ಕೋರ್ಟ್ ನಿಂದನೆ ಅಸ್ತ್ರ ಸಮಸ್ಯೆಗೆ ಪರಿಹಾರ ಮಾರ್ಗ ಅಲ್ಲ

Update: 2020-08-06 09:42 GMT

► ಭಾಗ - 1

ಎಚ್. ಎಸ್. ದೊರೆಸ್ವಾಮಿ

ಪ್ರಶಾಂತ್ ಭೂಷಣ್ ಅವರು ತಮ್ಮ ಟ್ವಿಟರ್ ಬರಹದ ಮೂಲಕ ದೇಶ ಎದುರಿಸುತ್ತಿರುವ ಗಂಡಾಂತರ ಕುರಿತು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ಅವರ ಮೇಲೆ ಕೋರ್ಟ್ ನಿಂದನೆ ಆರೋಪ ಹೊರಿಸಿ ಮೊಕದ್ದಮೆ ಹೂಡಿರುವುದು ಸರಿಯಲ್ಲ. ಅವರು ವ್ಯಕ್ತಪಡಿಸಿರುವ ಆತಂಕಗಳ ನಿಟ್ಟುಸಿರನ್ನು ಬಗೆಹರಿಸುವ ಕೆಲಸ ನ್ಯಾಯಾಲಯದ್ದಾಗಿದೆ. ಭೂಷಣ್ ಅವರು ವ್ಯಕ್ತಪಡಿಸಿರುವ ಆತಂಕ ಅವರೊಬ್ಬರದೇ ಅಲ್ಲ. ಪ್ರಜಾಪ್ರಭುತ್ವದಲ್ಲಿ ರಾಜ್ಯಾಂಗದಲ್ಲಿ ನಂಬಿಕೆ ಇರುವ ನಮ್ಮೆಲ್ಲರ ಆತಂಕವೂ ಅದಾಗಿದೆ.

ಸದಾ ಜನಪರವಾಗಿ ದನಿ ಎತ್ತುವ ಹೆಸರಾಂತ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರ ಎರಡು ಟ್ವಿಟರ್ ಬರಹಗಳಿಗಾಗಿ ಅವರ ವಿರುದ್ಧ ಕೋರ್ಟ್ ನಿಂದನೆ ಪ್ರಕರಣ ದಾಖಲಾಗಿದೆ. ಪ್ರಶಾಂತ್ ಭೂಷಣ್ ಅವರಿಗೆ ಬೆಂಬಲವಾಗಿ ಭಾರತದ 131 ಜನ ಗೌರವಾನ್ವಿತ ವ್ಯಕ್ತಿಗಳು ನಿಂತಿದ್ದು ಅವರು ಒಂದು ಮನವಿ ಸಿದ್ಧಪಡಿಸಿ ಹೊರತಂದಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಜಸ್ಟಿಸ್ ಮದನ್ ಬಿ. ಲೋಕೂರ್ ಮತ್ತು ಜಸ್ಟಿಸ್ ಷಾ, ಹಾಗೂ ಯೋಗೇಂದ್ರ ಯಾದವ್ ಅವರೂ ಈ ಹೇಳಿಕೆಗೆ ಬೆಂಬಲ ಸೂಚಿಸಿ ಸಹಿ ಹಾಕಿದ್ದಾರೆ. ಅದರಲ್ಲಿ, ನ್ಯಾಯಾಲಯ ನಿಂದನೆ ಖಟ್ಲೆಯನ್ನು ಕೈಬಿಡಲು ಕೋರಲಾಗಿದೆ. ಈ ಹೇಳಿಕೆಗೆ ಸಹಿ ಹಾಕಿರುವ ಇತರ ಕೆಲವು ಗಣ್ಯರೆಂದರೆ ರಾಮಚಂದ್ರ ಗುಹಾ, ಅರುಂಧತಿ ರಾಯ್, ಭಾರದ್ವಾಜ್, ಇಂದಿರಾ ಜೈಸಿಂಗ್ ಮುಂತಾದವರು.

