ಇಂದು ಎ.ಕೆ.ಸುಬ್ಬಯ್ಯನವರ ಜನ್ಮದಿನ

Update: 2020-08-08 19:30 GMT

ಎ.ಕೆ. ಸುಬ್ಬಯ್ಯನವರ ಸಾಧನೆ ಅಪಾರವಾದದ್ದು. ಯಾವುದೇ ರೀತಿಯ ಪ್ರಭಾವಿ ಹಿನ್ನೆಲೆ ಇಲ್ಲದೆ ಬಂದಂತಹ ಎ.ಕೆ. ಸುಬ್ಬಯ್ಯನವರಿಗೆ, ಜಾತಿಯ ಬಲವಾಗಲಿ, ರಾಜಕೀಯ ಬಲವಾಗಲಿ ಅಥವಾ ಆರ್ಥಿಕ ಬಲವಾಗಲಿ ಇರಲಿಲ್ಲ. ಅವರಲ್ಲಿ ಇದ್ದದ್ದು ಅಪಾರವಾದ ಬುದ್ಧಿಶಕ್ತಿ ಮತ್ತು ಪ್ರಾಮಾಣಿಕ ಚಿಂತನೆ ಹಾಗೂ ಅತಿಯಾದ ಧೈರ್ಯ. ತನಗೆ ಸರಿ ಕಂಡದ್ದನ್ನು ಯಾವುದೇ ಸಮಸ್ಯೆ ಎದುರಾದರೂ, ಯಾರಿಗೂ ಭಯಪಡದೆ ಅದನ್ನು ಅಭಿವ್ಯಕ್ತಗೊಳಿಸುತ್ತಿದ್ದರು. ಹಾಗಾಗಿ ಅವರು ಎಷ್ಟು ಜನಪ್ರಿಯರಾಗಿದ್ದರೋ, ಅಷ್ಟೇ ಪ್ರಮಾಣದ ಶತ್ರುಗಳನ್ನು ಕೂಡ ಪಡೆದಿದ್ದರು. ಆದರೆ ಶತ್ರುಗಳ ಸಂಖ್ಯೆ ಜಾಸ್ತಿಯಾಗುತ್ತದೆ ಎಂಬ ಭಯದಿಂದ ಹೇಳಬೇಕಾದದ್ದನ್ನು ಹೇಳದೇ ಇರುತ್ತಿರಲಿಲ್ಲ. ಯಾವುದೇ ಅಳುಕು ಇಲ್ಲದೆ ವಿಚಾರವನ್ನು ಮಂಡಿಸುತ್ತಿದ್ದರು.


ಇಂದು ಎ.ಕೆ.ಸುಬ್ಬಯ್ಯನವರ 86ನೇ ಜನ್ಮ ದಿನಾಚರಣೆ. ಕಳೆದ ವರ್ಷದ ಅವರ 85ನೇ ಜನ್ಮ ದಿನಾಚರಣೆಯಂದು ಶುಭ ಹಾರೈಸುವ ಸಂದರ್ಭದಲ್ಲಿ ಅಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಬೇಕಾಗಿದ್ದ ಅವರು, ಒಂದು ದಿನ ಮುಂದೂಡಿದ್ದರು. ಯಾವುದೇ ನೋವು ಇದ್ದರೂ ಅದನ್ನು ತೋರಿಸಿಕೊಳ್ಳದೆ ಸಹಜವಾಗಿಯೇ ಇರುತ್ತಿದ್ದ ಎ.ಕೆ.ಸುಬ್ಬಯ್ಯ, ನಗುವಿನೊಂದಿಗೆ ಶುಭಾಶಯವನ್ನು ಸ್ವೀಕರಿಸಿದ್ದರು. ಆಗಸ್ಟ್ 10ರಂದು ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಅವರ ಕೊನೆಯ ದಿನಗಳು ಹತ್ತಿರವಾಗಿವೆ ಎಂಬ ವಿಚಾರ ಮನದಟ್ಟಾಗಿತ್ತು. ತಾನು ತನ್ನ ಪಯಣದ ರಸ್ತೆಯ ಕೊನೆಯಲ್ಲಿದ್ದೇನೆ ಎಂದು ಹೇಳಿದ್ದರು. ಅದರಂತೆ ಆಸ್ಪತ್ರೆಗೆ ದಾಖಲಾದ ಅವರು ಮತ್ತೆ ಹಿಂದಿರುಗಲಿಲ್ಲ. ಆಗಸ್ಟ್ 27ರಂದು ಅವರು ಇಹಲೋಕವನ್ನು ತ್ಯಜಿಸಿದ್ದರು.

