ 12,500 ವೇತನ ನಿಗದಿ ಮಾಡಬೇಕು. ಯಶವಂತಪುರ ಎಪಿಎಂಸಿಯ 15 ಜನರಿಗೆ ಮಾತ್ರ ಈ ವೇತನ ಸಿಗುತ್ತಿದೆ. ಉಳಿದವರಿಗೆ 3 ಸಾವಿರದಿಂದ 7 ಸಾವಿರದ ತನಕ ವೇತನ ಸಿಗುತ್ತಿದೆ. ಒಂದೊಂದು ಎಪಿಎಂಸಿಯಲ್ಲಿ ಒಂದೊಂದು ರೀತಿಯ ವೇತನ ನೀಡಲಾಗುತ್ತಿದೆ ಎಂದು ತೂಕ ದಾಖಲಾತಿದಾರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಪ್ಪ ಅಭಿಪ್ರಾಯಪಟ್ಟಿದ್ದಾರೆ.

ಕಾರ್ಮಿಕ ಕಾಯ್ದೆ ಪ್ರಕಾರ ಪಿಎಫ್, ಇಎಸ್‍ಐ, ಗ್ರಾಚ್ಯುಟಿ ಸೇರಿ ಎಲ್ಲಾ ರೀತಿಯ ಸೌಲಭ್ಯಗಳನ್ನೂ ನೀಡಬೇಕು ಎಂದು ಕೋರ್ಟ್ ಹೇಳಿದೆ.  ಆದರೆ, ಕನಿಷ್ಠ ವೇತನಕ್ಕೆ ಸಮನಾದ ವೇತನ ನೀಡುವುದಾಗಿ ನ್ಯಾಯಾಲಯಕ್ಕೆ ತಿಳಿಸಿರುವ ಎಪಿಎಂಸಿ ಅಧಿಕಾರಿಗಳು, ಅದನ್ನೂ ಈವರೆಗೂ ನೀಡಿಲ್ಲ ಎಂದು ಅವರು ಹೇಳಿದ್ದಾರೆ.

ಯಾರ ಆದೇಶಕ್ಕೂ ಬೆಲೆ ಇಲ್ಲ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೊದಲ ಬಾರಿಗೆ ಸಿಎಂ ಆಗಿದ್ದ ಅವಧಿಯಲ್ಲೇ ಕನಿಷ್ಠ ವೇತನ ನೀಡಬೇಕು ಎಂದು ಆದೇಶಿಸಿದ್ದರು. ಕನಿಷ್ಠ ವೇತನ ನೀಡುವಂತೆ ಸೂಚಿಸಿ ಕೃಷಿ ಮಾರುಕಟ್ಟೆ ಇಲಾಖೆಯ ನಿರ್ದೇಶಕ ಕರೀಗೌಡ ಅವರೂ ಇತ್ತೀಚೆಗೆ ಸುತ್ತೊಲೆ ಹೊರಡಿಸಿದ್ದಾರೆ. ಆದರೆ, ಎಪಿಎಂಸಿಗಳ ಯಾವೊಬ್ಬ ಕಾರ್ಯದರ್ಶಿಯೂ ಈ ಆದೇಶಗಳನ್ನು ಪಾಲಿಸಿಲ್ಲ ಎಂದು ಅವರು ದೂರಿದ್ದಾರೆ.

ಮೇಲಾಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲಸವನ್ನು ಎಪಿಎಂಸಿ ಕಾರ್ಯದರ್ಶಿಗಳು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ. ಪ್ರಶ್ನೆ ಮಾಡಿದವರ ವಿರುದ್ಧ ಸಲ್ಲದ ಆರೋಪಗಳನ್ನು ಹೊರಿಸಿ ಕೆಲಸದಿಂದಲೇ ತೆಗೆದು ಹಾಕುತ್ತಿದ್ದಾರೆ. 
ಅಧಿಕಾರಿಗಳು ದುರುದ್ದೇಶದಿಂದ ನಮಗೆ ಕನಿಷ್ಠ ವೇತನ ಸಿಗದಂತೆ ಮಾಡುತ್ತಿದ್ದಾರೆ. ನ್ಯಾಯಾಲಯ, ಕಾರ್ಮಿಕ ಇಲಾಖೆ, ಮುಖ್ಯಮಂತ್ರಿ ಆದೇಶಗಳಿಗೂ ಈ ಅಧಿಕಾರಿಗಳು ಬೆಲೆ ಕೊಡುತ್ತಿಲ್ಲ ಎಂದು ಅವರು ನೊಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News