ಸರ್ವೋಚ್ಚ ನ್ಯಾಯಾಲಯದ ಘನತೆ ಗೌರವಗಳನ್ನು ಕಾಪಾಡಿಕೊಳ್ಳುವ ಹಾಗೂ ನ್ಯಾಯವನ್ನು ಎತ್ತಿಹಿಡಿಯುವ ಸಲುವಾಗಿ, ಪ್ರಶಾಂತ್ ಭೂಷಣ್ ಅವರ ವಿರುದ್ಧ ಹಾಕಿರುವ ಮೊಕದ್ದಮೆಯನ್ನು ಹಿಂಪಡೆಯಿರಿ. ಅಸಾಂವಿಧಾನಿಕವಾಗಿ ಸರಕಾರ ಜನತೆಯ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವ ಕೆಲಸವನ್ನು ಅವ್ಯಾಹತವಾಗಿ ಮಾಡುತ್ತಿರುವಾಗಲೂ ಸರ್ವೋಚ್ಚ ನ್ಯಾಯಾಲಯ ರಾಜ್ಯಾಂಗಬದ್ಧವಾದ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಪ್ರಶಾಂತ್ ಭೂಷಣ್ ಅವರು ತಮ್ಮ ಟ್ವಿಟರ್ ಬರಹದ ಮೂಲಕ ದೇಶ ಎದುರಿಸುತ್ತಿರುವ ಗಂಡಾಂತರದ ಕುರಿತು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ಅವರ ಮೇಲೆ ಕೋರ್ಟ್ ನಿಂದನೆ ಆರೋಪ ಹೊರಿಸಿ ಮೊಕದ್ದಮೆ ಹೂಡಿರುವುದು ಸರಿಯಲ್ಲ. ಅವರು ವ್ಯಕ್ತಪಡಿಸಿರುವ ಆತಂಕಗಳ ನಿಟ್ಟುಸಿರನ್ನು ಬಗೆಹರಿಸುವ ಕೆಲಸ ನ್ಯಾಯಾಲಯದ್ದಾಗಿದೆ. ಭೂಷಣ್ ಅವರು ವ್ಯಕ್ತಪಡಿಸಿರುವ ಆತಂಕ ಅವರೊಬ್ಬರದೇ ಅಲ್ಲ. ಪ್ರಜಾಪ್ರಭುತ್ವದಲ್ಲಿ ರಾಜ್ಯಾಂಗದಲ್ಲಿ ನಂಬಿಕೆ ಇರುವ ನಮ್ಮೆಲ್ಲರ ಆತಂಕವೂ ಅದಾಗಿದೆ. ಸರ್ವೋಚ್ಚ ನ್ಯಾಯಾಲಯ ಈ ಟೀಕೆಗಳನ್ನು ಸಹನೆಯಿಂದ ಬರಮಾಡಿಕೊಂಡು ಅದರ ಸತ್ಯಾಸತ್ಯತೆಯನ್ನು ಅರಿಯಲು ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡಿಕೊಡುವ ದೊಡ್ಡತನವನ್ನು ಮೆರೆಯಬೇಕು. ಸರಕಾರ ಮೇಲಿಂದ ಮೇಲೆ ಜನವಿರೋಧಿ ಕೃತ್ಯಗಳಲ್ಲಿ ತೊಡಗಿರುವುದನ್ನು ಬಹಿರಂಗಗೊಳಿಸುವವರ ಬಾಯಿ ಮುಚ್ಚಿಸಲು ನ್ಯಾಯಾಲಯ ಪದೇಪದೇ ಕೋರ್ಟ್ ನಿಂದನೆ ಬೆದರಿಕೆ ಹಾಕುತ್ತಿರುವುದನ್ನು ನಿಲ್ಲಿಸಿ, ಸಾರ್ವಜನಿಕರ ಅಹವಾಲನ್ನು ಆಲಿಸಬೇಕು.

ಪ್ರಜೆಯ ಪವಿತ್ರ ಗ್ರಂಥವಾದ ಸಂವಿಧಾನದ, ನ್ಯಾಯ ನಿಂದನೆಯ ಕೆಲಸ ಸರಕಾರದಿಂದ ಒಂದೇ ಸಮನೆ ನಡೆಯುತ್ತಾ ಹೋಗುತ್ತಿದೆ. ರಾಜ್ಯಾಂಗದಲ್ಲಿ ನಮೂದಾಗಿರುವ ಜನತೆಯ ಮೂಲಭೂತ ಹಕ್ಕುಗಳನ್ನು ಬೇರೆಬೇರೆ ರೀತಿಯಲ್ಲಿ ಅರ್ಥೈಸುವುದರ ಮೂಲಕ ಆ ಹಕ್ಕುಗಳಿಗೆ ಚ್ಯುತಿ ಬರುವಂತೆ ಆಗಿದೆ. ಪ್ರಜೆಯ ಮೂಲಭೂತ ಹಕ್ಕುಗಳಾದ ವಾಕ್ ಸ್ವಾತಂತ್ರ್ಯ ಮತ್ತು ಸ್ವತಂತ್ರವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ಎಲ್ಲ ಸಂದರ್ಭದಲ್ಲೂ ಇರಬೇಕು.