ನಮ್ಮಂದಿಗೆ ಇಂದು ಇರಬೇಕಾಗಿದ್ದ ಕರ್ನಾಟಕದ ಪ್ರಮುಖ ಹೋರಾಟಗಾರರೊಬ್ಬರು ತನ್ನ ಜೀವನದುದ್ದಕ್ಕೂ ಹೋರಾಟವನ್ನೇ ಮಾಡಿಕೊಂಡು ಅಗಲಿದ್ದಾರೆ. ಹೋರಾಟದೊಂದಿಗೇ ಬದುಕಬೇಕು ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಹೋರಾಟವಿಲ್ಲದೆ ಯಾವುದನ್ನೂ ಸಾಧಿಸಲು ಸಾಧ್ಯವಿಲ್ಲ. ಜೀವನದುದ್ದಕ್ಕೂ ಹೋರಾಟವನ್ನು ಮಾಡಿಕೊಂಡೇ ಬದುಕಬೇಕು ಎನ್ನುತ್ತಿದ್ದ ಅವರು, ಆರೋಗ್ಯಕ್ಕಾಗಿಯೂ ಕೊನೆಯ ದಿನಗಳಲ್ಲಿ ಹೋರಾಟವನ್ನು ಮಾಡಿದ್ದರು. ಹೋರಾಟ ಮತ್ತು ಚಳವಳಿ ಅವರಿಗೆ ಅತ್ಯಂತ ಪ್ರೀತಿದಾಯಕವಾದ ವಿಚಾರವಾಗಿತ್ತು.

ಜನಶಕ್ತಿಯ ಮುಂದೆ ಯಾವ ಶಕ್ತಿಯೂ ಇಲ್ಲ ಎಂದು ಹೇಳುತ್ತಿದ್ದ ಸುಬ್ಬಯ್ಯನವರಿಗೆ, ಹೋರಾಟದಲ್ಲಿ ಬಹಳಷ್ಟು ವಿಶ್ವಾಸವಿತ್ತು. ಸರಕಾರವನ್ನು ಬದಲಿಸುವ, ಸರಿದಾರಿಗೆ ತರುವ ಶಕ್ತಿ ಜನಶಕ್ತಿಗೆ ಇದೆ ಎಂಬ ಅಪಾರ ವಿಶ್ವಾಸವಿತ್ತು. ತನ್ನ ಬಾಲ್ಯದಿಂದಲೂ ಹೋರಾಟದ ಹಾದಿಯಲ್ಲೇ ಬಂದು, ತನ್ನ ಎಲ್ಲಾ ಸಾಧನೆಯನ್ನು ಹೋರಾಟದ ಮೂಲಕವೇ ಸಾಧಿಸಿದ್ದ ಎ.ಕೆ.ಸುಬ್ಬಯ್ಯನವರು ಸಹಜವಾಗಿಯೇ ಹೋರಾಟದಲ್ಲಿ ವಿಶ್ವಾಸವನ್ನು ಹೊಂದಿದ್ದರು ಎಂದರೆ ತಪ್ಪಾಗಲಾರದು. ಪ್ರಜಾಪ್ರಭುತ್ವದ ಬಗ್ಗೆ ವಿಶೇಷ ಗೌರವ ಹೊಂದಿದ್ದ ಅವರು ‘‘ಪ್ರಜೆಗಳೇ ಪ್ರಭುಗಳು, ಆದರೆ ಇಂದು ಪರಿಸ್ಥಿತಿ ತಿರುಗು ಮುರುಗಾಗಿದ್ದು ಇದು ಪ್ರಜಾಪ್ರಭುತ್ವಕ್ಕೆ ಆರೋಗ್ಯಕರವಾದುದಲ್ಲ’’ ಎನ್ನುತ್ತಿದ್ದರು.

