ಅಹ್ಮದಾಬಾದ್: ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ; ಎಂಟು ರೋಗಿಗಳು ಮೃತ್ಯು

Update: 2020-08-06 05:21 GMT

  ಅಹ್ಮದಾಬಾದ್, ಆ.6: ಅಹ್ಮದಾಬಾದ್‌ನ ಕೋವಿಡ್-19 ಆಸ್ಪತ್ರೆಯಲ್ಲಿ ಗುರುವಾರ ತಡರಾತ್ರಿ ಭಾರೀ ಅಗ್ನಿ ಅನಾಹುತ ಸಂಭವಿಸಿದೆ. ಘಟನೆಯಲ್ಲಿ ಐವರು ಪುರುಷರು ಹಾಗೂ ಮೂವರು ಮಹಿಳೆಯರು ಸೇರಿ ಸುಮಾರು 8 ಕೋವಿಡ್ ರೋಗಿಗಳು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಅಗ್ನಿ ಅವಘಡದ ಕುರಿತು ಮುಖ್ಯಮಂತ್ರಿ ವಿಜಯ ರೂಪಾನಿ ತನಿಖೆಗೆ ಆದೇಶಿಸಿದ್ದಾರೆ. ತನಿಖೆಗೆ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಮೂರುದಿನದೊಳಗೆ ಬೆಂಕಿ ಹೊತ್ತಿಕೊಳ್ಳಲು ಕಾರಣ ತಿಳಿಸುವ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ಅಹ್ಮದಾಬಾದ್‌ನ ನವರಂಗಪುರ ಪ್ರದೇಶದ ಶ್ರೇಯಾ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಬೆಳಗ್ಗಿನ ಜಾವ 3:30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಹಲವು ಅಗ್ನಿಶಾಮಕ ಯಂತ್ರಗಳು ಸ್ಥಳಕ್ಕೆ ಧಾವಿಸಿದ್ದವು. ಆಸ್ಪತ್ರೆಯ ಆಡಳಿತ ಮಂಡಳಿಯು ಉಳಿದ ರೋಗಿಗಳನ್ನು ಆಸ್ಪತ್ರೆಯಿಂದ ತೆರವುಗೊಳಿಸಲು ಯತ್ನಿಸಿದರು. ಇನ್ನು ಹಲವು ರೋಗಿಗಳನ್ನು ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ರಕ್ಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 "ಘಟನೆಯಲ್ಲಿ ಒಟ್ಟು 8 ಮಂದಿ ಮೃತಪಟ್ಟಿದ್ದಾರೆ. ಬೆಳಗ್ಗೆ 3:30ರಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಅದನ್ನು ಇದೀಗ ನಿಯಂತ್ರಿಸಲಾಗಿದೆ. ಇತರ ಹಲವು ರೋಗಿಗಳನ್ನು ರಕ್ಷಿಸಲಾಗಿದೆ'' ಎಂದು ಅಹ್ಮದಾಬಾದ್ ನಗರದ ಪೊಲೀಸ್ ಉಪಾಯುಕ್ತ ಎಲ್‌ಜಿ ಝಾಲಾ ಹೇಳಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಘಟನೆಯ ಬಗ್ಗೆ ಶೋಕ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿಯ ಕುರಿತು ಮುಖ್ಯಮಂತ್ರಿ ವಿಜಯ ರೂಪಾನಿ ಹಾಗೂ ಅಹ್ಮದಾಬಾದ್ ಮೇಯರ್ ಬಿಜಾಲ್ ಪಟೇಲ್‌ರೊಂದಿಗೆ ಮಾತನಾಡಿದ್ದಾರೆ. ಅಗ್ನಿ ಅವಘಡದಿಂದ ಬಾಧಿತರಾದವರಿಗೆ ಆಡಳಿತವು ಸಾಧ್ಯವಿರುವ ಎಲ್ಲ ಸಹಾಯ ಒದಗಿಸಲಿದೆ ಎಂದು ಪ್ರಧಾನಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News