ನಮ್ಮ ಪ್ರಜಾಪ್ರಭುತ್ವ ನಡೆಯುತ್ತಿರುವ ರೀತಿಯಲ್ಲಿ ದೋಷವಿದೆ. ಯಾವುದೇ ಸಮಸ್ಯೆಗೆ ಪರಿಹಾರ ಹುಡುಕಲು ತೊಡಗಿದಾಗ ಈ ಪ್ರಶ್ನೆ ಮಾಡುತ್ತಿರುವವರು ಯಾರು ಮತ್ತು ಪ್ರಶ್ನೆ ಮಾಡುವವನ ರಾಜಕೀಯ ನಿಲುವೇನು ಎಂಬುದು ಹಾಗೂ ಅಧಿಕಾರದಲ್ಲಿರುವ ಪಕ್ಷದ ನಿಲುವಿಗೂ, ಪ್ರಶ್ನಿಸುವವರ ನಿಲುವಿಗೂ ಭಿನ್ನತೆ ಇದೆಯೇ ಎಂಬುದು ಮುಖ್ಯವಾಗಿ ಬಿಡುತ್ತದೆ. ಇತ್ತೀಚೆಗೆ ಪ್ರಶಾಂತ್ ಭೂಷಣ್ ಅವರು ಸುಪ್ರೀಂ ಕೋರ್ಟಿನ ಹಿಂದಿನ ನಾಲ್ವರು ಮುಖ್ಯ ನ್ಯಾಯಾಧೀಶರ ಬಗೆಗೆ ಟೀಕೆ ಮಾಡಿ ಟ್ವೀಟ್ ಮಾಡಿದ್ದರು. ನ್ಯಾಯಾಂಗದ ಬಗೆಗೆ ಜನಸಾಮಾನ್ಯರ ಅನಿಸಿಕೆಯನ್ನು ಕುರಿತ ಟ್ವೀಟ್ ಇದು. ಆದರೆ ನ್ಯಾಯಾಲಯವು ನ್ಯಾಯಾಂಗವನ್ನು ದೂರಿ ಟ್ವೀಟ್ ಮಾಡಿದ್ದಾರೆಂದು ಆರೋಪ ಹೊರಿಸಿ ಮೊಕದ್ದಮೆ ಹೂಡಿದೆ. ಪ್ರಶಾಂತ್ ಭೂಷಣ್ ಅವರ ಹೆಸರನ್ನು ಪಕ್ಕಕ್ಕಿರಿಸಿ ಈ ವಿಚಾರವನ್ನು ಪ್ರತ್ಯೇಕವಾಗಿ ವಿಮರ್ಶೆಗೆ ಒಡ್ಡೋಣ. ಪ್ರಸ್ತಾಪಿಸಲಾಗಿರುವ ನಾಲ್ವರು ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶರ ಪೈಕಿ ಇಬ್ಬರು ಜನವರಿ 2018ರಂದು ಅಧಿಕಾರದಲ್ಲಿದ್ದುಕೊಂಡೇ ಪತ್ರಿಕಾ ಗೋಷ್ಠಿ ನಡೆಸಿದರು. ಆ ಇಬ್ಬರೆಂದರೆ ಜ. ಜೆ. ಚೆಲಮೇಶ್ವರ್ ಮತ್ತು ಈಗ ರಾಜ್ಯಸಭಾ ಸದಸ್ಯರಾಗಿರುವ ಜ. ರಂಜನ್ ಗೊಗೊಯಿ. ಇನ್ನಿಬ್ಬರೆಂದರೆ ಜ. ಮದನ್ ಬಿ. ಲೋಕೂರ್ ಹಾಗೂ ಜ. ಕುರಿಯನ್ ಜೋಸೆಫ್.