ಎ.ಕೆ.ಸುಬ್ಬಯ್ಯನವರ ಸಾಧನೆ ಅಪಾರವಾದದ್ದು. ಯಾವುದೇ ರೀತಿಯ ಪ್ರಭಾವಿ ಹಿನ್ನೆಲೆ ಇಲ್ಲದೆ ಬಂದಂತಹ ಎ.ಕೆ. ಸುಬ್ಬಯ್ಯನವರಿಗೆ, ಜಾತಿಯ ಬಲವಾಗಲಿ, ರಾಜಕೀಯ ಬಲವಾಗಲಿ ಅಥವಾ ಆರ್ಥಿಕ ಬಲವಾಗಲಿ ಇರಲಿಲ್ಲ. ಅವರಲ್ಲಿ ಇದ್ದದ್ದು ಅಪಾರವಾದ ಬುದ್ಧಿಶಕ್ತಿ ಮತ್ತು ಪ್ರಾಮಾಣಿಕ ಚಿಂತನೆ ಹಾಗೂ ಅತಿಯಾದ ಧೈರ್ಯ. ತನಗೆ ಸರಿ ಕಂಡದ್ದನ್ನು ಯಾವುದೇ ಸಮಸ್ಯೆ ಎದುರಾದರೂ, ಯಾರಿಗೂ ಭಯಪಡದೆ ಅದನ್ನು ಅಭಿವ್ಯಕ್ತಗೊಳಿಸುತ್ತಿದ್ದರು. ಹಾಗಾಗಿ ಅವರು ಎಷ್ಟು ಜನಪ್ರಿಯರಾಗಿದ್ದರೋ, ಅಷ್ಟೇ ಪ್ರಮಾಣದ ಶತ್ರುಗಳನ್ನು ಕೂಡ ಪಡೆದಿದ್ದರು. ಆದರೆ ಶತ್ರುಗಳ ಸಂಖ್ಯೆ ಜಾಸ್ತಿಯಾಗುತ್ತದೆ ಎಂಬ ಭಯದಿಂದ ಹೇಳಬೇಕಾದದ್ದನ್ನು ಹೇಳದೇ ಇರುತ್ತಿರಲಿಲ್ಲ. ಯಾವುದೇ ಅಳುಕು ಇಲ್ಲದೆ ವಿಚಾರವನ್ನು ಮಂಡಿಸುತ್ತಿದ್ದರು. ಅವರು ಜ್ಞಾನ ಭಂಡಾರದಂತೆ ಇದ್ದು, ಯಾವುದೇ ಸಮಸ್ಯೆಗೆ ಅವರಲ್ಲಿ ಪರಿಹಾರವಿತ್ತು.

ದುರದೃಷ್ಟವೆಂದರೆ ಎ.ಕೆ.ಸುಬ್ಬಯ್ಯನವರು ಸಂಘ ಪರಿವಾರ ಹಾಗೂ ಜನಸಂಘ ಮತ್ತು ಬಿಜೆಪಿಯ ಸಖ್ಯದಲ್ಲಿದ್ದ ವೇಳೆಯಲ್ಲಿ ಅವರು ಹೇಳುತ್ತಿದ್ದ ಪ್ರತಿಯೊಂದು ವಾಕ್ಯವೂ ಸಹ್ಯವಾಗಿತ್ತು. ಅಪ್ರಿಯವಾದುದನ್ನು ಹೇಳಿದರೂ ಕೂಡ ಆಗ ಸಹಿಸಿಕೊಳ್ಳುತ್ತಿದ್ದರು. ಆದರೆ ಯಾವಾಗ ಅವರು ಸಂಘ ಪರಿವಾರದ ನಂಟಿನಿಂದ ಹೊರ ಬಂದರೋ ಅಲ್ಲಿಗೆ ಅವರು ದೇಶದ ಶತ್ರು ಎಂದು ಬಿಂಬಿಸಲ್ಪಟ್ಟರು. ಪ್ರತಿಯೊಂದು ಹಂತದಲ್ಲಿಯೂ ಅವರನ್ನು ಕಡೆಗಣಿಸುವ ಹಾಗೂ ಅಪಮಾನಿಸುವ ಕಾರ್ಯಗಳು ವ್ಯವಸ್ಥಿತವಾಗಿ ಸಂಘ ಪರಿವಾರದ ಮೂಲಕ ಪರೋಕ್ಷವಾಗಿ ಮತ್ತು ನೇರವಾಗಿ ನಡೆಯುತ್ತಾ ಬಂದಿತ್ತು.

