‘ಹಿಂದೂಗಳಿಗೆ ಅಸಮಾಧಾನ’ ಎಂಬ ಪೊಲೀಸ್ ಆದೇಶದ ರದ್ದತಿಗೆ ಹೈಕೋರ್ಟ್ ನಕಾರ; ಮಾಧ್ಯಮಗಳಿಗೆ ತರಾಟೆ

Update: 2020-08-09 16:05 GMT
ಫೈಲ್ ಚಿತ್ರ

ಹೊಸದಿಲ್ಲಿ,ಆ.9: ವಾಯುವ್ಯ ದಿಲ್ಲಿಯಲ್ಲಿ ಫೆಬ್ರವರಿಯಲ್ಲಿ ಸಂಭವಿಸಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧನಗಳನ್ನು ಮಾಡುವಾಗ ಎಚ್ಚರಿಕೆಯನ್ನು ವಹಿಸುವಂತೆ ಪೊಲೀಸ್ ಸಿಬ್ಬಂದಿಗೆ ಸೂಚಿಸಲು ‘ಹಿಂದು ಸಮುದಾಯದ ನಡುವೆ ಅಸಮಾಧಾನ ’ವನ್ನು ಉಲ್ಲೇಖಿಸಿದ್ದ ವಿಶೇಷ ಪೊಲೀಸ್ ಆಯುಕ್ತರ ಆದೇಶವನ್ನು ರದ್ದುಗೊಳಿಸಲು ದಿಲ್ಲಿ ಉಚ್ಚ ನ್ಯಾಯಾಲಯವು ನಿರಾಕರಿಸಿದೆ. ಆರೋಪಿಯ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಕೆಯಾದ ಬಳಿಕ ಆದೇಶವನ್ನು ಹೊರಡಿಸಿದ್ದರಿಂದ ಅದರಿಂದ ಯಾವುದೇ ಪೂರ್ವಾಗ್ರಹ ಉಂಟಾಗಿಲ್ಲ ಎಂದು ಅದು ಹೇಳಿದೆ.

ಸಾಹಿಲ್ ಫರ್ವೇಝ್ ಮತ್ತು ಮುಹಮ್ಮದ್ ಸಯೀದ್ ಸಲ್ಮಾನ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಾಲಯವು ಕೈಗೆತ್ತಿಕೊಂಡಿತ್ತು. ಅರ್ಜಿದಾರರ ತಂದೆ ಮತ್ತು ತಾಯಿ ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟಿದ್ದರು.

 ವಿಶೇಷ ಪೊಲೀಸ್ ಆಯುಕ್ತ ಪ್ರವೀರ ರಂಜನ್ ಅವರು ಜು.8ರಂದು ವಿವಾದಾತ್ಮಕ ಆದೇಶವನ್ನು ಹೊರಡಿಸುವ ಮೊದಲೇ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿದ್ದವು ಎಂದು ತನ್ನ ತೀರ್ಪಿನಲ್ಲಿ ತಿಳಿಸಿರುವ ಏಕಪೀಠದ ನ್ಯಾಯಾಧೀಶ ಸುರೇಶ ಕೈಟ್ ಅವರು,ಈವರೆಗೆ ಎಲ್ಲ ಪ್ರಕರಣಗಳಲ್ಲಿ 535 ಹಿಂದುಗಳು ಮತ್ತು 513 ಮುಸ್ಲಿಮರನ್ನು ಬಂಧಿಸಲಾಗಿದೆ ಎನ್ನುವುದನ್ನು ಬೆಟ್ಟು ಮಾಡಿದ್ದಾರೆ.

ಮಾಧ್ಯಮ ವರದಿಗಳು ರಂಜನ್ ಆದೇಶದ ಆಶಯಕ್ಕೆ ವಿರುದ್ಧವಾಗಿದ್ದವು. ಹೀಗಾಗಿ ಮಾಧ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿರುವುದರಿಂದ ಯಾರ ವಿರುದ್ಧವೂ ಪೂರ್ವಾಗ್ರಹವುಂಟಾಗದಂತೆ ಮತ್ತು ಸಮುದಾಯಗಳ ನಡುವೆ ದ್ವೇಷಕ್ಕೆ ಕಾರಣವಾಗದಂತೆ ಸತ್ಯಾಂಶಗಳನ್ನು ಖಚಿತಪಡಿಸಿಕೊಂಡ ಬಳಿಕವೇ ಸುದ್ದಿಗಳನ್ನು ಪ್ರಕಟಿಸಬೇಕು ಎಂದು ನ್ಯಾ.ಕೈಟ್ ಹೇಳಿದ್ದಾರೆ.

