ಕಾಂಗ್ರೆಸ್ ಪೂರ್ವಾವಧಿ ಅಧ್ಯಕ್ಷರು ಅತ್ಯಗತ್ಯ: ಶಶಿ ತರೂರ್

Update: 2020-08-09 17:01 GMT

ಹೊಸದಿಲ್ಲಿ,ಆ.9: ಕಾಂಗ್ರೆಸ್ ಗೊತ್ತುಗುರಿಯಿಲ್ಲದೆ ಚುಕ್ಕಾಣಿಯಿಲ್ಲದ ನಾವೆಯಂತಾಗಿದೆ ಎಂಬ ಭಾವನೆ ಜನರಲ್ಲಿ ಬೆಳೆಯುತ್ತಿದ್ದು,ಇದಕ್ಕೆ ಕಡಿವಾಣ ಹಾಕಲು ಪೂರ್ಣಾವಧಿ ಅಧ್ಯಕ್ಷರನ್ನು ಹುಡುಕುವ ಪ್ರಕ್ರಿಯೆಯನ್ನು ಪಕ್ಷವು ತ್ವರಿತಗೊಳಿಸಲೇಬೇಕಾದ ಅಗತ್ಯವಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ರವಿವಾರ ಇಲ್ಲಿ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ರಾಹುಲ್ ಗಾಂಧಿಯವರಿಗೆ ಪಕ್ಷವನ್ನು ಮತ್ತೊಮ್ಮೆ ಮುನ್ನಡೆಸುವ ಸಾಮರ್ಥ್ಯವಿದೆ ಎನ್ನುವುದು ತನ್ನ ಖಚಿತ ಅಭಿಪ್ರಾಯವಾಗಿದೆ. ಆದರೆ ಅವರು ಅದಕ್ಕೊಪ್ಪದಿದ್ದರೆ ನೂತನ ಮುಖ್ಯಸ್ಥರ ಆಯ್ಕೆಗಾಗಿ ಪಕ್ಷವು ಕ್ರಮವನ್ನು ಕೈಗೊಳ್ಳಲೇಬೇಕು ಎಂದರು.

ಸೋನಿಯಾ ಗಾಂಧಿಯವರು ಪಕ್ಷದ ಮಧ್ಯಂತರ ಅಧ್ಯಕ್ಷೆಯಾಗಿ ಆ.10ಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿದ್ದು,ಅವರ ಉತ್ತರಾಧಿಕಾರಿಯನ್ನು ಪಕ್ಷವು ಇನ್ನೂ ಕಂಡುಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ತರೂರ್ ಹೇಳಿಕೆಯು ಮಹತ್ವವನ್ನು ಪಡೆದುಕೊಂಡಿದೆ.

“ನಮ್ಮ ನಾಯಕತ್ವವು ಮುನ್ನಡೆಯುತ್ತಿದೆ ಎಂಬ ಬಗ್ಗೆ ನಮಗೆ ಸ್ಪಷ್ಟತೆಯಿರಬೇಕು ಎಂದು ನಾನು ಖಚಿತವಾಗಿ ನಂಬಿದ್ದೇನೆ. ಕಳೆದ ವರ್ಷ ಮಧ್ಯಂತರ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿಯವರ ನೇಮಕವನ್ನು ನಾನು ಸ್ವಾಗತಿಸಿದ್ದೆ. ಆದರೆ ಅವರು ಈ ಹೊರೆಯನ್ನು ಅನಿರ್ದಿಷ್ಟಾವಧಿಗೆ ಹೊತ್ತು ಸಾಗಬೇಕು ಎಂದು ನಿರೀಕ್ಷಿಸುವುದು ನ್ಯಾಯವಲ್ಲ. ಜೊತೆಗೆ ಕಾಂಗ್ರೆಸ್ ಗೊತ್ತುಗುರಿ ಮತ್ತು ಚುಕ್ಕಾಣಿಯಿಲ್ಲದಂತಾಗಿದೆ ಹಾಗೂ ವಿಶ್ವಾಸಾರ್ಹ ರಾಷ್ಟ್ರೀಯ ಪ್ರತಿಪಕ್ಷವಾಗಿ ಸವಾಲನ್ನು ಎದುರಿಸಲು ಅಸಮರ್ಥವಾಗಿದೆ ಎಂದು ಸಾರ್ವಜನಿಕರಲ್ಲಿ ಹೆಚ್ಚುತ್ತಿರುವ ಅಭಿಪ್ರಾಯಕ್ಕೆ ನಾವು ಕಡಿವಾಣ ಹಾಕುವ ಅಗತ್ಯವಿದೆ. ಪೂರ್ಣಾವಧಿ ಅಧ್ಯಕ್ಷರನ್ನು ಕಂಡುಕೊಳ್ಳುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಮೂಲಕ ಕಾಂಗ್ರೆಸ್ ಇದನ್ನು ತುರ್ತಾಗಿ ಮಾಡುವ ಅಗತ್ಯವಿದೆ” ಎಂದು ತರೂರ್ ಹೇಳಿದರು.

ರಾಹುಲ್ ಮತ್ತೆ ಪಕ್ಷದ ಅಧ್ಯಕ್ಷರಾಗಬೇಕು ಎಂದು ಕಾಂಗ್ರೆಸ್‌ನಲ್ಲಿ ಹೆಚ್ಚುತ್ತಿರುವ ಆಗ್ರಹಗಳ ಕುರಿತು ಮತ್ತು ಅವರು ಮರಳಿದರೆ ಅದು ಸಾಧ್ಯವಿರುವ ಉತ್ತಮ ಪರಿಹಾರವಾಗಬಹುದೇ ಎಂದು ಕೇಳಿದಾಗ ತರೂರ್, ರಾಹುಲ್ ಮತ್ತೆ ಅಧಿಕಾರವನ್ನು ವಹಿಸಿಕೊಳ್ಳಲು ಸಿದ್ಧರಾದರೆ ಅವರು ತನ್ನ ರಾಜೀನಾಮೆಯನ್ನು ಹಿಂದೆಗೆದುಕೊಂಡರೆ ಸಾಕು. 2022,ಡಿಸೆಂಬರ್‌ವರೆಗಿನ ಅವಧಿಗಾಗಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು ಮತ್ತು ಅವರು ಪಕ್ಷದ ಚುಕ್ಕಾಣಿಯನ್ನು ಮತ್ತೆ ತನ್ನ ಕೈಗೆ ತೆಗೆದುಕೊಳ್ಳಬಹುದು. ಆದರೆ ಅವರು ಹಾಗೆ ಮಾಡದಿದ್ದರೆ ನೂತನ ಅಧ್ಯಕ್ಷರ ಆಯ್ಕೆಗಾಗಿ ಪಕ್ಷವು ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News