ಆದರೆ ಈ ಯಾವ ವಿಚಾರಕ್ಕೂ ಎ.ಕೆ.ಸುಬ್ಬಯ್ಯ ಎಂದೂ ಧೃತಿಗೆಟ್ಟಿರಲಿಲ್ಲ. ತನ್ನ ಬಗ್ಗೆ ಮತ್ತು ತನ್ನ ಶಕ್ತಿಯ ಬಗ್ಗೆ ಅಪಾರವಾದ ವಿಶ್ವಾಸವಿದ್ದ ಸುಬ್ಬಯ್ಯನವರಿಗೆ ಸತ್ಯದ ಮುಂದೆ ಯಾವುದೂ ಜಯಿಸಲು ಸಾಧ್ಯವಿಲ್ಲ ಎಂಬ ಅದಮ್ಯ ವಿಶ್ವಾಸವಿತ್ತು. ಹಾಗಾಗಿ ಎಲ್ಲರನ್ನೂ, ಎಲ್ಲವನ್ನೂ ಸದಾ ಕಾಲ ಎದುರಿಸುತ್ತಾ ಬಂದರು. ಕಿಂಚಿತ್ತೂ ಭಯಪಡಲಿಲ್ಲ. ದೈತ್ಯ ಶಕ್ತಿಗಳನ್ನು ಎದುರು ಹಾಕಿಕೊಂಡರು.

1985ರಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರನ್ನು ಇಡೀ ದೇಶ ಮೌಲ್ಯಾಧಾರಿತ ರಾಜಕಾರಣಿ ಎಂದು ಕೊಂಡಾಡುತ್ತಿತ್ತು. ಆದರೆ ರಾಮಕೃಷ್ಣ ಹೆಗಡೆಯವರ ಮೌಲ್ಯದ ಪರದೆಯನ್ನು ಸರಿಸುವ ಕಾರ್ಯ ವನ್ನು ಎ.ಕೆ.ಸುಬ್ಬಯ್ಯ ಮಾಡಿದ್ದರು. ಇದರಿಂದಾಗಿ ಸುಬ್ಬಯ್ಯನವರು ಸಾಕಷ್ಟು ಕಷ್ಟ ನಷ್ಟಗಳನ್ನು ವೈಯಕ್ತಿಕವಾಗಿ ಅನುಭವಿಸಬೇಕಾಗಿ ಬಂದಿತ್ತು. ಅದೇ ವೇಳೆಯಲ್ಲಿ ಅವರು ಡಾ. ರಾಜ್‌ಕುಮಾರ್ ವಿರುದ್ಧವೂ ಸಮರ ಸಾರಿದ್ದರು. ಬಿಜೆಪಿಯ ಸಖ್ಯದಿಂದ ಹೊರ ಬಂದಿದ್ದರು. ಮೂರೂ ಶಕ್ತಿಗಳು ಒಟ್ಟುಗೂಡಿ ಸುಬ್ಬಯ್ಯನವರನ್ನು ಮೆಟ್ಟಲು ಪ್ರಯತ್ನಿಸಿತ್ತು. ಸುಬ್ಬಯ್ಯ ಈ ಶಕ್ತಿಗಳ ವಿರುದ್ಧ ತಲೆ ಎತ್ತಿ ನಿಂತುಕೊಂಡಿದ್ದರು. ಇದು ಅವರ ಸಾಧನೆಯಾಗಿತ್ತು. ಸಂಘ ಪರಿವಾರದ ವಿರುದ್ಧ ಧ್ವನಿ ಎತ್ತುವವರ ಧ್ವನಿ ಅಡಗಿಸುವ ಕೆಲಸ ಅದೃಶ್ಯವಾಗಿ ಆಗುತ್ತಲೇ ಇರುತ್ತದೆ. ಆದರೆ ಎ.ಕೆ. ಸುಬ್ಬಯ್ಯ ಇದಕ್ಕೆ ಅಪವಾದವಾಗಿದ್ದರು. ಅವರ ಧ್ವನಿ ಅಡಗಿಸುವ ಎಷ್ಟು ಪ್ರಯತ್ನವಾಯಿತೋ, ಅಷ್ಟು ಅವರ ಧ್ವನಿ ಗಟ್ಟಿಯಾಗುತ್ತಲೇ ಬಂದಿತ್ತು.