ಇವರ ದೂರಿನ ಪತ್ರ ಅಂದಿನ ಮುಖ್ಯ ನ್ಯಾಯಾಧೀಶರಾಗಿದ್ದ ಜ. ದೀಪಕ್ ಮಿಶ್ರಾ ಅವರ ವಿರುದ್ಧ ಇತ್ತು. ಆ ಪತ್ರದ ಸಾರಾಂಶ ಇದು: ಈ ನ್ಯಾಯಾಲಯದಲ್ಲಿ ಘೋಷಿತವಾಗಿರುವ ಕೆಲವು ತೀರ್ಪುಗಳು ನ್ಯಾಯ ನೀಡುವುದರಲ್ಲಿ ನ್ಯಾಯಾಲಯದ ಘನತೆಗೆ ಧಕ್ಕೆ ತರುವವುಗಳಾಗಿರುವುದರಿಂದ ನಾವು ಈ ವಿಷಯವನ್ನು ಹೊರಗೆಡಹುವುದು ಅಗತ್ಯವೆಂದು ಭಾವಿಸಿ ಈ ಪತ್ರಿಕಾಗೋಷ್ಠಿಯನ್ನು ಕರೆದಿದ್ದೇವೆ... ಅಂತಹ ತೀರ್ಪುಗಳನ್ನು ಪಟ್ಟಿ ಮಾಡಿ,... ಆ ತೀರ್ಪುಗಳಿಂದ ಉದ್ಭವವಾಗಿರುವ ಪರಿಣಾಮವನ್ನು ಕುರಿತು ಮಾಧ್ಯಮಗಳಿಗೆ ತಿಳಿಸಿದ್ದೇವೆ. ರಾಜ್ಯ ಸಭೆಯಲ್ಲಿ ಮುಖ್ಯ ನ್ಯಾಯಾಧೀಶರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ಕೋರಿ ಹಲವು ಮಂದಿ ಎಂಪಿಗಳು ನಿರ್ಣಯ ಸಲ್ಲಿಸಿದಾಗ ಆಗಿನ ರಾಜ್ಯ ಸಭೆಯ ಸಭಾಪತಿಗಳು ಅದನ್ನು ಮಂಡಿಸಲು ಅವಕಾಶ ನೀಡಲಿಲ್ಲ. ಆಗ ಆ ಎಂಪಿಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ದಾವೆ (ಪಿಐಎಲ್) ಹೂಡಿದಾಗ ಮುಖ್ಯ ನ್ಯಾಯಾಧೀಶರಾದ ಜ. ದೀಪಕ್ ಮಿಶ್ರಾ ಅದನ್ನು ವಜಾಗೊಳಿಸಿದರು. ಕೆಲ ದಿನಗಳ ನಂತರ ಜ. ಗೊಗೊಯಿ ಅವರು ಮುಖ್ಯ ನ್ಯಾಯಾಧೀಶರಾದರು. ಮುಂದೆ ಜ. ಗೊಗೊಯಿ ಅವರು ನಿವೃತ್ತರಾದ ಕೂಡಲೇ ಭಾರತೀಯ ಜನತಾ ಪಕ್ಷದಿಂದ ರಾಜ್ಯಸಭಾ ಸದಸ್ಯರಾಗಿ ನಾಮಕರಣ ಮಾಡಲ್ಪಟ್ಟರು. ಅಂದು ಆ ನಾಲ್ವರು ನ್ಯಾಯದ ಕಡೆ ವಾಲಿದ್ದರು ಎನ್ನುವುದು ನಿಜವಾದರೂ, ಪತ್ರಿಕಾಗೋಷ್ಠಿ ನಡೆಸಿದ ನಡೆಗಾಗಿ ಅವರ ಮೇಲೆ ಶಿಸ್ತು ಕ್ರಮ ಏಕೆ ಕೈಗೊಳ್ಳಲಾಗಲಿಲ್ಲ? ನ್ಯಾಯಾಲಯದ ದೃಷ್ಟಿಯಲ್ಲಿ ಆ ನಾಲ್ವರದು ಶಿಸ್ತು ಮೀರಿದ ನಡವಳಿಕೆ ಅಲ್ಲವೇ?

