ರಕ್ಷಣಾ ತಂಡಗಳಿಗೆ ಮೊದಲೇ ಧಾವಿಸಿ ರಕ್ಷಣೆ, ಆಹಾರದ ವ್ಯವಸ್ಥೆ, ರಕ್ತದಾನಕ್ಕೆ ಸಾಲುಗಟ್ಟಿ ನಿಂತ ಯುವಕರು

Update: 2020-08-08 08:40 GMT

ಕೋಯಿಕ್ಕೋಡ್: ಕೇರಳದ ಕೋಯಿಕ್ಕೋಡ್ ನಲ್ಲಿ ಶುಕ್ರವಾರ ರಾತ್ರಿ ದುಬೈಯಿಂದ ಭಾರತೀಯರನ್ನು ಹೊತ್ತು ಮರಳುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ರನ್-ವೇಯಲ್ಲಿ ಇಳಿಯುತ್ತಿದ್ದಾಗ ಜಾರಿ ಇಬ್ಭಾಗವಾದ ಘಟನೆಯಲ್ಲಿ 18 ಮಂದಿ ಮೃತಪಟ್ಟಿದ್ದಾರೆ. ಘಟನೆ ನಡೆದ ತಕ್ಷಣ ವಿಮಾನದಲ್ಲಿ ಸಿಲುಕಿರುವ ಪ್ರಯಾಣಿಕರನ್ನು ರಕ್ಷಿಸಲು ಭಾರೀ ಮಳೆಯನ್ನು ಲೆಕ್ಕಿಸದೆ ಹಲವಾರು ಸ್ಥಳೀಯರು ರಕ್ಷಣಾ ತಂಡಗಳಿಗಿಂತಲೂ ಮುನ್ನ ಧಾವಿಸಿದ್ದು, ಹಲವು ಪ್ರಯಾಣಿಕರನ್ನು ಪಾರು ಮಾಡಿದ್ದಾರೆ.

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಹಾಗೂ ತೀವ್ರ ಗಾಯಗೊಂಡಿದ್ದ ಪ್ರಯಾಣಿಕರನ್ನು ಆಸ್ಪತ್ರೆಗೆ ಟ್ಯಾಕ್ಸಿಗಳಲ್ಲಿ ಹಾಗೂ ಆಂಬ್ಯುಲೆನ್ಸ್‍ ಗಳಲ್ಲಿ ಸಾಗಿಸಿದ್ದರು. ಈ ರೀತಿ ತಕ್ಷಣ ಕಾರ್ಯಪ್ರವೃತ್ತರಾಗುವ ಮೂಲಕ ಸ್ಥಳೀಯ ಜನರು ಹಲವರ ಪ್ರಾಣವುಳಿಸಿದ್ದಾರೆ.

ವಿಮಾನ ನಿಲ್ದಾಣದ ಎಲ್ಲಾ ಪ್ರಿಪೇಯ್ಡ್ ಟ್ಯಾಕ್ಸಿಗಳನ್ನೂ ಮತ್ತೆ  ಕರೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಏರ್ಪಾಟು ಮಾಡಲಾಗಿತ್ತು.

ಅತ್ತ ವಿಮಾನ ದುರಂತದ ಬೆನ್ನಲ್ಲೇ ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಬಂದಿಳಿಯಬೇಕಿದ್ದ ಎಲ್ಲಾ ವಿಮಾನಗಳನ್ನು ಕಣ್ಣೂರಿಗೆ ತೆರಳುವಂತೆ ಮಾಡಲಾಗಿತ್ತು. ಇದರಿಂದಾಗಿ ಕೋಯಿಕ್ಕೋಡ್ ಬದಲು ಕಣ್ಣೂರಿನಲ್ಲಿ ಇಳಿಯುವ ಪ್ರಯಾಣಿಕರಿಗಾಗಿ ರಾತ್ರೋರಾತ್ರಿ ಹಲವಾರು ಯುವಜನರು ಸಂಘಟಿತರಾಗಿ ಆಹಾರ ಸಿದ್ಧಪಡಿಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಅಪಘಾತದ ಹಲವು ಗಾಯಾಳುಗಳಿಗೆ ರಕ್ತದ ಅಗತ್ಯವೂ ಇರುವುದರಿಂದ ಹಲವಾರು ಯುವಕರು ರಕ್ತದಾನ ಮಾಡಲು ಬ್ಲಡ್ ಬ್ಯಾಂಕ್ ಎದುರು ಸಾಲುಗಟ್ಟಿ ನಿಂತಿರುವ ಚಿತ್ರಗಳೂ ವೈರಲ್ ಆಗಿದ್ದು, ಕೇರಳಿಗರ ಹೃದಯವೈಶಾಲ್ಯ ಮತ್ತು ಸಮಯಪ್ರಜ್ಞೆಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News