ಧೋನಿ ದಾಖಲೆ ಮುರಿದ ಮೊರ್ಗನ್

Update: 2020-08-06 07:00 GMT

ಲಂಡನ್: ಐರ್‌ಲ್ಯಾಂಡ್ ಅಂತಿಮ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಇಯಾನ್ ಮೊರ್ಗನ್ ನಾಯಕರಾಗಿ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು ಮುರಿದರು.

ಮೊರ್ಗನ್ 84ಎಸೆತಗಳಲ್ಲಿ 106 ರನ್ ಗಳಿಸಿದರು.ಇದರಲ್ಲಿ 15 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳು ಸೇರಿವೆ. ಇದರೊಂದಿಗೆ ಇಂಗ್ಲೆಂಡ್ 329 ರನ್‌ಗಳ ಸವಾಲನ್ನು ನೀಡಿತ್ತು.

   4 ಸಿಕ್ಸರ್‌ಗಳೊಂದಿಗೆ ಎಡಗೈ ಬಾಟ್ಸ್‌ಮನ್ ಈಗ 328 ಅಂತರ್‌ರಾಷ್ಟ್ರೀಯ ಸಿಕ್ಸರ್‌ಗಳನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ನಾಯಕನಾಗಿ ತಂಡವನ್ನು ಮುನ್ನಡೆಸಿದ ಪಂದ್ಯಗಳಲ್ಲಿ ಅವರು 212 ಸಿಕ್ಸರ್‌ಗಳನ್ನು ದಾಖಲಿಸಿದ್ದಾರೆ. ಧೋನಿ 211 ಸಿಕ್ಸರ್ ದಾಖಲಿಸಿದ್ದಾರೆ.

  ಭಾರತದ ಮಾಜಿ ನಾಯಕ ಧೋನಿ 211 ಸಿಕ್ಸರ್ ಬಾರಿಸಲು 332 ಪಂದ್ಯಗಳನ್ನು ತೆಗೆದುಕೊಂಡಿದ್ದರೆ, ಮೊರ್ಗನ್ ಕೇವಲ 163 ಪಂದ್ಯಗಳಲ್ಲಿ ಧೋನಿಯ ದಾಖಲೆಯನ್ನು ಮುರಿದಿದ್ದಾರೆ. ರಿಕಿ ಪಾಂಟಿಂಗ್ ನಾಯಕನಾಗಿ 171 ಸಿಕ್ಸರ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ ಮತ್ತು ನ್ಯೂಝಿಲ್ಯಾಂಡ್‌ನ ಬ್ರೆಂಡನ್ ಮೆಕಲಮ್ (170) ನಾಲ್ಕನೇ ಸ್ಥಾನ ಪಡೆದಿದ್ದಾರೆ.

  

 ಆದಾಗ್ಯೂ ಧೋನಿ ಮೊರ್ಗನ್‌ಗಿಂತ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆ ಹೊಂದಿದ್ದಾರೆ. ಧೋನಿ ಒಟ್ಟು 359 ಸಿಕ್ಸರ್‌ಗಳನ್ನು ಗಳಿಸಿದ್ದಾರೆ. ಆದರೆ ಮೊರ್ಗನ್ ಅವರ ಹೆಸರಿನಲ್ಲಿ ದಾಖಲಾದ ಸಿಕ್ಸರ್‌ಗಳು 328. ವೆಸ್ಟ್‌ಇಂಡೀಸ್‌ನ ಕ್ರಿಸ್ ಗೇಲ್ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠಸಿಕ್ಸರ್‌ಗಳ ದಾಖಲೆಯನ್ನು ಹೊಂದಿದ್ದಾರೆ. 462 ಪಂದ್ಯಗಳಲ್ಲಿ ಇದುವರೆಗೆ534 ಸಿಕ್ಸರ್ ಬಾರಿಸಿದ್ದಾರೆ. ಶಾಹಿದ್ ಅಫ್ರಿದಿ (476), ರೋಹಿತ್ ಶರ್ಮಾ (423) ಮತ್ತು ಮೆಕಲಮ್ (398) ನಂತರದ ಸ್ಥಾನದಲ್ಲಿದ್ದಾರೆ.

ಇಂಗ್ಲೆಂಡ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಐರ್‌ಲ್ಯಾಂಡ್ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಗೆಲುವು ದಾಖಲಿಸಿದೆ. 2015ರ ವಿಶ್ವಕಪ್ ನಂತರ ಪ್ರಮುಖ ರಾಷ್ಟ್ರದ ವಿರುದ್ಧ ಐರ್‌ಲ್ಯಾಂಡ್‌ನ ಮೊದಲ ಜಯವಾಗಿದೆ. ಕೊರೋನ ವೈರಸ್ ಲಾಕ್‌ಡೌನ್ ನಂತರ ಮೊದಲ ಏಕದಿನ ಸರಣಿಯನ್ನು ಪೂರ್ಣಗೊಳಿಸಿದ ಐರ್‌ಲ್ಯಾಂಡ್‌ನ ಮೊದಲ ಗೆಲುವಿನೊಂದಿಗೆ ವಿಶ್ವಕಪ್ ಸೂಪರ್ ಲೀಗ್‌ನಲ್ಲಿ 10 ಅಂಕಗಳನ್ನು ಪಡೆದಿದೆ. ಇದು ಭಾರತದಲ್ಲಿ 2023ರಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್‌ಗೆ ಅರ್ಹತೆಯನ್ನು ನಿರ್ಧರಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News