ಅಪೌಷ್ಟಿಕತೆಯ ಶಾಪ- ರೋಗಪೀಡಿತ ಭವಿಷ್ಯ

Update: 2020-08-10 06:16 GMT

ಅಪೌಷ್ಟಿಕತೆ ಸರ್ವ ರೋಗಗಳ ತಾಯಿ. ಭಾರತದಲ್ಲಿ ಶೇ. 45ಕ್ಕೂ ಅಧಿಕ ಮಂದಿ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ ಎನ್ನುವುದನ್ನು ಸ್ವತಃ ಸರಕಾರವೇ ಈ ಹಿಂದೆ ಒಪ್ಪಿಕೊಂಡಿತ್ತು. ಕೊರೋನೋತ್ತರ ಭಾರತದ ಭವಿಷ್ಯ ಈ ಅತಿ ದೊಡ್ಡ ಈ ಅಪೌಷ್ಟಿಕತೆಯನ್ನು ಗೆಲ್ಲುವುದರಲ್ಲಿ ನಿಂತಿದೆ. ಲಾಕ್‌ಡೌನ್ ಭಾರತದ ಜನಜೀವನದ ಮೇಲೆ ಎಂತಹ ಪ್ರಹಾರ ನೀಡಿದೆಯೆಂದರೆ, ಈ ಅಪೌಷ್ಟಿಕತೆಯನ್ನು ದುಪ್ಪಟ್ಟುಗೊಳಿಸಿದೆ. ನಿರುದ್ಯೋಗಗಳ ಹೆಚ್ಚಳದಿಂದಾಗಿ ಬಡತನ ಹೆಚ್ಚಳವಾಗಿದೆ. ಇದರ ನೇರ ಬಲಿಪಶುಗಳು ಮಕ್ಕಳಾಗಿದ್ದಾರೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎನ್ನುವ ಮಾತಿನ ಆಧಾರದಲ್ಲಿ ಹೇಳುವುದಾದರೆ, ನಾವು ಅನಾರೋಗ್ಯಪೀಡಿತ ಭಾರತವೊಂದನ್ನು ನಿರ್ಮಾಣ ಮಾಡುವುದಕ್ಕೆ ಹೊರಟಿದ್ದೇವೆ. ಕೊರೋನಾ ಮುನ್ನೆಲೆಗೆ ಬಂದ ಅನಂತರ ಇತರೆಲ್ಲ ಅನಾರೋಗ್ಯ ತೀವ್ರ ನಿರ್ಲಕ್ಷಕ್ಕೊಳಗಾಗಿವೆ. ಭಾರತದಲ್ಲಿ ಕೋಟ್ಯಂತರ ಮಕ್ಕಳ ಮೇಲೆ ಇದು ದುಷ್ಪರಿಣಾಮ ಬೀರಿವೆ. ಮಕ್ಕಳ ದೀರ್ಘಕಾಲದ ಅಪೌಷ್ಟಿಕತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಭಾರತದಲ್ಲಿ ಯಾವುದೇ ದೊಡ್ಡ ಮಟ್ಟದ ಸಾಧನೆಯಾಗಿಲ್ಲ. 119 ದೇಶಗಳ ಜಾಗತಿಕ ಹಸಿವು ಸೂಚ್ಯಂಕದಲ್ಲಿಯೂ ಭಾರತದ ಸ್ಥಾನ ಕುಸಿದಿದ್ದು, 100ನೇ ರ್ಯಾಂಕ್‌ನಲ್ಲಿದೆ. ಭಾರತವು ಮಕ್ಕಳ ಪೌಷ್ಟಿಕತೆಸೂಚ್ಯಂಕದಲ್ಲಿಯೂ ಕಳಪೆ ಸಾಧನೆ ಮಾಡಿದೆ ಹಾಗೂ ಬುಡಕಟ್ಟು ಪ್ರದೇಶಗಳಲ್ಲಂತೂ ಅಪೌಷ್ಟಿಕತೆಯಿಂದ ಮಕ್ಕಳು ಸಾವನ್ನಪ್ಪಿರುವ ಪ್ರಕರಣಗಳಿಗೆ ಲೆಕ್ಕವಿಲ್ಲ.