ತಾನು ಸಂಘ ಪರಿವಾರವನ್ನು ಬೆಳೆಸುವುದರ ಮೂಲಕ ಅಪರಾಧ ಎಸಗಿದ್ದೇನೆ. ಅದನ್ನು ಮಟ್ಟ ಹಾಕುವವರೆಗೂ ವಿಶ್ರಮಿಸುವುದಿಲ್ಲ ಎಂದು ಹೇಳಿಕೊಂಡೇ ಅವಕಾಶ ಸಿಕ್ಕಾಗಲೆಲ್ಲಾ ಸಂಘ ಪರಿವಾರವನ್ನು ಬೆತ್ತಲು ಮಾಡುವ ಕಾರ್ಯದಲ್ಲಿ ಸುಬ್ಬಯ್ಯನವರು ಕೊನೆಯವರೆಗೂ ತೊಡಗಿಕೊಂಡಿದ್ದರು. ಇದಕ್ಕೆ ಪ್ರತೀಕಾರವನ್ನು ಸಂಘ ಪರಿವಾರ ಮಾಡುತ್ತಾ ಬಂದಿತ್ತು. ಸಾವನ್ನು ಸಂಭ್ರಮಿಸುವ ಹಾಗೂ ಸತ್ತ ನಂತರವೂ ಹಗೆತನವನ್ನು ಪ್ರದರ್ಶಿಸುವ ಸಂಘಟನೆಯೊಂದು ಇದೆ ಎಂದಾದರೆ ಅದು ಸಂಘ ಪರಿವಾರ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಎ.ಕೆ.ಸುಬ್ಬಯ್ಯನವರು ನಿಧನ ಹೊಂದಿದ ವೇಳೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸುವ ಕಾರ್ಯ ನಡೆದಿತ್ತು. ಇದನ್ನು ಬುದ್ಧಿ ಇಲ್ಲದೇ ಇರುವಂತಹ ವ್ಯಕ್ತಿಗಳು ಮಾಡಿರಬಹುದು ಎಂದು ಕ್ಷಮಿಸಬಹುದು. ಆದರೆ ಇದಕ್ಕೂ ಮಿಗಿಲಾಗಿ ಹಲವು ನಿದರ್ಶನಗಳು ಹಗೆತನ ಪ್ರದರ್ಶಿಸಿದ್ದಕ್ಕೆ ಸಹ ಇವೆ.

1979ರಲ್ಲಿ ಎ.ಕೆ.ಸುಬ್ಬಯ್ಯ ಕರ್ನಾಟಕ ರಾಜ್ಯದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿದ್ದಂತಹ ವ್ಯಕ್ತಿಯಾಗಿದ್ದರು. ಸುಮಾರು 30 ತಿಂಗಳುಗಳ ಕಾಲ ಅವರು ವಿರೋಧ ಪಕ್ಷದ ನಾಯಕರಾಗಿದ್ದರು. ಆ ವೇಳೆಯಲ್ಲಿ ಅವರು ಜನಸಂಘದಲ್ಲಿ ಇದ್ದರು. ಅದು ಜನಸಂಘ ಮತ್ತು ಜನತಾಪಕ್ಷದ ಉದಯದ ಕಾಲಘಟ್ಟವಾಗಿತ್ತು. 1977ರಲ್ಲಿ ತುರ್ತುಪರಿಸ್ಥಿತಿಯ ನಂತರ ನಡೆದ ಚುನಾವಣೆಯಲ್ಲಿ ಜನಸಂಘವೂ ಸೇರಿ ಎಲ್ಲಾ ವಿರೋಧ ಪಕ್ಷಗಳು ಒಟ್ಟಾಗಿ ಮಹಾಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸಿತ್ತು. ಬಹುತೇಕ ವಿರೋಧ ಪಕ್ಷಗಳು ಜಯಪ್ರಕಾಶ್ ನಾರಾಯಣರವರ ನಾಯಕತ್ವದ ಅಡಿಯಲ್ಲಿ ಜನತಾ ಪಕ್ಷದಲ್ಲಿ ವಿಲೀನವಾಗಿತ್ತು. ಮತ್ತೆ ಪಕ್ಷ ಒಡೆದ ಸಂದರ್ಭದಲ್ಲಿ ಭಾರತೀಯ ಜನತಾಪಕ್ಷ ಉದಯಿಸಿತ್ತು. ಆಗಲೂ ಎ.ಕೆ. ಸುಬ್ಬಯ್ಯನವರೇ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾಗಿದ್ದರು.

