ಬೆಂಗಳೂರು: ನಕಲಿ ಪೊಲೀಸ್, ನಕಲಿ ಪತ್ರಕರ್ತೆ ಬಂಧನ

Update: 2020-08-06 15:41 GMT

ಬೆಂಗಳೂರು, ಆ.6: ತಾನು ಪೊಲೀಸ್, ಪತ್ರಕರ್ತೆ ಎಂದು ಸುಳ್ಳು ಹೇಳಿಕೊಂಡು ವಂಚನೆ ಮಾಡಿದ ಆರೋಪದಡಿ ಮಹಿಳೆ ಸೇರಿ ಇಬ್ಬರನ್ನು ಇಲ್ಲಿನ ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರ ನಿವಾಸಿಗಳಾದ ಭವಾನಿ ಹಾಗೂ ಶಶಿಕುಮಾರ್ ಯಾನೆ ಶಶಿ ಎಂಬುವರ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಬೃಂದಾವನ ನಗರ ನಿವಾಸಿ ಮಹಿಳೆಯೊಬ್ಬಾಕೆ, ತಮ್ಮ ಮನೆ ಮಾರಾಟ ಮಾಡಿದ್ದ ಹಣದಲ್ಲಿ ಪರಿಚಯಸ್ಥರೊಬ್ಬರಿಗೆ 25 ಲಕ್ಷ ರೂಪಾಯಿ ಸಾಲ ಕೊಟ್ಟಿದ್ದರು. ಆದರೆ, ಸಾಲದ ಹಣ ವಾಪಸ್ ಕೊಟ್ಟಿರಲಿಲ್ಲ. ಈ ಹಿಂದೆ ಪಕ್ಕದ ಮನೆಯಲ್ಲೆ ನೆಲೆಸಿದ್ದ ಭವಾನಿ ಎಂಬಾಕೆ ಪತ್ರಕರ್ತೆ ಆಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಪೊಲೀಸರು ಪರಿಚಯವಿದ್ದಾರೆ ನೀವು ಕೊಟ್ಟಿರುವ ಸಾಲದ ಹಣವನ್ನು ಅವರ ಮೂಲಕ ವಸೂಲಿ ಮಾಡಿಸಿ ಕೊಡುತ್ತೇನೆ. ಇದಕ್ಕೆ 2 ಲಕ್ಷ ರೂ. ಖರ್ಚಾಗುತ್ತದೆ ಎಂದಿದ್ದು, ಆಕೆಯ ಮಾತನ್ನು ನಂಬಿದ ಮಹಿಳೆ, ಸೊಸೆಯ ಒಡವೆಗಳನ್ನು ಅಡವಿಟ್ಟು 2 ಲಕ್ಷ ರೂ. ಕೊಟ್ಟಿದ್ದಾರೆ. 
ಬಳಿಕ ಭವಾನಿ, ಮಹಿಳೆಯನ್ನು ದಕ್ಷಿಣ ವಿಭಾಗ ಉಪ ಪೊಲೀಸ್ ಆಯುಕ್ತರ ಕಚೇರಿ ಬಳಿ ಕರೆದೊಯ್ದು ಆರೋಪಿ ಶಶಿಕುಮಾರ್ ಎಂಬಾತನನ್ನು ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿದ್ದಳು ಎನ್ನಲಾಗಿದೆ.

ಇವರು ಡಿಸಿಪಿ ಕಚೇರಿಯಲ್ಲೇ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಎಲ್ಲ ವಿಷಯವನ್ನು ತಿಳಿಸಿದ್ದೇನೆ ಇನ್ನೂ ಹದಿನೈದು ದಿನದೊಳಗೆ ಹಣ ವಾಪಸ್ಸು ಬರಲಿದೆ ಎಂದು ನಂಬಿಸಿದ್ದಾರೆ. ಕೆಲ ದಿನಗಳ ವಿಚಾರಿಸಲು ಕರೆ ಮಾಡಿದ್ದ ಮಹಿಳೆ, ಆರೋಪಿಗಳು ಉತ್ತರಿಸಿ, ನಿಮ್ಮಿಂದ ಸಾಲ ಪಡೆದವರಿಗೆ ನೆಲಮಂಗಲದಲ್ಲಿ ಜಮೀನು ಇದೆ. ಅದನ್ನು ಹರಾಜು ಹಾಕಿಸಬೇಕು. ಇದಕ್ಕಾಗಿ ಅಧಿಕಾರಿಗಳಿಗೆ 1 ಲಕ್ಷ ರೂ. ಕೊಡಬೇಕು ಎಂದು ಸಬೂಬು ಹೇಳಿದ್ದರು. 
ಈ ವೇಳೆ ಭವಾನಿ ಮತ್ತು ಶಶಿ ಎಂಬುವರ ನಡೆಯ ಬಗ್ಗೆ ಅನುಮಾನ ಬಂದಿದ್ದು, ತೆಗೆದುಕೊಂಡಿದ್ದ 2 ಲಕ್ಷ ರೂಪಾಯಿ ವಾಪಸ್ ಕೊಡುವಂತೆ ಕೇಳಿದ್ದರು. ಆಗ ಅವರಿಬ್ಬರು, ಹಣ ವಾಪಸ್ ಕೊಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಜಯನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News