ಜಗತ್ತಿನ ಜನಸಂಖ್ಯೆಯ ಶೇ.17ರಷ್ಟು ಮಂದಿ ಭಾರತದಲ್ಲೇ ಇದ್ದಾರೆ ಹಾಗೂ ಜಗತ್ತಿನ ಒಟ್ಟು ಹಸಿದವರ ಪೈಕಿ ಶೇ.25ರಷ್ಟು ಮಂದಿಗೆ ಭಾರತ ತವರಾಗಿದೆ. ಆಹಾರಧಾನ್ಯ ಉತ್ಪಾದನೆಯಲ್ಲಿ ಭಾರತವು ಉತ್ತೇಜನಕಾರಿ ಸಾಧನೆಯನ್ನು ಮಾಡಿದೆಯಾದರೂ ಹಸಿವಿನ ಸಮಸ್ಯೆಯ ನಿವಾರಣೆಯಲ್ಲಿ ಯಾವುದೇ ಗಣನೀಯವಾದ ಸುಧಾರಣೆಯಾಗಿಲ್ಲ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) 2017ರಲ್ಲಿ ಪ್ರಕಟಿಸಿದ ವರದಿಯು ಅತ್ಯಂತ ಆತಂಕದ ಚಿತ್ರಣವನ್ನು ನಮ್ಮ ಮುಂದಿಡುತ್ತ್ತದೆ. ಭಾರತದಲ್ಲಿ 19.70 ಕೋಟಿ ಮಂದಿ ಅಥವಾ ದೇಶದ ಶೇ.14.4ರಷ್ಟು ಜನರು ಪೌಷ್ಟಿಕಾಂಶದ ಕೊರತೆಯನ್ನು ಎದುರಿಸುತ್ತಿದ್ದಾರೆ. ಆಹಾರ ಭದ್ರತೆಯ ಕೊರತೆಯ ಕಾರಣದಿಂದಾಗಿ ದೇಶದಲ್ಲಿ ಭಾರೀ ಸಂಖ್ಯೆಯ ಭಾರತೀಯ ಮಹಿಳೆಯರು ಹಾಗೂ ಮಕ್ಕಳ ಆರೋಗ್ಯಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಸ್ತ್ರೀಯರಿಗೆ ಹದಿಹರೆಯದಲ್ಲಿ ಹಾಗೂ ಗರ್ಭಧಾರಣೆ ಮತ್ತು ಶಿಶುವಿಗೆ ಎದೆಹಾಲುಣಿಸುವಿಕೆಯ ಸಮಯದಲ್ಲಿ ನಿರ್ದಿಷ್ಟ ಪೌಷ್ಟಿಕಾಂಶಗಳ ಅಗತ್ಯವಿದೆ. ಹೀಗಾಗಿ ಅಪೌಷ್ಟಿಕತೆಯು ಪುರುಷರಿಗಿಂತಲೂ ಹೆಚ್ಚಾಗಿ ಮಹಿಳೆಯರ ಮೇಲೆ ಹೆಚ್ಚು ದುಷ್ಪರಿಣಾಮವನ್ನುಂಟು ಮಾಡುತ್ತ್ತಿದೆ.