ಆದೇಶವು ಪೊಲೀಸ್ ಪಡೆಯಿಂದ ತಾರತಮ್ಯವನ್ನು ಬಿಂಬಿಸುತ್ತಿರುವುದರಿಂದ ಅದನ್ನು ರದ್ದುಗೊಳಿಸಬೇಕು ಎಂದು ಕೋರಿದ್ದ ಅರ್ಜಿದಾರರು,ಆದೇಶವು ಪೊಲೀಸ್ ಅಧಿಕಾರಿಗಳ ತನಿಖಾ ಕಾರ್ಯದಲ್ಲಿ ಅಕ್ರಮ ಹಸ್ತಕ್ಷೇಪವಾಗಿದೆ ಎಂದು ವಾದಿಸಿದ್ದರು.

ನ್ಯಾಯಾಲಯದ ತೀರ್ಪು ‘ಹಿಂದು ಅಸಮಾಧಾನ ’ ಕುರಿತು ಆದೇಶವು ‘ಕುಚೇಷ್ಟೆ’ಯದ್ದಾಗಿದೆ ಎಂಬ ತನ್ನ ಜು.31ರ ಅಭಿಪ್ರಾಯದಿಂದ ವಿಮುಖಗೊಂಡಂತಿದೆ. ಆಗ ನ್ಯಾಯಾಲಯವು ಇಂತಹ ಆದೇಶವನ್ನು ಹೊರಡಿಸಿದ ಕಾರಣವನ್ನು ವಿವರಿಸುವಂತೆ ರಂಜನ್‌ಗೆ ಸೂಚಿಸಿತ್ತು. ಇತರ ಪ್ರಕರಣಗಳಲ್ಲಿಯೂ ದಿಲ್ಲಿ ಪೊಲೀಸರು ಇಂತಹುದೇ ಆದೇಶವನ್ನು ಹೊರಡಿಸಿದ್ದಾರೆಯೇ ಎಂದೂ ನ್ಯಾ ಕೈಟ್ ಪ್ರಶ್ನಿಸಿದ್ದರು.

ಆರೋಪಿಗೆ ಜಾಮೀನು

ಪ್ರತ್ಯೇಕ ಪ್ರಕರಣದಲ್ಲಿ ದಿಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಘರ್ಷಣೆಗಳ ಸಂದರ್ಭದಲ್ಲಿ ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಆರೋಪಿಗೆ ಷರತ್ತುಬದ್ಧ ಜಾಮೀನನ್ನು ಮಂಜೂರು ಮಾಡಿದೆ. ಗಾಯಾಳುವೋರ್ವನ ದೂರಿನ ಮೇರೆಗೆ ಎ.20ರಂದು ಬಂಧಿಸಲ್ಪಟ್ಟಾಗಿನಿಂದ ಆರೋಪಿ ಮುಹಮ್ಮದ್ ಮೊಬಿನ್ ಅಲಿ ನ್ಯಾಯಾಂಗ ಬಂಧನದಲ್ಲಿದ್ದ.

ತನ್ನ ಮೊಬೈಲ್ ಫೋನ್‌ನಲ್ಲಿ ಆರೋಗ್ಯ ಸೇತು ಆ್ಯಪ್ ಅಳವಡಿಸಿಕೊಳ್ಳುವಂತೆ ನ್ಯಾಯಾಲಯವು ಅಲಿಗೆ ಆದೇಶಿಸಿದ್ದು,ಇದಕ್ಕೆ ಕಾರಣ ಮಾತ್ರ ಗೊತ್ತಾಗಿಲ್ಲ.

 ಅರ್ಜಿದಾರ (ಅಲಿ)ನು ದಂಗೆಕೋರ ಗುಂಪಿನ ಭಾಗವಾಗಿರಲಿಲ್ಲ ಎನ್ನುವುದು ಸಿಸಿಟಿವಿ ತುಣುಕುಗಳ ಪರಿಶೀಲನೆಯಿಂದ ಸ್ಪಷ್ಟವಾಗಿ ಕಂಡು ಬಂದಿದೆ. ಅಲಿ ಪರ ವಕೀಲರು ಮಂಡಿಸಿರುವ ವಾದದಂತೆ ಆತ ಮಸೀದಿಯಲ್ಲಿ ನಮಾಝ್ ಸಲ್ಲಿಸಿ ವಾಪಸಾಗುತ್ತಿದ್ದ ಎಂದು ಹೇಳಿದ ನ್ಯಾಯಾಲಯವು,ಅಲಿಯ ಪ್ರಕರಣವು ಸಹಆರೋಪಿಗಳಾದ ಮುಹಮ್ಮದ್ ಜಾವೇದ್ ಖಾನ್ ಮತ್ತು ಮುಹಮ್ಮದ್ ಅನಸ್ ಅವರ ಪ್ರಕರಣಕ್ಕಿಂತ ಭಿನ್ನವಾಗಿದೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News