ಜನತೆ ನ್ಯಾಯಾಂಗದ ಬಗೆಗೆ ನಂಬಿಕೆ ಕಳೆದುಕೊಳ್ಳಬಾರದು ಎಂದಾದರೆ ಭಿನ್ನಮತದ ಅಭಿಪ್ರಾಯಗಳನ್ನು ಹೊರಗೆಡಹಲು ನ್ಯಾಯಾಲಯ ಅವಕಾಶ ನೀಡಬೇಕು. ಅಂಥವರ ಬಾಯಿ ಮುಚ್ಚಿಸುವ ಕೆಲಸವನ್ನು ನ್ಯಾಯಾಲಯ ಮಾಡಬಾರದು.

ಇತ್ತೀಚೆಗೆ ರಾಜಾಸ್ಥಾನದಲ್ಲಿ ಕಾಂಗ್ರೆಸ್ ಎಂಎಲ್‌ಎಗಳು ಮುಖ್ಯಮಂತ್ರಿ ವಿರುದ್ಧ ಸಿಡಿದು ನಿಂತರು. ಈ ಎಂಎಲ್‌ಎಗಳು ಪಕ್ಷಾಂತರಿಗಳು, ಹಣಕ್ಕೆ ತಮ್ಮನ್ನು ಮಾರಿಕೊಳ್ಳುವವರು ಎಂದು ಯಾರೋ ಅಭಿಪ್ರಾಯಪಟ್ಟರು ಎಂದುಕೊಳ್ಳೋಣ. ಈ ಪಕ್ಷಾಂತರ ಚಾಳಿಯನ್ನು ಮೊದಲ ಬಾರಿ ಜಾರಿಗೆ ತಂದವರು ಕಾಂಗ್ರೆಸ್‌ನವರು. ಈಗ ಆ ಚಾಳಿಯನ್ನು ಹತ್ತು ಪಟ್ಟು ಜಾಸ್ತಿಯಾಗಿ ಬಳಸುತ್ತಿರುವವರು ಆಡಳಿತಾರೂಢ ಬಿಜೆಪಿ ಯವರು. ಅವರು ಇಷ್ಟೆಲ್ಲ ಮಾಡಿದ್ದರೂ ನ್ಯಾಯಾಲಯ ತಿರುಗಿಬಿದ್ದ ಈ ಶಾಸಕರಿಗೆ ಭಿನ್ನಮತವನ್ನು (dissensionಅನ್ನು) ವ್ಯಕ್ತಪಡಿಸಲು ಅಧಿಕಾರ ಉಂಟು ಎಂದು ತೀರ್ಪು ನೀಡಿದ್ದು ಸರಿಯೇ ಇರಬಹುದು. ಆದರೆ ಈ ನಿಲುವನ್ನು ತೆಗೆದುಕೊಂಡ ಗೌರವಾನ್ವಿತರಾದ ನೀವು, ನಿಮ್ಮನ್ನು ವಿಮರ್ಶಿಸಿದ ಪ್ರಶಾಂತ್ ಭೂಷಣರನ್ನು ಕಾನೂನು ಮೀರಿದವರು ಎಂದು ಕರೆಯುತ್ತೀರಲ್ಲ, ಹೇಗೆ ಸಾಧ್ಯ?

(ಇದು 28-7-2020ರ ‘ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯಲ್ಲಿ ಅದರ ಸಂಪಾದಕರಾದ ಜಿ.ಎಸ್.ವಾಸು ಅವರು ಬರೆದಿರುವ ಸಂಪಾದಕೀಯ ಲೇಖನ. ಅದರ ಸಾರಾಂಶವನ್ನು ನನ್ನ ಗ್ರಹಿಕೆಗನುಸಾರ ಕನ್ನಡದಲ್ಲಿ ಬರೆದಿದ್ದೇನೆ. ಕನ್ನಡಿಗರಿಗೆ ಈ ಮಹತ್ವದ ಲೇಖನವನ್ನು ಪರಿಚಯಿಸುವುದು ಅತ್ಯಗತ್ಯ ಎಂದು ಭಾವಿಸಿದ್ದೇನೆ.)

Writer - ಎಚ್. ಎಸ್. ದೊರೆಸ್ವಾಮಿ

contributor

Editor - ಎಚ್. ಎಸ್. ದೊರೆಸ್ವಾಮಿ

contributor

Similar News