ಜಗತ್ತಿನ ಅತ್ಯಧಿಕ ಎಮ್ಮೆ ಸಂಕುಲವಿರುವ ಭಾರತವು ಹಾಲು ಉತ್ಪಾದನೆ ಯಲ್ಲಿಯೂ ಮುಂಚೂಣಿಯಲ್ಲಿದೆ.ಅಷ್ಟೇ ಅಲ್ಲದೆ ತರಕಾರಿ, ಹಣ್ಣು ಹಂಪಲು ಹಾಗೂ ಮೀನಿನ ಉತ್ಪಾದನೆಯಲ್ಲೂ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ. ಆದಾಗ್ಯೂ ದೇಶದ ಮೂರನೇ ಒಂದರಷ್ಟು ವಯಸ್ಕರ ದೈಹಿಕ ಸಾಂಧ್ರತೆ ಸೂಚ್ಯಂಕ (ಬಿಎಂಐ)ವು ಸಾಮಾನ್ಯಕ್ಕಿಂತ ಕೆಳಮಟ್ಟದಲ್ಲಿದೆ. ಯಾಕೆಂದರೆ ಅವರಿಗೆ ಉಣ್ಣಲು ಸಾಕಷ್ಟು ಆಹಾರ ಅದರಲ್ಲೂ ಪೌಷ್ಟಿಕ ಆಹಾರ ದೊರೆಯುತ್ತಿಲ್ಲವೆಂಬುದು ಘೋರ ವಾಸ್ತವವಾಗಿದೆ.ಭಾರತದಲ್ಲಿ ಪ್ರತಿ ದಿನವೂ 3 ಸಾವಿರಕ್ಕೂ ಅಧಿಕ ಮಕ್ಕಳು ಕಳಪೆ ಆಹಾರಕ್ಕೆ ಸಂಬಂಧಿಸಿದ ಅನಾರೋಗ್ಯದಿಂದ ಸಾವನ್ನಪ್ಪುತ್ತಿದ್ದಾರೆ. ಭಾರತದ ಈ ಪರಿಸ್ಥಿತಿ ಆಫ್ರಿಕದ ಸಹಾರಾ ಪ್ರದೇಶದ ರಾಷ್ಟ್ರಗಳಿಗಿಂತಲೂ ಶೋಚನೀಯವಾಗಿದೆ. ಉತ್ತಮ ಗುಣಮಟ್ಟದ ಆಹಾರದ ಅಭಾವ, ಕಳಪೆ ಆರೋಗ್ಯ ಪಾಲನೆ, ಆಹಾರ ಉಣಿಸುವಿಕೆ, ಅಸಮರ್ಪಕ ನೀರಿನ ಪೂರೈಕೆ, ನೈರ್ಮಲ್ಯ ಹಾಗೂ ಆರೋಗ್ಯ ಸೇವೆಗಳಲ್ಲಿನ ಕೊರತೆ ಇದಕ್ಕೆ ಕಾರಣವಾಗಿದೆ. ಭಾರತದಲ್ಲಿನ ಬಹುತೇಕ ಮಕ್ಕಳ ತಾಯಂದಿರು ಅನಿಮಿಯಾ ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

ಭಾರತದ ಶೇ.33.6ರಷ್ಟು ಮಕ್ಕಳು ದೀರ್ಘಾವಧಿಯ ಅಪೌಷ್ಟಿಕತೆಯಿಂದ ಬಳಲುತ್ತಿದ್ದರೆ, ಶೇ.55ರಷ್ಟು ಮಂದಿ ಚಿಣ್ಣರಿಗೆ ರಕ್ತ ಹೀನತೆಯ ತೊಂದರೆಯಿದೆ. ದೇಶದ ಜನತೆಯ ಅನಿಮಿಯಾ ಸಮಸ್ಯೆಯಿಂದಾಗಿ ಭಾರತದ ಒಟ್ಟು ಆಂತರಿಕ ಉತ್ಪನ್ನಕ್ಕೆ 1.50 ಲಕ್ಷ ಕೋಟಿ ರೂ. ನಷ್ಟವಾಗುತ್ತಿದೆಯೆಂದು ಅಂದಾಜಿಸಲಾಗಿದೆ. ಅಂದರೆ, 2017-18ರ ಸಾಲಿನ ಬಜೆಟ್‌ನಲ್ಲಿ ಆರೋಗ್ಯಕ್ಕೆ ಮೀಸಲಾಗಿಟ್ಟಿದ್ದ ಅನುದಾನಕ್ಕಿಂತ ಇದು ಮೂರು ಪಟ್ಟು ಅಧಿಕವಾಗಿದೆ. ಅಪೌಷ್ಟಿಕತೆ ಸಮಸ್ಯೆಯ ನಿವಾರಣೆಗಾಗಿ ಭಾರತ ಸರಕಾರವು ಈಗಾಗಲೇ ಸಮಗ್ರ ಶಿಶು ವಿಕಸನ ಸೇವೆ (ಐಸಿಡಿಎಸ್) ಹಾಗೂ ರಾಷ್ಟ್ರೀಯ ಆರೋಗ್ಯ ಮಿಶನ್ ಎಂಬ ಎರಡು ಬೃಹತ್ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಆದಾಗ್ಯೂ ಈ ಯೋಜನೆಗಳು ಜನಸಾಮಾನ್ಯರನ್ನು ತಲುಪಿಲ್ಲ. ಅದಕ್ಷತೆ ಹಾಗೂ ಭ್ರಷ್ಟಾಚಾರದಿಂದಾಗಿ ಅವು ತಮ್ಮ ಗುರಿಯನ್ನು ಸಾಧಿಸುವಲ್ಲಿ ವಿಫಲವಾಗಿವೆ. ಶೇ. 40ರಷ್ಟು ಸಬ್ಸಿಡಿ ಆಹಾರವು ಈಗಲೂ ನೈಜ ಫಲಾನುಭವಿಗಳಿಗೆ ದೊರೆಯು ತ್ತಿಲ್ಲವೆಂದು ಕೆಲವು ವಿಶ್ಲೇಷಕರು ಅಂದಾಜಿಸಿದ್ದಾರೆ.

