250 ಕೋಟಿ ಮೊತ್ತದ ಆಸ್ತಿ ಜಪ್ತಿಗೆ ಕ್ರಮ ಕೈಗೊಳ್ಳಲಾಗಿದೆಯೇ?: ಹೈಕೋರ್ಟ್ ಪ್ರಶ್ನೆ

Update: 2020-08-06 17:25 GMT

ಬೆಂಗಳೂರು, ಆ.6: ಶ್ರೀ ಕಣ್ವ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ 250 ಕೋಟಿ ರೂ. ಮೊತ್ತದ ಆಸ್ತಿಯನ್ನು ಜಪ್ತಿಗೆ ಕ್ರಮ ಕೈಗೊಳ್ಳಲಾಗಿದೆಯೇ ಎಂದು ರಾಜ್ಯ ಸರಕಾರವನ್ನು ಹೈಕೋರ್ಟ್ ಪ್ರಶ್ನಿಸಿದೆ. ಜತೆಗೆ ಸೊಸೈಟಿ ಅವ್ಯವಹಾರ ಪ್ರಕರಣದ ತನಿಖಾ ಪ್ರಗತಿ ವರದಿಯನ್ನು ಸಲ್ಲಿಸಲು ಸೂಚಿಸಿದೆ.

ಈ ಕುರಿತು ವಹಿವಾಟು ಮತ್ತು ಲೆಕ್ಕಪತ್ರಗಳ ಬಗ್ಗೆ ಫೊರೆನ್ಸಿಕ್ ಆಡಿಟ್ ನಡೆಸುವಂತೆ ಕೋರಿ ಕೆ.ಎಸ್.ರಮೇಶ್ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಸರಕಾರದ ಪರ ವಾದಿಸಿದ ವಕೀಲರು, ಕಣ್ವ ಬ್ಯಾಂಕ್ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಲ ಆಸ್ತಿಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೀಠಕ್ಕೆ ತಿಳಿಸಿದರು. 

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠವು, 250 ಕೋಟಿ ಮೊತ್ತದ ಆಸ್ತಿ ಜಪ್ತಿಗೆ ಕ್ರಮ ಕೈಗೊಳ್ಳಲಾಗಿದೆಯೇ? ಕ್ರಮ ಕೈಗೊಂಡಿದ್ದರೂ ಜಪ್ತಿ ಆದೇಶದ ಅಧಿಸೂಚನೆ ಹೊರಡಿಸಿಲ್ಲವೇಕೆ ಎಂದು ಪ್ರಶ್ನಿಸಿತು. 

ರಾಜ್ಯ ಸರಕಾರ ಠೇವಣಿದಾರರ ಹಿತಾಸಕ್ತಿ ಕಾಪಾಡುವ ಅವಶ್ಯಕತೆ ಇದೆ. ಸಕ್ಷಮ ಪ್ರಾಧಿಕಾರ ಕೂಡ ನೆಪ ಹೇಳದೇ ಕೆಲಸ ಮಾಡಬೇಕು ಎಂದು ನ್ಯಾಯಪೀಠವು ಸೂಚನೆ ನೀಡಿ, ಆ.19ರಂದು ತನಿಖಾ ಪ್ರಗತಿ ವರದಿ ಸಲ್ಲಿಸಲು ಸೂಚನೆ ನೀಡಿತು.   
ಹಿಂದಿನ ವಿಚಾರಣೆ: ಸಕ್ಷಮ ಪಾಧಿಕಾರ ಸೂಕ್ತ ಕ್ರಮ ತೆಗೆದುಕೊಂಡಿಲ್ಲ. ಒಂದು ವಾರದೊಳಗೆ ಸರಕಾರ ಮತ್ತು ಸಕ್ಷಮ ಪ್ರಾಧಿಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿತ್ತು. 

ಇಲ್ಲದಿದ್ದರೆ ಪ್ರಕರಣವನ್ನು ಬೇರೊಂದು ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸುವುದಾಗಿ ಎಚ್ಚರಿಕೆ ನೀಡಿತ್ತು. ಅರ್ಜಿದಾರರ ಪರ ವಕೀಲರು ಸೊಸೈಟಿಯ ದಾಖಲೆಗಳ ಬುಕ್‍ನ್ನೇ ಇನ್ನೂ ವಶಕ್ಕೆ ಪಡೆದಿಲ್ಲ. ಸೊಸೈಟಿಯ ಯಾವುದೇ ಆಸ್ತಿ ಸೀಜ್ ಮಾಡಿಲ್ಲ. ವಿಶೇಷ ಅಧಿಕಾರಿ ಇನ್ನೂ ಒಮ್ಮೆಯೂ ಸೊಸೈಟಿಗೆ ಭೇಟಿ ಮಾಡಿಲ್ಲ ಎಂದು ಆರೋಪಿಸಿದ್ದರು. ವಿಶೇಷ ಅಧಿಕಾರಿ ಇನ್ನೂ ದಾಖಲೆಗಳ ಬುಕ್ ಸೀಜ್ ಮಾಡಿಲ್ಲ, ವಿಶೇಷ ಅಧಿಕಾರಿ ನೇಮಕವಾಗಿ 7 ತಿಂಗಳು ಕಳೆದಿದೆ ಯಾಕೆ ಕ್ರಮವಿಲ್ಲ ಎಂದು ನ್ಯಾ. ಅರವಿಂದ ಕುಮಾರ್ ಸರಕಾರಕ್ಕೆ ತರಾಟೆ ತೆಗೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News