ಭಾರತದ ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆ ಸಮಿತಿ ಇಲ್ಲ

Update: 2020-08-06 06:59 GMT

ಹೊಸದಿಲ್ಲಿ: ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಮಹಿಳಾ ಕ್ರಿಕೆಟ್‌ನ ಸುತ್ತ ಸಾಕಷ್ಟು ಮಾತುಕತೆ ನಡೆಯುತ್ತಿದೆ, ಆದರೆ ಸರಿಯಾದ ಕಾರಣಗಳಿಗಾಗಿ ಅಲ್ಲ.

ಯುಎಇಯಲ್ಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಜೊತೆಗೆ ಮೂರು ತಂಡಗಳ ಮಹಿಳಾ ಟ್ವೆಂಟಿ-20 ಟೂರ್ನಿಯನ್ನು ನಡೆಸಲಾಗುವುದು ಎಂದು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ಘೋಷಿಸಿತು. ಆದರೆ ಇದು ಆಸ್ಟ್ರೇಲಿಯದಲ್ಲಿ ಮಹಿಳಾ ಬಿಗ್ ಬ್ಯಾಷ್ ಲೀಗ್‌ನೊಂದಿಗೆ ಘರ್ಷಣೆಯಾಗಿದ್ದರಿಂದ ಸಮಯದ ಬಗ್ಗೆ ಪ್ರಶ್ನೆಗಳು ಎದ್ದವು.

 ಟ್ವೆಂಟಿ-20 ಚಾಲೆಂಜ್ ನಡೆಸುವ ಕ್ರಮವನ್ನು ಭಾರತೀಯ ಕ್ರಿಕೆಟಿಗರು ಸ್ವಾಗತಿಸಿದರೆ, ಅಲಿಸಾ ಹೀಲಿ ಮತ್ತು ಸುಝೀ ಬೇಟ್ಸ್ ಸೇರಿದಂತೆ ಹಿರಿಯ ವಿದೇಶಿ ಆಟಗಾರರು ಸಮಯವನ್ನು ಪ್ರಶ್ನಿಸಿದ್ದರು. ಭಾರತದಲ್ಲಿ ಮಹಿಳಾ ಕ್ರಿಕೆಟ್‌ಗೆ ಆಯ್ಕೆ ಸಮಿತಿ ಇಲ್ಲದಿರುವುದರಿಂದ ಮಹಿಳಾ ಟ್ವೆಂಟಿ-20 ಚಾಲೆಂಜ್‌ಗೆ ಮೂರು ತಂಡಗಳನ್ನು ಯಾರು ಆಯ್ಕೆ ಮಾಡುತ್ತಾರೆ ಎಂಬ ಪ್ರಶ್ನೆಗಳು ಈಗ ಹೊರಬಿದ್ದಿವೆ.

  ಹೇಮಲತಾ ಕಲಾ ನೇತೃತ್ವದ ಆಯ್ಕೆ ಸಮಿತಿಯಲ್ಲಿ ಅಂಜಲಿ ಪೆಂಧಾರ್ಕರ್, ಸುಧಾ ಶಾ, ಲೋಪಮುದ್ರ ಭಟ್ಟಾಚಾರ್ಜಿ ಮತ್ತು ಶಶಿ ಗುಪ್ತಾ ಇದ್ದರು. ಈ ಸಮಿತಿಯು ಈಗಾಗಲೇ ತನ್ನ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದೆ.

ಜನವರಿಯಲ್ಲಿ ಪುರುಷರ ಹಿರಿಯ ಮತ್ತು ಕಿರಿಯ ಆಯ್ಕೆದಾರರೊಂದಿಗೆ ಹೊಸ ಸಮಿತಿಯ ನೇಮಕಕ್ಕಾಗಿ ಬಿಸಿಸಿಐ ಜಾಹೀರಾತು ನೀಡಿತ್ತು. ಪುರುಷರ ತಂಡದ ಆಯ್ಕೆ ಸಮಿತಿಗೆ ಸದಸ್ಯರನ್ನು ನೇಮಿಸಿಕೊಳ್ಳುವಲ್ಲಿ ಬಿಸಿಸಿಐ ತ್ವರಿತ ಕ್ರಮ ಕೈಗೊಂಡಿತ್ತು. ಆದರೆ ಮಹಿಳಾ ಆಯ್ಕೆ ಸಮಿತಿಗೆ ಯಾವುದೇ ನೇಮಕಾತಿಗಳನ್ನು ಮಾಡಲಾಗಿಲ್ಲ. ಈಗ ಕೋವಿಡ್ -19 ಕಾರಣಗಳಿಂದಾಗಿ ಆಯ್ಕೆ ಸಮಿತಿಯ ಜವಾಬ್ದಾರಿಯನ್ನು ಯಾರು ಹೊತ್ತುಕೊಳ್ಳುತ್ತಾರೆ ಎನ್ನುವುದು ಸ್ಪಷ್ಟಗೊಂಡಿಲ್ಲ.

 ಭಾರತದ ಮಹಿಳಾ ತಂಡವು ಇತ್ತೀಚೆಗೆ ತಮ್ಮ ಇಂಗ್ಲೆಂಡ್ ಪ್ರವಾಸದಿಂದ ಹಿಂದೆ ಸರಿಯಿತು. ಅಲ್ಲಿ ಭಾರತವು ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡದೊಂದಿಗೆ ತ್ರಿ-ರಾಷ್ಟ್ರಗಳ ಸರಣಿಯ ಭಾಗವಾಗಬೇಕಿತ್ತು. ಭಾರತದ ಮಹಿಳಾ ಕ್ರಿಕೆಟ್ ಬಗ್ಗೆ ಉತ್ತಮ ಸಂವಹನ ನಡೆಸಬೇಕೆಂದು ಭಾರತದ ಮಹಿಳಾ ತಂಡದ ಮಾಜಿ ನಾಯಕಿ ಅಂಜುಮ್ ಚೋಪ್ರಾ ಹೇಳಿದ್ದಾರೆ. ‘‘ಬಿಸಿಸಿಐ ಮಹಿಳಾ ಕ್ರಿಕೆಟ್ ಬಗ್ಗೆ ಯೋಚಿಸುತ್ತಿಲ್ಲವೆಂದು ನನ್ನ ಆರೋಪವಲ್ಲ. ಆದರೆ ಮಹಿಳಾ ಕ್ರಿಕೆಟ್ ಬಗ್ಗೆ ಸಂವಹನದಲ್ಲಿ ಅವರು ಹೆಚ್ಚು ನಿರ್ದಿಷ್ಟವಾಗಿರಬೇಕು ಎಂದು ನಾನು ಭಾವಿಸುತ್ತೇನೆ’’ಎಂದು ಚೋಪ್ರಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News