ಕೇಂದ್ರ ಸರಕಾರದ ಚಿಂತನ ಸಂಸ್ಥೆ ಯಾದ ನೀತಿ ಆಯೋಗವು 2030ರೊಳಗೆ ದೇಶದಲ್ಲಿ ಅಪೌಷ್ಟಿಕತೆಯನ್ನು ನಿವಾರಿಸುವ ಉದ್ದೇಶ ಹೊಂದಿರುವ ರಾಷ್ಟ್ರೀಯ ಪೌಷ್ಟಿಕ ಕಾರ್ಯತಂತ್ರದ ಕರಡನ್ನು ಸಿದ್ಧಪಡಿಸಿದೆ. 3 ವರ್ಷದೊಳಗಿನ ಮಕ್ಕಳ ಅಪೌಷ್ಟಿಕತೆಯನ್ನು 2022ರೊಳಗೆ ಶೇ.3ಕ್ಕೆ ಇಳಿಸುವುದು, ಕಿರಿಯ ವಯಸ್ಸಿನ ಮಕ್ಕಳು ಹಾಗೂ 15ರಿಂದ 49 ವರ್ಷ ವಯಸ್ಸಿನೊಳಗಿನ ಸ್ತ್ರೀಯರಲ್ಲಿ ಕಂಡುಬರುವ ಅನಿಮಿಯಾ (ರಕ್ತಹೀನತೆ)ಯ ಸಮಸ್ಯೆಯನ್ನು ಕಡಿಮೆಗೊಳಿಸುವ ಬಗ್ಗೆ ನೀತಿ ಆಯೋಗವು ಶಿಫಾರಸು ಮಾಡಿದೆ. ಆದರೆ ಸದ್ಯದ ಆರ್ಥಿಕ ಹಿಂಜರಿತ, ನೀತಿ ಆಯೋಗದ ಗುರಿಯನ್ನು ವಿಫಲಗೊಳಿಸುವುದರಲ್ಲಿ ಅನುಮಾನವೇ ಇಲ್ಲ. ಸರಕಾರ ತನ್ನ ವೈಫಲ್ಯವನ್ನು ಮುಚ್ಚಿ ಹಾಕಲು ಪಟೇಲ್ ಪ್ರತಿಮೆ, ರಾಮಮಂದಿರ ಇಂತಹ ಕಾರ್ಯಕ್ರಮಗಳ ಮೂಲಕ ಜನರನ್ನು ವಿಸ್ಮತಿಗೆ ತಳ್ಳುತ್ತಿದೆ. ಭವಿಷ್ಯದ ಭಾರತ ದೇವಸ್ಥಾನ, ಮಸೀದಿ, ಪ್ರತಿಮೆಗಳಲ್ಲಿ ಇಲ್ಲ. ಅದು ನಮ್ಮ ಎಳೆ ಮಕ್ಕಳ ಆರೋಗ್ಯದ ಮೇಲೆ ನಿಂತಿದೆ. ಸರಕಾರ ಈ ಬಗ್ಗೆ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News