2019ರಲ್ಲಿ ಎ.ಕೆ. ಸುಬ್ಬಯ್ಯನವರು ನಿಧನ ಹೊಂದಿದ ವೇಳೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಯ ಸರಕಾರವೇ ಅಧಿಕಾರದಲ್ಲಿ ಇತ್ತು. ಯಾವುದೇ ಸರಕಾರ ಅಧಿಕಾರದಲ್ಲಿದ್ದರೂ ಒಬ್ಬ ವಿರೋಧ ಪಕ್ಷದ ನಾಯಕನಾಗಿದ್ದ ವ್ಯಕ್ತಿ ಅಗಲಿದರೆ ಅವರ ಅಂತ್ಯ ಸಂಸ್ಕಾರವನ್ನು ಸರಕಾರಿ ಗೌರವದೊಂದಿಗೆ ನಡೆಸಬೇಕಾಗಿತ್ತು. ಆದರೆ ರಾಜ್ಯ ಸರಕಾರದಿಂದ ಸರಕಾರಿ ಗೌರವ ಸಿಗಲಿಲ್ಲ. ಆದರೆ ಸುಬ್ಬಯ್ಯನವರಿಂದಾಗಿ ಮಂತ್ರಿ ಸ್ಥಾನ ಕಳೆದುಕೊಂಡಿದ್ದ ಸಿ.ಎಂ. ಇಬ್ರಾಹೀಂ, ರಮೇಶ್‌ಕುಮಾರ್, ಅಡಗೂರು ವಿಶ್ವನಾಥ್ ಮುಂತಾದವರು ಭಾಗವಹಿಸಿದ್ದರು.

ಆಕಾಶವಾಣಿಯು ರಾಜ್ಯದ ಮತ್ತು ರಾಷ್ಟ್ರದ ಹಲವಾರು ರಾಜಕೀಯ ನಾಯಕರ ಸಾಧನೆಗಳ ಬಗ್ಗೆ ನುರಿತ ಸಂಪನ್ಮೂಲ ವ್ಯಕ್ತಿಗಳ ಮೂಲಕ ಸಂದರ್ಶನವನ್ನು ನಡೆಸಿ, ಅದನ್ನು ತಮ್ಮ ಪತ್ರಾಗಾರ (ಆರ್ಕೈವ್ಸ್)ದಲ್ಲಿ ಶೇಖರಿಸಿ ಇಡುತ್ತದೆ. ಅದರಂತೆ ಮಡಿಕೇರಿ ಆಕಾಶವಾಣಿ ಕೇಂದ್ರದವರು ಎ.ಕೆ. ಸುಬ್ಬಯ್ಯನವರ ಜೀವನ ಚರಿತ್ರೆ ಮತ್ತು ಸಾಧನೆಗಳ ಬಗ್ಗೆ ಸುಮಾರು 8 ಗಂಟೆಗಳ ಸಂದರ್ಶನವನ್ನು ನಡೆಸಿ ಇಟ್ಟಿದ್ದರು. ಈ ಸಂದರ್ಶನವನ್ನು ನಾನೂ ಸೇರಿದಂತೆ, ಚೇರಂಡ ನಂದಾಸುಬ್ಬಯ್ಯ ಹಾಗೂ ವಕೀಲರಾದ ಕೆ.ಆರ್.ವಿದ್ಯಾಧರ ಅವರು ನಡೆಸಿದ್ದೆವು. ಇದರ ಜೊತೆಯಲ್ಲಿ ಕೊಡವ ಭಾಷೆಯಲ್ಲಿ ಆಕಾಶವಾಣಿಯ ಉದ್ಘೋಷಕರಾಗಿದ್ದ ಶ್ರೀಮತಿ ಶಾರದಾ ನಂಜಪ್ಪನವರು ಸಂದರ್ಶನವನ್ನು ನಡೆಸಿದ್ದರು. ಇವೆಲ್ಲವೂ ಅವರ ಜೀವಿತಾವಧಿಯ ನಂತರ ಪ್ರಸಾರ ಮಾಡಲಾಗುವುದು ಎಂಬುದಾಗಿ ಆಕಾಶವಾಣಿಯ ಅಂದಿನ ಸಹಾಯಕ ನಿರ್ದೇಶಕಿಯಾಗಿದ್ದ ಶ್ರೀಮತಿ ಇಂದಿರಾ ಗಜರಾಜ್‌ರವರು ತಿಳಿಸಿದ್ದರು.

