ಕೊಬ್ಬರಿಗೆ ಪ್ರೋತ್ಸಾಹ ಧನ ನೀಡಲು ಸಂಪುಟ ಉಪ ಸಮಿತಿ ತೀರ್ಮಾನ

Update: 2020-08-06 16:54 GMT

ಬೆಂಗಳೂರು, ಆ. 6: ರಾಜ್ಯದಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ಹೆಚ್ಚಿನ ನೆರವು ಒದಗಿಸಲು ಉಂಡೆ ಕೊಬ್ಬರಿಗೆ ಹೆಚ್ಚಿನ ಪ್ರೋತ್ಸಾಹ ಧನ ನೀಡಲು ರಾಜ್ಯ ಸರಕಾರ ನಿರ್ಧರಿಸಿದೆ.

ಗುರುವಾರ ವಿಧಾನಸೌಧದಲ್ಲಿ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಬೆಲೆ ಸ್ಥಿರೀಕರಣದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಉಪಸಮಿತಿ ಅಧ್ಯಕ್ಷ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.

ಉಂಡೆ ಕೊಬ್ಬರಿಗೆ ಕ್ವಿಂಟಾಲ್‍ಗೆ 10,300 ರೂ.ಮೊತ್ತದಷ್ಟು ಬೆಂಬಲ ಬೆಲೆಯನ್ನು ಕೇಂದ್ರ ಸರಕಾರ ಘೋಷಿಸಿತ್ತು. ಆದರೆ ಇನ್ನೂ ಹೆಚ್ಚಿನ ಬೆಂಬಲ ಬೆಲೆ ಸಿಗಬೇಕೆಂಬ ರೈತರ ಬೇಡಿಕೆಗೆ ರಾಜ್ಯ ಸರಕಾರ ಸ್ಪಂದಿಸಿ ಕ್ವಿಂಟಾಲ್‍ಗೆ 1 ಸಾವಿರ ರೂ.ನಷ್ಟು ಪ್ರೋತ್ಸಾಹ ಧನವನ್ನು ರಾಜ್ಯ ಸರಕಾರದಿಂದಲೇ ಬರಿಸಲು ಈ ಸಭೆಯಲ್ಲಿ ನಿರ್ಧರಿಸಲಾಯಿತು. ಇದರಿಂದಾಗಿ ರೈತರಿಗೆ ಪ್ರತಿ ಕ್ವಿಂಟಾಲ್‍ಗೆ ಒಟ್ಟು 11,300 ರೂ.ದೊರೆಯುವಂತಾಗುತ್ತದೆ ಎಂದು ಲಕ್ಷ್ಮಣ ಸವದಿ ತಿಳಿಸಿದರು.

ಕೊಬ್ಬರಿಗೆ ಪ್ರೋತ್ಸಾಹ ಧನ ಹೆಚ್ಚಳದಿಂದ ರಾಜ್ಯ ಸರಕಾರಕ್ಕೆ ಸುಮಾರು 38 ಕೋಟಿ ರೂಪಾಯಿಗಳಷ್ಟು ಹೆಚ್ಚಿನ ಹೊರೆಯಾದರೂ ರೈತರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಲಕ್ಷ್ಮಣ ಸವದಿ ತಿಳಿಸಿದರು. ಈ ನಿರ್ಧಾರದಿಂದಾಗಿ ಕೊಬ್ಬರಿ ಉತ್ಪಾದಿಸುವ ಚಿತ್ರದುರ್ಗ, ತುಮಕೂರು, ಹಾಸನ, ಮಂಡ್ಯ, ಮೈಸೂರು, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಮುಂತಾದ ಜಿಲ್ಲೆಗಳ ರೈತರಿಗೆ ವರದಾನವಾಗುತ್ತದೆ ಎಂದರು.

ಅವಧಿ ವಿಸ್ತರಣೆ: ರೈತರಿಗೆ ಈ ಸಂಬಂಧ ಅನುಕೂಲ ಕಲ್ಪಿಸಲು ರೈತರಿಂದ ಖರೀದಿ ನೋಂದಣಿ ಅವಧಿಯನ್ನು ಆ.25ರ ವರೆಗೆ ವಿಸ್ತರಿಸಲಾಗಿದೆ ಮತ್ತು ಖರೀದಿಯ ಕಾಲಾವಧಿಯನ್ನು ಸೆಪ್ಟಂಬರ್ 10ರ ವರೆಗೆ ವಿಸ್ತರಿಸಿ ಆದೇಶ ನೀಡಲಾಗಿದೆ. ರಾಜ್ಯ ಸರಕಾರದ ಈ ಕ್ರಮದಿಂದ ರೈತರು ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಲಕ್ಷ್ಮಣ ಸವದಿ ಇದೇ ವೇಳೆ ಮನವಿ ಮಾಡಿದರು.

ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿಂದು ನಡೆದ ಸಂಪುಟದ ಉಪಸಮಿತಿ ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಗೋಪಾಲಯ್ಯ ಮತ್ತು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News