ಬಿಲ್ ಕಟ್ಟಿಲ್ಲವೆಂದು ಎರಡು ದಿನಗಳಾದರೂ ಮೃತದೇಹ ನೀಡದ ಬೆಂಗಳೂರಿನ ಆಸ್ಪತ್ರೆ; ಆರೋಪ

Update: 2020-08-09 16:26 GMT

ಬೆಂಗಳೂರು, ಆ.9: ನಗರದಲ್ಲಿ ರವಿವಾರ ಒಂದೆ ದಿನ 1,948 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಸೋಂಕಿಗೆ 22 ಜನರು ಮೃತರಾಗಿದ್ದಾರೆ.

ನಗರದಲ್ಲಿ ಇಲ್ಲಿಯವರಗೆ ಒಟ್ಟು 74,185 ಮಂದಿಗೆ ಕೊರೋನ ಸೋಂಕಿತರು ಧೃಢಪಟ್ಟಿದ್ದು,  ಇಲ್ಲಿಯವರೆಗೆ ನಗರದಲ್ಲಿ 1,240 ಜನರು ಸೋಂಕಿಗೆ ಬಲಿಯಾಗಿದ್ದಾರೆ. 39,129 ಜನರು ಇಲ್ಲಿಯವರೆಗೆ ಗುಣಮುಖರಾಗಿ ಬಿಡುಗಡೆಯಾಗಿದ್ದರೆ, ರವಿವಾರ 1837 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 33815 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು 84,780 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ. ಅಲ್ಲದೆ ನಗರದಲ್ಲಿ 326 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶನಿವಾರದ ಬಿಬಿಎಂಪಿ ಕೋವಿಡ್ ವರದಿಯಲ್ಲಿ ನಗರದಲ್ಲಿ ಇದುವರೆಗೂ 28,042 ಕಂಟೈನ್ಮೆಂಟ್ ಝೋನ್‍ಗಳನ್ನು ಗುರುತಿಸಲಾಗಿದ್ದು, ಒಟ್ಟು ಸಕ್ರಿಯ 14,391 ಕಂಟೈನ್ಮೆಂಟ್‍ ಝೋನ್‍ಗಳಿವೆ. ಅಲ್ಲದೇ 13,651 ಕಂಟೈನ್ಮೆಂಟ್‍ ಝೋನ್‍ಗಳನ್ನು ತೆರವುಗೊಳಿಸಲಾಗಿದೆ.

ಬಿಲ್ ಕಟ್ಟಿಲ್ಲವೆಂದು ಮೃತದೇಹ ನೀಡದ ಆಸ್ಪತ್ರೆ

ಆಸ್ಪತ್ರೆಯ ಬಿಲ್ ಕಟ್ಟಿಲ್ಲವೆಂದು ಕೊರೋನ ಸೋಂಕಿತ ವ್ಯಕ್ತಿ ಮೃತಪಟ್ಟು ಎರಡು ದಿನಗಳಾಗಿದ್ದರೂ ಖಾಸಗಿ ಆಸ್ಪತ್ರೆಯ ಆಡಳಿತ ಮಂಡಳಿ ಸಂಬಂಧಿಕರಿಗೆ ಮೃತದೇಹ ಹಸ್ತಾಂತರಿಸದೇ ಇರುವ ಘಟನೆ ನಗರದಲ್ಲಿ ನಡೆದಿದ್ದು, ರವಿವಾರ ಬೆಳಕಿಗೆ ಬಂದಿದೆ.

ಜು.19ರಂದು ಕೊರೋನ ಸೋಂಕಿತ ವ್ಯಕ್ತಿ ಕುಮಾರಸ್ವಾಮಿ ಲೇಔಟ್‍ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಕಳೆದ ಇಪ್ಪತ್ತು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತ ಎರಡು ದಿನಗಳ ಹಿಂದೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆದರೆ ಆಸ್ಪತ್ರೆಯ ಆಡಳಿತ ಮಂಡಳಿ 9 ಲಕ್ಷ ರೂ.ಬಿಲ್ ಪಾವತಿಸಿ, ನಂತರ ಮೃತದೇಹ ಕೊಡುವುದಾಗಿ ತಿಳಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮನೆಗೆ ಕಬ್ಬಿಣ ಸಲಾಕೆ ಹಾಕಿದ ಬಿಬಿಎಂಪಿ

ಕೊರೋನ ಸೋಂದು ದೃಢಪಟ್ಟ ವ್ಯಕ್ತಿಯ ಮನೆಯ ಗೇಟ್‍ಗೆ ಕಬ್ಬಿಣದ ಸಲಾಕೆ ಜಡಿದು ಬಿಬಿಎಂಪಿ ಅಧಿಕಾರಿಗಳು ಸೀಲ್ ಮಾಡಿದ್ದಾರೆ ಎನ್ನಲಾಗಿದೆ.

ಫ್ರೇಜರ್ ಟೌನ್‍ನಲ್ಲಿ ನಿವಾಸಿಯೊಬ್ಬರ ಮನೆ ಬಾಗಿಲ ಮುಂದೆ ಸುಮಾರು 12 ಅಡಿ ಎತ್ತರದ ಕಬ್ಬಿಣದ ಸಲಾಕೆಗಳನ್ನ ಜೈಲಿನ ಸೆಲ್ ಮಾದರಿಯಲ್ಲಿ ಹಾಕಲಾಗಿದ್ದು, ಮನೆಯಿಂದ ಯಾರೂ ಹೊರ ಬರದಂತೆ ಬಂದ್ ಮಾಡಲಾಗಿದೆ.

ಇತ್ತೀಚೆಗಷ್ಟೇ ಮನೆಯ ಬಾಗಿಲಿಗೆ ತಗಡು ಶೀಟ್ ಹಾಕಿ ಸೀಲ್ ಮಾಡಿದ ಘಟನೆ ನಡೆದಿತ್ತು. ಬಳಿಕ ವ್ಯಾಪಕ ಆಕ್ರೋಶ ವ್ಯಕ್ತವಾದ ನಂತರ ಪಾಲಿಕೆ ಅಧಿಕಾರಿಗಳು ಅದನ್ನು ತೆರವು ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News