ಸುಬ್ಬಯ್ಯನವರ ನಿಧನದ ನಂತರ ಆಕಾಶವಾಣಿಯಲ್ಲಿ ಪ್ರಕಟವಾಗಬೇಕಾಗಿದ್ದ ಈ ಸಂದರ್ಶನ ಪ್ರಸಾರವಾಗಲೇ ಇಲ್ಲ. ಆಕಾಶವಾಣಿಯವರು ಮಾಡಿಕೊಂಡ ಒಪ್ಪಂದದಂತೆ ಅವರು ನಿಧನಹೊಂದಿದ ದಿನದಂದೇ ಅದು ಆಕಾಶವಾಣಿಯಲ್ಲಿ ಪ್ರಸಾರವಾಗಬೇಕಾಗಿತ್ತು. ಈ ಬಗ್ಗೆ ಆಕಾಶವಾಣಿಯವರನ್ನು ಪ್ರಶ್ನಿಸಿದಾಗ ಸಬೂಬುಗಳನ್ನು ಹೇಳಿ ನುಣುಚಿಕೊಂಡರು. ಆ ನಂತರ ಮಡಿಕೇರಿ ಆಕಾಶವಾಣಿ ಕೇಂದ್ರದ ಸಹಾಯಕ ನಿರ್ದೇಶಕರಾಗಿದ್ದ ಡಾ. ವಿಜಯ್ ಅಂಗಡಿಯವರ ಬಳಿ ಪ್ರಶ್ನಿಸಿದಾಗ ಆ ಸಂದರ್ಶನದಲ್ಲಿ ಒಂದಷ್ಟು ವಿವಾದಾಸ್ಪದ ವಿಚಾರಗಳು ಇವೆ. ಹಾಗಾಗಿ ಅದನ್ನು ಪ್ರಸಾರ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಸಂದರ್ಶನದ ವೇಳೆಯಲ್ಲಿ ಸಂಪೂರ್ಣ ಸಂದರ್ಶನವನ್ನು ಆಲಿಸಿದ್ದ ಸಹಾಯಕಿ ನಿರ್ದೇಶಕಿಯವರು ಅದನ್ನು ಅನುಮೋದಿಸಿ ತಮ್ಮ ಪತ್ರಾಗಾರದಲ್ಲಿ ಶೇಖರಿಸಿ ಇಟ್ಟಿದ್ದು, ಅವರ ನಂತರ ಅದು ವಿವಾದಾಸ್ಪದ ವಿಚಾರವಾಗಿದ್ದು ವಿವಾದವಲ್ಲವೇ?.

ನಾವು ಸುಬ್ಬಯ್ಯನವರ ಕೊರತೆಯನ್ನು ಈಗ ಕಾಣುತ್ತಿದ್ದೇವೆ. ಅವರ ಅಗತ್ಯತೆ ಹಿಂದೆಂದಿಗಿಂತಲೂ ಈಗ ಬಹಳಷ್ಟು ಇತ್ತು. ಎನ್.ಆರ್.ಸಿ. ಮತ್ತು ಸಿ.ಎ.ಎ.ಯನ್ನು ಜಾರಿಗೊಳಿಸಲು ಹೊರಟಿರುವ ಕೇಂದ್ರ ಸರಕಾರದ ವಿರುದ್ಧ ಗಟ್ಟಿಯಾದ ಧ್ವನಿಯಿಂದ ತೂಕದ ವ್ಯಕ್ತಿಯೊಬ್ಬರು ಮಾತನಾಡಬಲ್ಲವರಾಗಿದ್ದರು ಎಂದರೆ ಅವರು ಎ.ಕೆ.ಸುಬ್ಬಯ್ಯ ಎನ್ನುವುದರಲ್ಲಿ ಸಂಶಯವಿಲ್ಲ. ಅವರು ತರ್ಕಬದ್ಧವಾಗಿ, ಕಾನೂನಾತ್ಮಕವಾಗಿ ಇವುಗಳನ್ನು ವಿರೋಧಿಸುತ್ತಿದ್ದರು. ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಸಂವಿಧಾನವು ಅಪಾಯದಲ್ಲಿದೆ ಎಂದು ಚಡಪಡಿಸುತ್ತಿದ್ದರು. ಸಂವಿಧಾನ ಉಳಿಸಿ ಹೋರಾಟದಲ್ಲಿ ಸಕ್ರಿಯರಾಗಿದ್ದರು.

