ಕರ್ನಾಟಕ ವಕ್ಫ್ ಬೋರ್ಡ್ ಅಧ್ಯಕ್ಷ ಡಾ. ಯೂಸುಫ್ ನಿಧನ

Update: 2020-08-07 14:01 GMT

ಬೆಂಗಳೂರು, ಆ.7: ಕೋವಿಡ್ ಸೋಂಕು ಹಾಗೂ ಕಿಡ್ನಿಗಳ ವೈಫಲ್ಯದಿಂದಾಗಿ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಡಾ.ಮುಹಮ್ಮದ್ ಯೂಸುಫ್(71) ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಗ್ಗೆ 3 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ.

ಕೋವಿಡ್ ಸೋಂಕು ತಗುಲಿರುವುದು ದೃಡಪಟ್ಟ ಹಿನ್ನೆಲೆಯಲ್ಲಿ ಅವರನ್ನು 15 ದಿನಗಳ ಹಿಂದೆ ಕನಕಪುರ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಎರಡು ಕಿಡ್ನಿಗಳು ವಿಫಲವಾದ್ದರಿಂದ ವೆಂಟಿಲೇಟರ್ ಮೇಲೆ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.

ಸತತ ಎರಡು ಬಾರಿ ರಾಜ್ಯ ವಕ್ಫ್ ಬೋರ್ಡ್‍ನ ಅಧ್ಯಕ್ಷರಾಗಿದ್ದ ಮುಹಮ್ಮದ್ ಯೂಸುಫ್, ತಮ್ಮ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿರುವ ವಕ್ಫ್ ಆಸ್ತಿಗಳ ಅಭಿವೃದ್ಧಿ ಹಾಗೂ ಸಮುದಾಯದ ಕಲ್ಯಾಣಕ್ಕಾಗಿ ಶ್ರಮಿಸಿದರು. ವಕ್ಫ್ ಬೋರ್ಡ್‍ನಲ್ಲಿ ನೂರಾರು ಮಂದಿಗೆ ಸರಕಾರಿ ಉದ್ಯೋಗ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದರು. ವಕ್ಫ್ ಬೋರ್ಡ್‍ನ ಅಧ್ಯಕ್ಷರಾಗಿ ಸರಕಾರದಿಂದ ಯಾವುದೆ ವೇತನ, ಭತ್ತೆಗಳನ್ನು ಪಡೆಯುತ್ತಿರಲಿಲ್ಲ.
ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿಯೂ ಸತತವಾಗಿ ಜನಸಾಮಾನ್ಯರೊಂದಿಗೆ ಬೆರೆತು, ವಕ್ಫ್ ಸಂಸ್ಥೆಗಳ ಮೂಲಕ ಅಗತ್ಯವಿರುವವರಿಗೆ ನೆರವು ಕಲ್ಪಿಸಿದರು. ರಮಝಾನ್ ಮಾಸದಲ್ಲಿಯೂ ಎಲ್ಲ ಸಮುದಾಯಗಳ ಬಡವರಿಗೆ ಆಹಾರದ ಪ್ಯಾಕೆಟ್‍ಗಳು, ದಿನಸಿ ಕಿಟ್‍ಗಳು, ಅಗತ್ಯ ಔಷಧಿಗಳನ್ನು ವಕ್ಫ್ ಸಂಸ್ಥೆಗಳ ಮೂಲಕ ತಲುಪಿಸಲು ಕ್ರಮ ಕೈಗೊಂಡಿದ್ದರು.

ವಕ್ಫ್ ಮ್ಯಾನೇಜ್‍ಮೆಂಟ್ ಸಿಸ್ಟಮ್ ಆಫ್ ಇಂಡಿಯಾ ಮಾದರಿಯಲ್ಲಿ ರಾಜ್ಯದ 54 ಸಾವಿರಕ್ಕೂ ಹೆಚ್ಚು ವಕ್ಫ್ ಆಸ್ತಿಗಳನ್ನು ಜಿಪಿಎಸ್ ಆಧಾರಿತ ಸರ್ವೆ ಮಾಡಲು, ಜಿಲ್ಲಾ ಕೇಂದ್ರಗಳಲ್ಲಿ ಮೊಹಲ್ಲಾ ಕ್ಲಿನಿಕ್‍ಗಳು ಹಾಗೂ ವಕ್ಫ್ ನರ್ಸಿಂಗ್ ಹೋಮ್‍ಗಳನ್ನು ತೆರೆಯಲು ಉದ್ದೇಶಿಸಿದ್ದರು.
ಅಲ್ಲದೆ, 7ನೇ ಹಾಗೂ 10ನೇ ತರಗತಿಯ ಮುಸ್ಲಿಮ್ ವಿದ್ಯಾರ್ಥಿಗಳಿಗಾಗಿ ಇಂಗ್ಲಿಷ್, ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ಬೋಧಿಸಲು ನಿವೃತ್ತ ಶಿಕ್ಷಕರನ್ನು ಬಳಸಿಕೊಂಡು ಮಸೀದಿ ಹಾಗೂ ಮದ್ರಸಾಗಳಲ್ಲಿ ವಿಶೇಷ ತರಗತಿಗಳನ್ನು ನಡೆಸಲು ಮುಹಮ್ಮದ್ ಯೂಸುಫ್ ಮುಂದಾಗಿದ್ದರು.

