ಆರು ಮಂದಿ ಕೋವಿಡ್ ಸೋಂಕಿತರಿಗೆ ಪ್ಲಾಸ್ಮಾ ದಾನ ಮಾಡಿದ ಬೆಂಗಳೂರಿನ ವ್ಯಕ್ತಿ

Update: 2020-08-09 17:04 GMT

ಬೆಂಗಳೂರು, ಆ.9: ಇಲ್ಲಿನ ರಾಜಾಜಿನಗರ ನಿವಾಸಿ ಕುನಾಲ್ ಕಳೆದ ಎಪ್ರಿಲ್‍ನಲ್ಲಿ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದರು. ಅಲ್ಲಿಂದ ಈವರೆಗೆ ಆರು ಮಂದಿ ಕೋವಿಡ್ ಸೋಂಕಿತರಿಗೆ ತಮ್ಮ ಪ್ಲಾಸ್ಮಾ ದಾನ ಮಾಡಿದ್ದಾರೆ.

ಸ್ಕಾಟ್‍ಲ್ಯಾಂಡ್ ರಾಜಧಾನಿ ಎಡಿನ್‍ಬರ್ಗ್ ನಲ್ಲಿರುವ ನಾಪಿಯರ್ ವಿಶ್ವವಿದ್ಯಾಲಯದಲ್ಲಿ ಅಂತರ್‍ರಾಷ್ಟ್ರೀಯ ವ್ಯಾವಹಾರಿಕ ನಿರ್ವಹಣೆ(ಇಂಟರ್‍ನ್ಯಾಷನಲ್ ಬ್ಯುಸಿನೆಸ್) ವಿಷಯದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿರುವ ಕುನಾಲ್, ಮಾರ್ಚ್ ತಿಂಗಳ ಅಂತ್ಯಕ್ಕೆ ಬೆಂಗಳೂರಿಗೆ ಆಗಮಿಸಿ, ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದರು.

ಆನಂತರ, ಕುನಾಲ್ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು ಪಾಸಿಟಿವ್ ವರದಿ ಬಂದಿತ್ತು. ಅವರನ್ನು ಮಲ್ಲೇಶ್ವರಂನಲ್ಲಿರುವ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಸಂಪೂರ್ಣ ಗುಣಮುಖರಾದ ನಂತರ ಅವರು ಆಸ್ಪತ್ರೆಗೆ ಬಿಡುಗಡೆಯಾಗಿದ್ದರು.

ಇದೇ ವೇಳೆ ಅವರ ಕೆಲವು ಸ್ನೇಹಿತರು ಕೋವಿಡ್ ಸೋಂಕಿನಿಂದ ಗುಣಮುಖರಾದವರು ತಮ್ಮ ಪ್ಲಾಸ್ಮಾ ದಾನ ಮಾಡುವ ಮೂಲಕ ಇತರ ರೋಗಿಗಳ ಚಿಕಿತ್ಸೆಗೆ ಯಾವ ರೀತಿ ನೆರವಾಗಬಹುದು ಎಂಬ ವರದಿಗಳನ್ನು ಕುನಾಲ್ ಜೊತೆ ಹಂಚಿಕೊಂಡಿದ್ದರು. ಅದನ್ನು ಗಮನಿಸಿದ ಕುನಾಲ್, ಕೆ.ಸಿ.ಜನರಲ್ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿ, ಅಗತ್ಯವಿದ್ದಲ್ಲಿ ತಮ್ಮ ಪ್ಲಾಸ್ಮಾ ದಾನ ಮಾಡುವುದಾಗಿ ಹೇಳಿದ್ದರು. ಅದರಂತೆ ಜೂನ್ ತಿಂಗಳಲ್ಲಿ ಮೊದಲ ಬಾರಿ ಅವರು ಪ್ಲಾಸ್ಮಾ ದಾನ ಮಾಡಿದ್ದರು.

ಎಚ್‍ಸಿಜಿ ಕ್ಯಾನ್ಸರ್ ಆಸ್ಪತ್ರೆಯ ವೈದ್ಯೆ ಡಾ.ಶಾಲಿನಿ ಠಾಕೂರ್, ತಮ್ಮ ಆಸ್ಪತ್ರೆಯ ರೋಗಿಯೊಬ್ಬರಿಗೆ ಪ್ಲಾಸ್ಮಾ ಅಗತ್ಯವಿರುವುದನ್ನು ಗಮನಿಸಿ ಕುನಾಲ್‍ಗೆ ಕರೆ ಮಾಡಿದ್ದರು. ಪ್ಲಾಸ್ಮಾ ದಾನ ಮಾಡಲು ಕುನಾಲ್ ಸಿದ್ಧವಿದ್ದರೂ, ಅವರ ಪೋಷಕರು ಇದಕ್ಕೆ ಸಹಮತ ವ್ಯಕ್ತಪಡಿಸಿರಲಿಲ್ಲ. ನಂತರ, ಕುನಾಲ್, ತಮ್ಮ ಪೋಷಕರ ಮನವೊಲಿಸುವಂತೆ ಡಾ.ಶಾಲಿನಿಗೆ ತಿಳಿಸಿದ್ದರು. ಅಲ್ಲಿಂದ ನಿರಂತರವಾಗಿ ಕುನಾಲ್ ಆರು ಮಂದಿ ತಮ್ಮ ಪ್ಲಾಸ್ಮಾ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News