ಕರ್ನಾಟಕದಲ್ಲಿ ಹೋರಾಟದ ಧ್ವನಿಗಳು ಒಂದರ ಹಿಂದೆ ಒಂದು ಕಣ್ಮರೆಯಾಗುತ್ತಿವೆೆ. ಗೌರಿ ಲಂಕೇಶರ ಹತ್ಯೆಯ ಮೂಲಕ ಏನನ್ನು ಸಾಧಿಸಬೇಕೆಂದು ಹೊರಟಿದ್ದರೋ ಅದನ್ನು ಸಾಧಿಸಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಹೋರಾಟದ ಕೊಂಡಿಗಳು ಕಳಚಿಕೊಂಡಿದ್ದವು. ರಾಜ್ಯದ ಭಿನ್ನ ಧ್ವನಿಯೊಂದು ಅಸ್ತಂಗತವಾಗಿತ್ತು. ಅವರ ಜೊತೆಯಲ್ಲಿ ಒಡನಾಡಿಗಳಾಗಿ ಹೋರಾಟಗಳನ್ನು ಮಾಡುತ್ತಿದ್ದವರ ಶಕ್ತಿ ಕುಂದಿತ್ತು. ಆ ನಂತರ ಎ.ಕೆ. ಸುಬ್ಬಯ್ಯ ವಯೋಸಹಜವಾಗಿ ಅಂತ್ಯವನ್ನು ಕಂಡಿದ್ದರು. ಮತ್ತೊಂದು ಪ್ರಬಲ ಧ್ವನಿ ಅಡಗಿತ್ತು. ತೀರಾ ಇತ್ತೀಚೆಗೆ ಮತ್ತೊಬ್ಬ ಅಪ್ರತಿಮ ವಾಗ್ಮಿ ಮತ್ತು ಹೋರಾಟಗಾರ ಮಹೇಂದ್ರ ಕುಮಾರ್‌ರವರ ಅಕಾಲಿಕ ಮರಣ ಬಹುತೇಕ ಹೋರಾಟದ ಹಾದಿಯನ್ನು ಧೃತಿಗೆಡಿಸಿದೆ ಎನ್ನುವುದು ವಾಸ್ತವ.
ಸಿ.ಎ.ಎ., ಎನ್.ಆರ್.ಸಿ. ಹಾಗೂ ಎನ್.ಪಿ.ಆರ್. ವಿಚಾರದಲ್ಲಿ ಸಂಘ ಪರಿವಾರದ ಷಡ್ಯಂತ್ರಗಳು ಏನು ಎಂಬುದನ್ನು ಎಳೆಎಳೆಯಾಗಿ ಬಿಡಿಸಿ ಇಡಬಲ್ಲಂತಹ ವ್ಯಕ್ತಿಯಾಗಿದ್ದವರು ಎ.ಕೆ.ಸುಬ್ಬಯ್ಯ ಮತ್ತು ಮಹೇಂದ್ರ ಕುಮಾರ್. ಏಕೆಂದರೆ ಇವರಿಬ್ಬರೂ ಸಂಘ ಪರಿವಾರದ ಗರಡಿಯಿಂದ ಹೊರ ಬಂದಂತಹ ವ್ಯಕ್ತಿಯಾಗಿದ್ದರು. ಇವರಿಗೆ ಸಂಘ ಪರಿವಾರದ ಪಟ್ಟುಗಳ ಪರಿಚಯವಿದ್ದ ಕಾರಣ ಸ್ಪಷ್ಟವಾಗಿ ವಿಚಾರಗಳನ್ನು ಮಂಡಿಸುವ ಶಕ್ತಿಯನ್ನು ಹೊಂದಿದ್ದವರಾಗಿದ್ದರು. ಅವರಿಗೆ ಅವರ ಜನ್ಮದಿನದ ಸಂದರ್ಭದಲ್ಲಿ ಶುಭ ಕೋರಲು ಅವರು ನಮ್ಮಂದಿಗೆ ಇಲ್ಲ. ಅವರ ಹಾದಿಯಲ್ಲಿ ಕ್ರಮಿಸುವುದೇ ಅವರಿಗೆ ಸಲ್ಲಿಸುವ ಗೌರವ.

Writer - ಬಿ. ಎನ್. ಮನು ಶೆಣೈ

contributor

Editor - ಬಿ. ಎನ್. ಮನು ಶೆಣೈ

contributor

Similar News