ಬೆಂಗಳೂರು ಹಾಗೂ ದುಬೈನಲ್ಲಿ ಉದ್ಯಮ ನಡೆಸುತ್ತಿದ್ದ ಮುಹಮ್ಮದ್ ಯೂಸುಫ್, ಕೊಡುಗೈ ದಾನಿಯಾಗಿ ಗುರುತಿಸಲ್ಪಟ್ಟಿದ್ದರು. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿನ ಹಲವಾರು ಮಸೀದಿ, ಮದ್ರಸಾಗಳಿಗೆ ನೆರವು ನೀಡುತ್ತಿದ್ದರು.

ತಮ್ಮ ಸ್ವಂತ ಖರ್ಚಿನಿಂದ ಗೋವಿಂದಪುರದಲ್ಲಿ ಮಸ್ಜಿದ್-ಎ-ಮುಝಮ್ಮಿಲ್ ನಿರ್ಮಿಸಿ, ಅದನ್ನು ವಕ್ಫ್ ಮಾಡಿದ್ದರು. ಇದೀಗ ಮುಹಮ್ಮದ್ ಯೂಸುಫ್ ಅವರ ಅಂತಿಮ ಇಚ್ಛೆಯಂತೆ ಅದೇ ಮಸೀದಿಯ ಆವರಣದಲ್ಲಿ ಕೋವಿಡ್-19 ಶಿಷ್ಟಾಚಾರದಂತೆ ಬೆಳಗ್ಗೆ 8.30ರ ಸುಮಾರಿಗೆ ಅವರ ಮೃತದೇಹವನ್ನು ದಫನ್ ಮಾಡಲಾಯಿತು. ಮೃತರು ಪತ್ನಿ, ಓರ್ವ ಪುತ್ರ, ಪುತ್ರಿ, ಅಪಾರ ಬಂಧು ಬಗಳವನ್ನು ಅಗಲಿದ್ದಾರೆ.

ರಾಜ್ಯದ ವಕ್ಫ್ ಬೋರ್ಡ್ ಅಧ್ಯಕ್ಷ ಡಾ.ಮುಹಮ್ಮದ್ ಯೂಸುಫ್ ಅವರ ನಿಧನದ ಸುದ್ದಿ ದುಃಖಕರ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಬಂಧು ಬಳಗದವರೆಲ್ಲರಿಗೂ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಪ್ರಾರ್ಥಿಸಿದ್ದಾರೆ.

ಮಾಜಿ ಸಚಿವರಾದ ಆರ್.ರೋಷನ್ ಬೇಗ್, ಬಿ.ಝೆಡ್.ಝಮೀರ್ ಅಹ್ಮದ್ ಖಾನ್, ರಾಜ್ಯಸಭಾ ಸದಸ್ಯ ಡಾ.ಸೈಯ್ಯದ್ ನಾಸೀರ್ ಹುಸೇನ್, ವಕ್ಫ್ ಬೋರ್ಡ್ ಸದಸ್ಯ ಮೌಲಾನ ಎನ್.ಕೆ.ಎಂ.ಶಾಫಿ ಸಅದಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಉಬೇದುಲ್ಲಾ ಶರೀಫ್, ವಕ್ಫ್ ಬೋರ್ಡ್‍ನ ಸಿಇಒ ಇಸ್ಲಾಹುದ್ದೀನ್ ಗದ್ಯಾಲ್ ಸೇರಿದಂತೆ ಇನ್ನಿತರ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರು, ಸಮಾಜದ ಮುಖಂಡರೂ ಆಗಿದ್ದ ಡಾ.ಮುಹಮ್ಮದ್ ಯೂಸುಫ್ ವಿಧಿವಶರಾದ ಸುದ್ದಿ ತಿಳಿದು ತೀವ್ರ ದುಃಖವಾಯಿತು. ದೇವರು ಅವರಿಗೆ ಸದ್ಗತಿಯನ್ನು ಕರುಣಿಸಲಿ, ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿ ದಯಪಾಲಿಸಲಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಾರ್ಥಿಸಿದ್ದಾರೆ.
 
ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರು, ಸಮುದಾಯದ ಹಿರಿಯ ಮುಖಂಡರಾದ ಡಾ.ಮುಹಮ್ಮದ್ ಯೂಸುಫ್ ಅವರ ನಿಧನದ ಸುದ್ದಿ ನೋವುಂಟು ಮಾಡಿದೆ. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಕುಟುಂಬ ವರ್ಗ ಮತ್ತು ಸ್ನೇಹ ವರ್ಗಕ್ಕೆ ಅವರ ಬದುಕು ಮತ್ತು ಸಾಧನೆಯ ನೆನಪುಗಳು ನೀಡಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಾರ್ಥಿಸಿದ್ದಾರೆ.
 
ವಕ್ಫ್ ಬೋರ್ಡ್‍ನಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ನೂರಾರು ಮಂದಿಗೆ ಸರಕಾರಿ ಉದ್ಯೋಗ ಕಲ್ಪಿಸಿದರು. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ವಕ್ಫ್ ಮಂಡಳಿಯಲ್ಲಿ ನೋಂದಣಿಯಾಗಿರುವ ಮಸೀದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇಮಾಮ್ ಹಾಗೂ ಮುಅದ್ಸಿನ್‍ರಿಗೆ ಗೌರವ ಧನ ನೀಡುವ ಯೋಜನೆಯನ್ನು ಮುಹಮ್ಮದ್ ಯೂಸುಫ್ ಅಧಿಕಾರಾವಧಿಯಲ್ಲಿ ಜಾರಿ ಬಂದಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News